ಬಿಜೆಪಿಗೆ ಕೆ.ಬಿ. ಶಾಣಪ್ಪ, ಪ್ಯಾಟಿ ಗುಡ್ ಬೈ

ಕಲಬುರಗಿ: ಮಾಜಿ ಸಚಿವ ಮತ್ತು ರಾಜ್ಯಸಭೆ ಮಾಜಿ ನಾಯಕ ಕೆ.ಬಿ. ಶಾಣಪ್ಪ ಮತ್ತು ಕಲಬುರಗಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಾಮರಾವ್ ಪ್ಯಾಟಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಲೋಕಸಭೆಗೆ ಸ್ಪರ್ಧಿಸಲು ಪಕ್ಷದಲ್ಲಿಯೇ ಸಮರ್ಥ ನಾಯಕರಿದ್ದರೂ ಕಾಂಗ್ರೆಸ್ಸಿನ ಶಾಸಕ ಡಾ. ಉಮೇಶ ಜಾಧವ ಅವರನ್ನು ಕರೆ ತಂದ ವರಿಷ್ಠರ ಮತ್ತು ರಾಜ್ಯ ನಾಯಕರ ನಡೆ ತಮಗೆ ಬೇಸರ ತರಿಸಿದೆ. ಹೀಗಾಗಿ ಆ ಪಕ್ಷದಲ್ಲಿ ಮುಂದುವರಿಯುವುದು ತಮಗೆ ಆಗುವುದಿಲ್ಲ. ಅಂತಲೇ ಪಕ್ಷವನ್ನು ತೊರೆದಿದ್ದೇನೆ ಎಂದು ಕಲಬುರಗಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಶಾಣಪ್ಪ, ಪ್ಯಾಟಿ ತಮ್ಮ ರಾಜೀನಾಮೆ ವಿಷಯ ಸ್ಪಷ್ಟಪಡಿಸಿದರು.
ಡಾ ಜಾಧವ ಬಿಜೆಪಿಗೆ ಬರುತ್ತಾರೆ. ಅವರನ್ನು ನಾವು ಕಣಕ್ಕೆ ಇಳಿಸುತ್ತೇವೆ ಎಂದು ಯಾವೊಬ್ಬ ನಾಯಕರೂ ನಮ್ಮ ಜಿಲ್ಲೆ ನಾಯಕರೊಂದಿಗೆ ಚರ್ಚಿಸಿಲ್ಲ. ಅಲ್ಲದೇ ಪಕ್ಷದಲ್ಲಿಯೇ ಹಿರಿಯ ನಾಯಕರಿದ್ದರೂ ಅವರನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರು ಸಿದ್ಧರಿಲ್ಲ ಎಂದು ಶಾಣಪ್ಪ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ನಾಯಕರು ನನಗೆ ಹೆಚ್ಚಿನ ಗೌರವ ನೀಡಿದ್ದಾರೆ. ಅದರೆ, ಬಿಜೆಪಿ ಅಧ್ಯಕ್ಷರಾಗಿರುವ ಯಡಿಯೂರಪ್ಪ ಇತರರು ಈ ವಿಷಯದಲ್ಲಿ ಸೌಜನ್ಯಕ್ಕೂ ಅಭಿಪ್ರಾಯ ಕೇಳಲಿಲ್ಲ. ಹೊರಗಿನವರಿಗೆ ಮಣೆ ಹಾಕುವ ಅಗತ್ಯವೇನಿತ್ತು ? ಈ ಬೆಳವಣಿಗೆ ತೀವ್ರ ನೋವು ಮೂಡಿಸಿದೆ. ಇದರಿಂದಾಗಿ ಬಿಜೆಪಿಗೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಮ್ಮ ನಿರ್ಧಾರ ಪ್ರಕಟಿಸಿದರು.
ನನಗೆ ಚುನಾವಣೆಗೆ ನಿಲ್ಲುವ ಶಕ್ತಿಯಿಲ್ಲ, ಸೌಜನ್ಯಕ್ಕಾದರೂ ಯಡಿಯೂರಪ್ಪ ಇತರರು ಕಲಬುರಗಿಯಲ್ಲಿ ಹೇಗೆ ಮಾಡಿದರೆ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬಹುದು ಎಂಬುದು ಚರ್ಚಿಸಬಹುದಿತ್ತು. ಅದು ಮಾಡಲಿಲ್ಲ. ಸಭೆಗಳಿಗೂ ಸಹ ಕರೆಯಲಿಲ್ಲ ಎಂದು ಕೆಂಡ ಕಾರಿದರು. ತಾವೂ ಸಹ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಸುದ್ದಿಗೋಷ್ಟಿಯಲ್ಲಿದ್ದ ಶಾಮರಾವ ಪ್ಯಾಟಿ ಹೇಳಿ ಮುಂದಿನ ಹೆಜ್ಜೆ ಕುರಿತು ಭಾನುವಾರ ತಮ್ಮ ಹಾಗೂ ಕೆ.ಬಿ.ಶಾಣಪ್ಪನವರ ಬೆಂಬಲಿಗರ ಜತೆಗೂಡಿ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ವಿನೋದ ಕೆ.ಬಿ ಇತರರಿದ್ದರು.
ಚಲವಾದಿ, ಮಾದಿಗರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ: ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕ ಭಾಗದಲ್ಲಿ ಬಿಜೆಪಿಯವರು ಚಲವಾದಿ, ಮಾದಿಗ ಸಮುದಾಯದ ಒಬ್ಬರಿಗೂ ಟಿಕೆಟ್ ನೀಡಲಿಲ್ಲ. ಪಕ್ಷವು ಅಸ್ಪಶ್ಯ ಸಮುದಾಯವನ್ನು ಕಡೆಗಣಿಸಿದೆ. ಭೋವಿ, ಲಂಬಾಣಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ನಮ್ಮನ್ನು ತುಳಿಯಲಾಗುತ್ತಿದೆ ಎಂದು ಕೆ.ಬಿ.ಶಾಣಪ್ಪ ಹೇಳಿದರು.

ಜಾಧವರದು ಅನೈತಿಕ ರಾಜಕೀಯ

ಕಲಬುರಗಿ: ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಉಮೇಶ್ ಜಾಧವ್ ತರಾತುರಿಯಲ್ಲಿ ಬಿಜೆಪಿ ಸೇರುವ ಮೂಲಕ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಧವ್ ಕಾಂಗ್ರೆಸ್ಸಿನ ಚುನಾಯಿತ ಶಾಸಕರು. ಎರಡನೇ ಬಾರಿ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದಾಗ್ಯೂ, ಯಾವುದೇ ಸಕಾರಣವಿಲ್ಲದೇ ತರಾತುರಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು ಸರಿಯಲ್ಲ ಎಂದು ಅವರು ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಆಗಮಿಸುವ ಮುನ್ನವೇ ಡಾ. ಜಾಧವ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಆಗ ಅವರು ಇನ್ನೂ ಕಾಂಗ್ರೆಸ್ ಶಾಸಕರು ಎಂಬುದನ್ನು ಮರೆತರು. ಅಲ್ಲದೇ ನಾನೇ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿ ಎನ್ನುವ ರೀತಿಯಲ್ಲಿ ಪ್ರಧಾನಿ ಸಮಾವೇಶದಲ್ಲಿ ಮಾತನಾಡಿದರು.