ಶಿವಮೊಗ್ಗ : ಕನ್ನಡದ ಉಳಿವಿಗಾಗಿ ಅನೇಕ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ. ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೋರಾಟಗಳು ನಡೆಯುತ್ತವೆ. ಗೋಕಾಕ್ ಚಳವಳಿಯ ನೆನಪು ಇಂದಿಗೂ ಅಮರವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಮಂಗಳವಾರ ನಗರಕ್ಕೆ ಆಗಮಿಸಿದ ಕನ್ನಡಜ್ಯೋತಿ ರಥಯಾತ್ರೆಯನ್ನು ಶಿವಪ್ಪನಾಯಕ ವೃತ್ತದಲ್ಲಿ ಸ್ವಾಗತಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿದರೆ ಮಾತ್ರ ಕನ್ನಡಿಗರು ಉಳಿಯಲು ಸಾಧ್ಯ. ಕನ್ನಡದ ಉಳಿವಿಗಾಗಿ ಹೋರಾಡಿದ ಹೋರಾಟಗಾರರನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು.
ಕನ್ನಡ ಒಂದು ಭಾಷೆ ಮಾತ್ರವಲ್ಲ. ಅದು ನಮ್ಮ ಬದುಕು. ಕವಿಗಳು, ಸಾಹಿತಿಗಳ ಮೂಲಕ ಅಕ್ಷರ ರೂಪದಲ್ಲಿ ಕನ್ನಡ ಭಾಷೆ ಜೀವಂತವಾಗಿದೆ. ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಓದುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡಜ್ಯೋತಿ ರಥಯಾತ್ರೆ ನಡೆಸುತ್ತಿದೆ. ನೆಲ, ಜಲ, ನಾಡು, ನುಡಿ ವಿಷಯ ಬಂದಾಗ ಎಲ್ಲರೂ ಒಂದಾಗಿ ಹೋರಾಡಬೇಕು ಎಂದರು.
ಕನ್ನಡಜ್ಯೋತಿ ರಥಯಾತ್ರೆ ಶಿವಪ್ಪ ನಾಯಕ ವೃತ್ತದಿಂದ ಸೀನಪ್ಪ ಶೆಟ್ಟಿ ವೃತ್ತ ಮಾರ್ಗವಾಗಿ ಮಹಾವೀರ ವೃತ್ತ ಕುವೆಂಪು ರಂಗಮ ಮಂದಿರದವರೆಗೆ ಸಾಗಿತು. ಮಹಿಳಾ ಮತ್ತು ಪುರುಷರ ಡೊಳ್ಳು ತಂಡ ಹಾಗೂ ಇತರ ಕಲಾಮೇಳಗಳು ಮೆರವಣಿಗೆಯಲ್ಲಿ ಸಾಗಿದವು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ, ತಹಸೀಲ್ದಾರ್ ಗಿರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ ಮಂಜುನಾಥ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮುಂತಾದವರು ಈ ಸಂದರ್ಭದಲ್ಲಿದ್ದರು.