ಎನ್​ಡಿಎಯೇತರ ಪಕ್ಷಗಳ ಶಕ್ತಿವೃದ್ಧಿ

ಬೆಂಗಳೂರು: ಕೇಂದ್ರದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಪರ್ಯಾಯ ವಾಗಿ ರಾಜಕೀಯ ಶಕ್ತಿ ವೃದ್ಧಿಗೊಳಿಸಲು ಸಿಎಂ ಕುಮಾರಸ್ವಾಮಿ ಹಾಗೂ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಶುಕ್ರವಾರ ವಿಜಯವಾಡದಲ್ಲಿ ಮಹತ್ವದ ಮಾತುಕತೆ ನಡೆಸಿದರು.

ವಿಜಯವಾಡದ ಪ್ರಸಿದ್ಧ ದೇವಸ್ಥಾನಕ್ಕೆ ತೆರಳಿದ್ದ ಎಚ್​ಡಿಕೆ ತಂಗಿದ್ದ ಹೋಟೆಲ್​ಗೆ ಭೇಟಿ ನೀಡಿದ ಚಂದ್ರಬಾಬು, ಸುಮಾರು 40 ನಿಮಿಷಗಳ ಕಾಲ ವಿಚಾರ ವಿನಿಮಯ ಮಾಡಿಕೊಂಡರು. ಭೇಟಿ ಬಳಿಕ ಆಂಧ್ರ ಸಿಎಂ ಕಚೇರಿಯಿಂದ ಪತ್ರಿಕಾ ಪ್ರಕಟಣೆ ನೀಡಿದ್ದು, ದಕ್ಷಿಣ ಭಾರತದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಉದ್ದೇಶವನ್ನು ಉಭಯ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ.

ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಮುಂದೆ ಪ್ರಧಾನಮಂತ್ರಿ ಯಾರಾಗುತ್ತಾರೆ ಎಂಬುದು ಚರ್ಚೆಯ ವಿಷಯವಲ್ಲ. ದಕ್ಷಿಣ ಭಾರತದ ಎಲ್ಲ ಪ್ರಾದೇಶಿಕ ಪಕ್ಷಗಳು ಒಂದೇ ವೇದಿಕೆಯಲ್ಲಿ ನಿಲ್ಲಬೇಕು ಎಂಬುದು ಆದ್ಯತೆಯಾಗಿದೆ ಎಂದರು.

ನಿಖಿಲ್​ಗೆ ಹೆಣ್ಣು ನೋಡಲು ಕುಮಾರಸ್ವಾಮಿ ದಂಪತಿ ಹೋಗಿದ್ದಾರೆ. ಅದೊಂದು ವೈಯಕ್ತಿಕ ವಿಚಾರ. ಒಂದು ವೇಳೆ ಹುಡುಗಿ ಒಪ್ಪಿಗೆ ಯಾದರೆ ಮದುವೆ ಮಾಡಿಸೋಣ.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

ಪುತ್ರನಿಗೆ ವಿಜಯವಾಡದಲ್ಲಿ ಹೆಣ್ಣು ಹುಡುಕಿದ ಸಿಎಂ!

ಮುಖ್ಯಮಂತ್ರಿ ಕುಮಾರಸ್ವಾಮಿ, ಅನಿತಾ ಅವರು ಪುತ್ರ ನಿಖಿಲ್​ಗೆ ಆಂಧ್ರಪ್ರದೇಶದ ಉದ್ಯಮಿ ಕೋಟೇಶ್ವರ ರಾವ್ ಪುತ್ರಿಯನ್ನು ಮದುವೆ ಮಾಡಿಸುವ ಸಂಬಂಧ ಶುಕ್ರವಾರ ಮಾತುಕತೆ ನಡೆಸಿದರು. ವಿಜಯವಾಡದ ಇಂದ್ರಕೀಲಾದ್ರಿಯಲ್ಲಿರುವ ಐತಿಹಾಸಿಕ ಕನಕದುರ್ಗ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ದಂಪತಿ, ನಂತರ ಕೋಟೇಶ್ವರ್ ರಾವ್ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ ಈ ಬೆಳವಣಿಗೆ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿಎಂ, ‘ನಿಖಿಲ್​ಕುಮಾರ್ ಮದುವೆ ಮಾತುಕತೆಗೆ ಹೋಗಿರುವುದು ಸುಳ್ಳು. ಅದೊಂದು ವದಂತಿ’ ಎಂದಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ದೇಶಪಾಂಡೆ ಅರ್ಹರು

ಬೆಂಗಳೂರು: ಧರಂಸಿಂಗ್ ಸಿಎಂ ಆಗುವ ಸಂದರ್ಭದಲ್ಲೇ ಆ ಹುದ್ದೆಗೆ ಆರ್.ವಿ.ದೇಶಪಾಂಡೆ ಹೆಸರು ಕೇಳಿ ಬಂದಿತ್ತು. ಅವರೂ ಅನುಭವಿ ರಾಜಕಾರಣಿ. ಕೈಗಾರಿಕಾ ಸಚಿವರಾಗಿ ಸಾಕಷ್ಟು ಅನುಭವ ಪಡೆದಿದ್ದಾರೆ. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ನಾವಿಬ್ಬರೂ ಸಚಿವರಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ಈಗ ಮತ್ತೆ ಮುಂಚೂಣಿಗೆ ಬಂದಿದೆ. ಅದರಲ್ಲಿ ತಪ್ಪೇನಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.

ಬ್ರಿಟಿಷ್ ಹೈಕಮಿಷನರ್ ಡೊನಾಲ್ಡ್ ಮೈಕ್ ಅಲಿಸ್ಟರ್ ಶುಕ್ರವಾರ ಬೆಳಗ್ಗೆ ಪದ್ಮನಾಭನಗರದ ನಿವಾಸದಲ್ಲಿ ಗೌಡರ ಜತೆ ನಡೆದ ಸೌಹಾರ್ದಯುತ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೆದುರು ಗೌಡರು ಮಾತನಾಡಿ, ಅಲಿಸ್ಟರ್ ಸೌಜನ್ಯದ ಭೇಟಿಗಾಗಿ ಬಂದಿದ್ದರು. ಈ ವೇಳೆ ರಾಜ್ಯದ ಮೈತ್ರಿ ಸರ್ಕಾರದ ಗೊಂದಲಗಳ ಬಗ್ಗೆ ಅವರು ಪ್ರಶ್ನಿಸಿದರು. ಗೊಂದಲಗಳೆಲ್ಲ ನಿವಾರಣೆಯಾಗಿವೆ ಎಂದು ನಾನೇ ಖುದ್ದಾಗಿ ಮಾಹಿತಿ ನೀಡಿದ್ದೇನೆ ಎಂದರು.

ಜೆಡಿಎಸ್ ಆಗಲಿ ಕಾಂಗ್ರೆಸ್ ಆಗಲಿ ಬಿಜೆಪಿ ಜತೆ ಹೋಗಲು ಸಿದ್ಧವಿಲ್ಲ. ಹಾಗಾಗಿ ಕುಮಾರಸ್ವಾಮಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಮರ್ಥಿಸಿಕೊಂಡರು.

ಸಿದ್ದು ಭೇಟಿ: ದೇವೇಗೌಡರ ಭೇಟಿ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಹ ಡೊನಾಲ್ಡ್ ಮೈಕ್ ಭೇಟಿ ಮಾಡಿ ಚರ್ಚೆ ನಡೆಸಿದರು.