ಹನ್ನೊಂದು ದಿನಗಳ ಕಾಲ ಕೈಮಗ್ಗ ಉತ್ಸವ | ಕೃಷ್ಣನೂರಲ್ಲಿ ನಾರಿಯರ ಕಲರವ
ಪ್ರಶಾಂತ ಭಾಗ್ವತ, ಉಡುಪಿ
ನಾವೀನ್ಯ ಉಡುಗೆ-ತೊಡುಗೆಗಳ ನಡುವೆಯೂ ಮಹಿಳಾಮಣಿಗಳಿಗೆ ಸೀರೆಯೆಂದರೆ ಬಲು ಅಚ್ಚುಮೆಚ್ಚು. ಅಂತಹ ವೈವಿಧ್ಯಮಯ ಸೀರೆಗಳು ಒಂದೆಡೆ ಲಭಿಸಲಿ ಎಂಬ ಕಾರಣಕ್ಕೆ ಉಡುಪಿಯ ರಾಜಾಂಗಣದಲ್ಲಿ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಆರಂಭಗೊಂಡಿದೆ.
ಆ.7ರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಹಿನ್ನೆಲೆಯಲ್ಲಿ ಉಡುಪಿಯ ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.)ವು ಆ.11ರ ವರೆಗೆ ಉತ್ಸವ ಆಯೋಜಿಸಿದೆ. ಕೃಷ್ಣನೂರಿನಲ್ಲಿ ತೆರೆದ ಕೈಮಗ್ಗ ಸೀರೆಗಳ ಮಳಿಗೆಗಳಲ್ಲಿ ಇದೀಗ ನಾರಿಯರ ಕಲರವ ಕೇಳಿಬರುತ್ತಿದೆ.
ವಿವಿಧ ಜಿಲ್ಲೆಗಳ 30 ಮಳಿಗೆ
ರಾಜ್ಯದ ವಿವಿಧ ಜಿಲ್ಲೆಗಳಿಂದ ಕೈಮಗ್ಗ ಸೀರೆ ತಯಾರಕರು ಹಾಗೂ ಮಾರಾಟಗಾರರು ಆಗಮಿಸಿದ್ದು, 30 ಮಳಿಗೆ ತೆರೆಯಲಾಗಿದೆ. ಬಗೆಬಗೆಯ ಕಾಟನ್, ಸಿಲ್ಕ್, ರೇಶ್ಮೆ ಸೀರೆಗಳು, ಕಾಟನ್ ಪಂಚೆ, ಲುಂಗಿ, ಶರ್ಟ್, ಬೆಡ್ಶೀಟ್ಗಳ ಪ್ರದರ್ಶನ ಮತ್ತು ಮಾರಾಟ ಆರಂಭಗೊಂಡಿದೆ. ಇಳಕಲ್, ದೊಡ್ಡಬಳ್ಳಾಪುರ, ಜಮಖಂಡಿ, ಚನ್ನರಾಯಪಟ್ಟಣ, ಚಾಮರಾಜನಗರ, ಹಾವೇರಿ, ಕೊಳ್ಳೇಗಾಲ, ಮೈಸೂರು, ಬೆಂಗಳೂರು, ತುಮ್ಮನಕಟ್ಟೆ, ಮಹಾಲಿಂಗಪುರ, ತೀರ್ಥಹಳ್ಳಿ, ಕೊಪ್ಪಳ, ಹೆಗ್ಗೋಡು, ಹುಬ್ಬಳ್ಳಿ ಭಾಗದ ಕೈಮಗ್ಗ ನೇಕಾರರು ತಾವು ತಯಾರಿಸಿದ ಸೀರೆ ತಂದಿದ್ದಾರೆ. ಕನಿಷ್ಠ 1,100ರೂ.ನಿಂದ ಗರಿಷ್ಠ 7,500ರೂ. ವರೆಗಿನ ದರಗಳಲ್ಲಿ ವೆರೈಟಿ ಸೀರೆಗಳಿವೆ.
ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆ
ಕೈಮಗ್ಗ ಉತ್ಸವ ಕೇವಲ ಮಾರಾಟ ಮತ್ತು ಪ್ರದರ್ಶನಕ್ಕೆ ಸೀಮಿತವಾಗಿರದೆ ನಾಡಿನ ಸಂಸತಿ ಬಿಂಬಿಸುವ ಮೇಳವೂ ಆಗಿದೆ. ಆ.1ರಿಂದ 11ರ ವರೆಗೆ ಪ್ರತಿದಿನ ಸಂಜೆ 6ರಿಂದ 7ರ ವರೆಗೆ ಶಿಖರೋಪನ್ಯಾಸ ಮಾಲಿಕೆ ನಡೆಯಲಿದೆ. ಕುಣಿತ ಭಜನಾ ಸೇವೆ, ಸುಗಮ ಸಂಗೀತ, ಬಯಲಾಟ, ಭರತನಾಟ್ಯ, ನೃತ್ಯ ವೈಭವ, ಜಾನಪದ ಕಲರವ, ಯಕ್ಷಗಾನ ಪ್ರದರ್ಶನ ನಡೆಯಲಿದೆ. ಆ.4ರಂದು ಕೈಮಗ್ಗ ಸೀರೆಯನ್ನುಟ್ಟ ಗೋಪಿಕೆಯರೊಂದಿಗೆ ಮುದ್ದು ಕೃಷ್ಣನ ಲೀಲೆಯನ್ನೊಳಗೊಂಡ ಶ್ರೀಕೃಷ್ಣ ಲೀಲೋತ್ಸವ ಸ್ಪರ್ಧೆ, ಆ.10ರಂದು ಕೈಮಗ್ಗ ಸೀರೆಯನ್ನುಟ್ಟು “ತುಳುನಾಡ ವೈಭವ’ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಸಂಸ್ಕೃತಿ, ಪರಂಪರೆಯ ಬಿಂಬಿಸುವ ಉಡುಗೆ
ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಬೂತಾನ್, ಬರ್ಮಾ, ಮಲೇಶಿಯಾ ದೇಶಗಳಲ್ಲಿ ಹೆಚ್ಚು ಜನಪ್ರಿಯವಾದ ಉಡುಗೆಯಾಗಿದೆ. ಸೊಂಟಕ್ಕೆ ಸುತ್ತಿಕೊಂಡು ಹೆಗಲ ಮೇಲೆ ಸೀರೆಯ ಸೆರಗು ಬರುವಂತೆ ಧರಿಸುವುದು ಸಾಮಾನ್ಯ ಪದ್ಧತಿಯಾಗಿದೆ. ಆದರೆ, ಆಯಾ ರಾಜ್ಯಗಳ ಸಂಸ್ಕೃತಿ, ಪರಂಪರೆಯ ಬಿಂಬಿಸುವ, ಮೌಲ್ಯದ ದ್ಯೋತಕವಾಗಿ ಸೀರೆಗಳನ್ನು ಧರಿಸುವ ರೀತಿಯಲ್ಲೂ ವಿಭಿನ್ನತೆ ಪಡೆದಿದೆ. ಅಂತಹ ಈ ಕೌಶಲಗಳೆಲ್ಲ ಕಣ್ಮರೆಯಾಗುತ್ತಿದೆ. ಪ್ರಾಚೀನ ಮೌಲ್ಯ, ಸಂಸ್ಕೃತಿ ಹಾಗೂ ಪದ್ಧತಿಗಳು ಉಳಿಯುವ ಕೆಲಸವಾಗಬೇಕು. ಪ್ರಾಚೀನ ಶೈಲಿಯ ಉಡುಗೆ-ತೊಡುಗೆಗಳು ಆಕರ್ಷಣೀಯ ಅಲ್ಲದಿದ್ದರೂ ದೀರ್ಘ ಕಾಲ ಬಾಳುವಂತಹ ಬಟ್ಟೆಗಳಾಗಿವೆ. ಅಂತಹ ನಮ್ಮತನದ ಬಟ್ಟೆ, ಸೀರೆಗಳು ಮತ್ತೆ ಮರುಜೀವ ಪಡೆಯಬೇಕು ಎನ್ನುತ್ತಾರೆ ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀಗಳು.
ಕೈಮಗ್ಗದ ನೇಕಾರಿಕೆ ಅಪೂರ್ವವಾದ ಕಲಾಕೌಶಲ. ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷದಿಂದ ಉಡುಪಿಯಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದೇವೆ. ಆಸಕ್ತರಿಗೆ ತರಬೇತಿಯನ್ನೂ ನೀಡುತ್ತಿದ್ದು, ಇದೀಗ ಸುಮಾರು 45ಕ್ಕೂ ಹೆಚ್ಚು ನೇಕಾರರು ಕೈಮಗ್ಗದ ಸೀರೆ ಉತ್ಪಾದಿಸುತ್ತಿದ್ದಾರೆ. ಉಡುಪಿ ಸೀರೆಗೆ ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಕೂಡ ಲಭಿಸಿದೆ.
| ರತ್ನಾಕರ್ ಇಂದ್ರಾಳಿ. ಅಧ್ಯಕ್ಷ, ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ
ಇತ್ತೀಚೆಗೆ ಬಟ್ಟೆಗಳಿಗೆ ಬಳಸುವ ಕೆಮಿಕಲ್ನಿಂದಲೂ ಅನಾರೋಗ್ಯ ಉಂಟಾಗುತ್ತಿದೆ. ಹೀಗಾಗಿ ಕೈಮಗ್ಗದಿಂದ ತಯಾರಿಸಿದ ಸೀರೆಗಳಿಗೆ ಹೆಚ್ಚಿನ ಬೇಡಿಕ ಬರುತ್ತಿದೆ. ದರ ಸ್ವಲ್ಪ ಹೆಚ್ಚಿದ್ದರೂ ಸಹ ಆರೋಗ್ಯಪೂರ್ಣ ಹಾಗೂ ದೀರ್ಘ ಬಾಳಿಕೆ ಬರುವ ಕೈಮಗ್ಗದಿಂದ ತಯಾರಿಸಿದ ಕಾಟನ್ ಸೀರೆ ಖರೀದಿಗೆ ಮಹಿಳೆಯರು ಆದ್ಯತೆ ನೀಡುತ್ತಿದ್ದಾರೆ.| ರಮ್ಯಾ ಎ.ಸಿ. ಸದಸ್ಯೆ, ಉಡುಪಿ ನೇಕಾರಿಕಾ ಕೇಂದ್ರ.