ಮಹಿಳಾ ಪ್ರಧಾನ ಸಮಾಜವಾಗಲಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಹೀಗೇ ಮುಂದುವರಿದರೆ ಪುರುಷ ಪ್ರಧಾನ ಸಮಾಜ ಹೋಗಿ ಮಹಿಳಾ ಪ್ರಧಾನ ಸಮಾಜವಾದರೂ ಅಚ್ಚರಿ ಇಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇನ್ನರ್​ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್​ಟೌನ್ ವತಿಯಿಂದ ಇಲ್ಲಿನ ಗೋಕುಲ ರಸ್ತೆ ಹೆಬಸೂರ ಭವನದಲ್ಲಿ ಆಯೋಜಿಸಿದ್ದ ‘ಅಮರ 2.0 ವಸ್ತು ಪ್ರದರ್ಶನ ಹಾಗೂ ಆಹಾರ ಮೇಳ’ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಜತೆಗೆ ಕುಟುಂಬವನ್ನೂ ನಿರ್ವಹಿಸುತ್ತಿದ್ದಾರೆ. ಮುಂದೆ ಮಹಿಳಾ ಮೀಸಲಾತಿ ಶೇ. 50ರಷ್ಟಾಗಲಿ ಎಂದು ಆಶಿಸಿದರು.

ಮಹಿಳಾ ಉದ್ಯಮಿ ಉಷಾ ಹೆಗಡೆ ಮಾತನಾಡಿ, ವಸ್ತು ಪ್ರದರ್ಶನದಲ್ಲಿ ಅದ್ಭುತ ಪ್ರತಿಭೆಗಳು ಅನಾವರಣಗೊಂಡಿವೆ. ಎಲೆಮರೆ ಕಾಯಿಯಂತಿದ್ದ ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರೆತಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಇನ್ನರ್​ವ್ಹೀಲ್ ಕ್ಲಬ್ ಸದಸ್ಯರು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಗಂಗಾವತಿ ಸಿಲ್ಕ್​ನ ಪಾರ್ವತಿ ಆನಂದ್, ಕ್ಲಬ್ ಅಧ್ಯಕ್ಷೆ ಕಾಜಲ್ ವಾದ್ವಾ, ಕಾರ್ಯದರ್ಶಿ ಪ್ರೀತಿ ಅಗರವಾಲ, ಕಾರ್ಯಕ್ರಮ ಸಂಯೋಜಕಿ ಜ್ಯೋತಿ ವೆಂಕಟೇಶ, ದೀಪಾಲಿ ಮುಧೋಳ, ವಿದ್ಯಾ ಹುಬ್ಳೀಕರ, ಪ್ರಾರ್ಥನಾ, ಮಾಯಾ ಹೆಗಡೆ, ನವಿತಾ ಮೋದಿ, ಇತರರು ಉಪಸ್ಥಿತರಿದ್ದರು.

ದತ್ತು ಪಡೆದು ಹಳ್ಳಿಗಳ ಅಭಿವೃದ್ಧಿ: ಇನ್ನರ್​ವ್ಹೀಲ್ ಕ್ಲಬ್ ವತಿಯಿಂದ ಕಳೆದ ಬಾರಿ ನಗರದ 5 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಾಗಿತ್ತು. ಈ ಬಾರಿ ಶಾಲೆಗಳ ಜತೆಗೆ ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ವಸ್ತು ಪ್ರದರ್ಶನದಿಂದ ಬಂದ ಆದಾಯವನ್ನು ಹಳ್ಳಿಗಳ ಅಭಿವೃದ್ಧಿಗೆ ಬಳಸಲಾಗುವುದು. ಮೂಲ ಸೌಲಭ್ಯ, ಸ್ವಚ್ಛತೆ, ಶೌಚಗೃಹ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಕಾರ್ಯಕ್ರಮ ಸಂಯೋಜಕಿ ಜ್ಯೋತಿ ವೆಂಕಟೇಶ ತಿಳಿಸಿದರು.

ಗೃಹಾಲಂಕಾರ, ಫ್ಯಾಷನ್ ವಸ್ತುಗಳು ಲಭ್ಯ: ವಸ್ತು ಪ್ರದರ್ಶನ ಹಾಗೂ ಆಹಾರ ಮೇಳದಲ್ಲಿ 68 ಮಳಿಗೆಗಳನ್ನು ತೆರೆಯಲಾಗಿದೆ. ಫ್ಯಾಷನ್, ಗೃಹಾಲಂಕಾರ, ಬಟ್ಟೆ, ಮಕ್ಕಳ ಆಟಿಕೆಗಳು, ಬಗೆ ಬಗೆಯ ಖಾದ್ಯಗಳು ಲಭ್ಯ. ಜೈಪುರ, ಚೆನ್ನೈ, ಬೆಳಗಾವಿ, ಹುಬ್ಬಳ್ಳಿ- ಧಾರವಾಡದ ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ದಾರೆ. ಶನಿವಾರ ರಾತ್ರಿ 9ರವರೆಗೆ ತೆರೆದಿರುತ್ತದೆ.

ಮಹಿಳೆಯರಿಗೆ ಸಮಾನತೆ ನೀಡಿದ ಮೂಲ ಪುರುಷ ಡಾ.ಬಿ.ಆರ್. ಅಂಬೇಡ್ಕರ್. ಅವರು ಹಿಂದು ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಎಲ್ಲ ರೀತಿಯ ಮೀಸಲಾತಿಗಾಗಿ ಹೋರಾಡಿದರು. ಅದಕ್ಕೆ ವಿರೋಧ ವ್ಯಕ್ತವಾದಾಗ ರಾಜೀನಾಮೆ ನೀಡಿದರು. ಬಳಿಕ ಆ ಮಸೂದೆ ಜಾರಿಗೊಳಿಸಲಾಯಿತು. ನಂತರ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ದೊರೆಯಿತು.

| ಪ್ರಸಾದ ಅಬ್ಬಯ್ಯ ಶಾಸಕ

Leave a Reply

Your email address will not be published. Required fields are marked *