ಗೊಳಸಂಗಿ: ಎನ್‌ಟಿಪಿಸಿ ಸ್ಥಾವರದಲ್ಲಿ ಬೆಂಕಿ ಹತ್ತಿಕೊಂಡರೆ ಅದನ್ನು ಹೇಗೆ ಆರಿಸುವುದು….! ಕಟ್ಟಡ ಕುಸಿತ ಉಂಟಾದರೆ ಅದನ್ನು ನಿರ್ವಹಿಸುವುದು ಹೇಗೆ…! ಶ್ವಾನ ದಳದ ಸಹಾಯದಿಂದ ಸಂರಕ್ಷಣೆ ಕಾರ್ಯ…! ಅಬ್ಬಾ…. ಪ್ರತಿ ಸನ್ನಿವೇಶವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ನಿರ್ವಹಿಸಿದ ರೀತಿಗೆ ಪ್ರಶಂಸೆಯ ಸುರಿಮಳೆಯೇ ಆಯಿತು.
ಹೌದು. ಇದು ನಡೆದದ್ದು ಸಮೀಪದ ಕೂಡಗಿಯ ಎನ್‌ಟಿಪಿಸಿಯಲ್ಲಿ. ಜಿಲ್ಲಾಮಟ್ಟದ ವಾರ್ಷಿಕ ವಿಪತ್ತು ನಿರ್ವಹಣೆಯ ಕಲ್ಪಿತ ಪ್ರದರ್ಶನ ಮತ್ತು ತರಬೇತಿ ಕಾರ್ಯಾಚರಣೆ ಬುಧವಾರ ಯಶಸ್ವಿಯಾಗಿ ನಡೆಯಿತು.
ರಾಜ್ಯ ಕಂದಾಯ ಇಲಾಖೆ, ಬೆಳಗಾವಿಯ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸಹಯೋಗದಲ್ಲಿ ಬೆಂಗಳೂರಿನ ಎನ್‌ಡಿಆರ್‌ಎ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಎನ್‌ಡಿಆರ್‌ಎ್ ತಂಡದ ಕಮಾಂಡರ್ ಶಾಂತಿಲಾಲ್ ಜಟಿಯಾ ಮಾತನಾಡಿ, ಬಹು ಸಂಸ್ಥೆಗಳ ನಡುವೆ ವಿಪತ್ತು ಸಿದ್ಧತೆ ಮತ್ತು ಪ್ರತಿಕ್ರಿಯೆ ಸಮನ್ವಯವನ್ನು ಹೆಚ್ಚಿಸಲು ಈ ಕಲ್ಪಿತ ಪ್ರದರ್ಶನ ಸಹಕಾರಿಯಾಗುತ್ತದೆ ಎಂದರು.
ಎನ್‌ಟಿಪಿಸಿ ಎಕ್ಸ್‌ಕ್ಯೂಟಿವ್ ಡೈರೆಕ್ಟರ್ ಬಿದ್ಯಾನಂದ್ ಝಾ ಮಾತನಾಡಿ, ಎನ್‌ಡಿಆರ್‌ಎ್ ನೇತೃತ್ವದ ರಕ್ಷಣಾ ಕಾರ್ಯಾಚರಣೆಯನ್ನು ಎನ್‌ಟಿಪಿಸಿ ಪರಿವಾರ ವೀಕ್ಷಿಸಲು ಅವಕಾಶ ಸಿಕ್ಕಂತಾಯಿತು. ತುರ್ತು ಪರಿಸ್ಥಿತಿಗಳಿಗೆ ಸಂಸ್ಥೆಯ ಕಲಿಕೆ ಮತ್ತು ಸಿದ್ಧತೆ ಹೆಚ್ಚಿಸುವಲ್ಲಿ ಇಂಥ ತರಬೇತಿಗಳು ಪ್ರಯೋಜನಕಾರಿಯಾಗಲಿವೆ ಎಂದು ಹೇಳಿದರು.
ಬೆಂಕಿಯ ತುರ್ತು ಪರಿಸ್ಥಿತಿ, ಮತ್ತು ಸ್ಥಾವರದೊಳಗಿನ ಕಟ್ಟಡ ಕುಸಿತದ ಸನ್ನಿವೇಶಗಳನ್ನು ಅನುಕರಿಸಿತು. ಈ ವೇಳೆ ಸಿಐಎಸ್‌ಎ್ ತಂಡವು ಬೆಂಕಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದು ಮತ್ತು ರಕ್ಷಣಾ ಕಾರ್ಯಾಚರಣೆ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ಎನ್‌ಡಿಆರ್‌ಎ್ ಶೋಧ ತಂಡ ಭೌತಿಕ, ತಾಂತ್ರಿಕ ಮತ್ತು ಶ್ವಾನದಳದ ಮೂಲಕ ಶೋಧ ಕಾರ್ಯ ನಡೆಸಿತು. ಕಟಿಂಗ್ ತಂಡವು ಕಿಟಕಿ, ಕಬ್ಬಿಣದ ಗೇಟ್ ಮತ್ತು ಗೋಡೆಯನ್ನು ಕಿತ್ತಿ ಮೊದಲ ಮಹಡಿಯಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡುವುದು ಹೇಗೆ ಎಂಬುದನ್ನು ಪ್ರದರ್ಶಿಸಿತು.
ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಎನ್‌ಡಿಆರ್‌ಎ್ ತಂಡದ ಹೆಡ್ ಕಾನ್ಸ್‌ಟೇಬಲ್ ಯು. ನವೀನ್, ಕೊಲ್ಹಾರ ತಹಸೀಲ್ದಾರ್ ಎಸ್.ಎಸ್. ನಾಯಕಲ್ಲಮಠ, ಎನ್‌ಟಿಪಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಪೂಜಾ ಪಾಂಡೆ, ಸಂಶೋಧಕಿ ಮಧು ಪಾಟೀಲ ಸೇರಿದಂತೆ 200ಕ್ಕೂ ಅಧಿಕ ಜನರು ಇದ್ದರು.