ಚಿಕ್ಕಮಗಳೂರು: ಅಪರೂಪಕ್ಕೆ ನಡೆಯುತ್ತಿರುವ ಜಿಲ್ಲಾ ಹಬ್ಬ ಕಳೆಗಟ್ಟಲಾರಂಭಿಸಿದ್ದು, ಪೂರ್ವಭಾವಿಯಾಗಿ ನಡೆಯುತ್ತಿರುವ ಕ್ರೀಡಾಕೂಟಗಳು ಪ್ರೇಕ್ಷಕರ ಉತ್ಸಾಹ, ಸಂಭ್ರಮ ಹೆಚ್ಚಿಸುತ್ತಿವೆ.
ಫೆ.28ರಿಂದ ಮಾ.1ರವರೆಗೆ ನಡೆಯುವ ಜಿಲ್ಲಾ ಉತ್ಸವದ ಪೂರ್ವಭಾವಿಯಾಗಿ ನಗರದಲ್ಲಿ ಭಾನುವಾರ ವಿವಿಧ ಕ್ರೀಡೆಗಳು ಹಾಗೂ ಉತ್ಸವಥಾನ್ಗೆ ಚಾಲನೆ ದೊರೆತಿದ್ದು, ಅಭೂತಪೂರ್ವ ಬೆಂಬಲ ದೊರೆತಿದೆ.
ಕೆಸರು ಗದ್ದೆಯಲ್ಲಿ ಬಿದ್ದರೂ ನಿಲ್ಲದ ಓಟ, ಕೆಸರು ಗದ್ದೆಯಲ್ಲಿಯೇ ಕಾಲು ಜಾರಿದರೂ ಮುಂದುವರಿದ ಹಗ್ಗ ಜಗ್ಗಾಟ, ಅಕ್ಕಪಕ್ಕದವರನ್ನೇ ಯಾಮಾರಿಸುವ ಮ್ಯೂಸಿಕಲ್ ಚೇರ್, ತಲೆ ಮ್ಯಾಲೆ ಬಿಂದಿಗೆ ಹೊತ್ತು ಬ್ಯಾಲೆನ್ಸಿಂದ ಓಡುವ ನೀರೆಯರು, ಆಕಾಶದಲ್ಲಿ ಚಿತ್ತಾರ ಬರೆದ ಬಣ್ಣದ ಗಾಳಿಪಟಗಳು, ಕಣ್ಮನ ಸೆಳೆಯುವ ರಂಗೋಲಿ ಸ್ಪರ್ಧೆ… ಹೀಗೆ ನೂರಾರು ಸ್ಪರ್ಧಿಗಳ ವಿವಿಧ ಕ್ರೀಡಾಪಟುಗಳ ಸೆಣಸಾಟವನ್ನು ನೋಡುಗರು ಕಣ್ತುಂಬಿಕೊಂಡರು.
ಐಡಿಎಸ್ಐ ಕಾಲೇಜಿನಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲಿ ನೂರಾರು ಯುವಜನರು ಭಾಗಿಯಾಗಿದ್ದರು. ಶತಮಾನೋತ್ಸವ ಕ್ರೀಡಾಂಗಣದಲ್ಲಿ ಬಿಂದಿಗೆ ಹೊತ್ತು ಓಡುವ ಮಹಿಳೆಯರ ಸ್ಪರ್ಧೆ ನೋಡುಗರಿಗೆ ಸಾಕಷ್ಟು ಮನರಂಜನೆ ನೀಡಿತು.
ಮಹಿಳೆಯರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವ ಸ್ಪರ್ಧೆ ಭರ್ಜರಿ ಮೋಜು ನೀಡಿತು. ಕಣ್ಣಿಗೆ ಬಟ್ಟೆ ಕಟ್ಟಿ ಮೂರು ಸುತ್ತು ಸುತ್ತಿಸಿ ಮಡಕೆ ಒಡೆಯಲು ಕೋಲು ಕೊಟ್ಟರೆ, ಹಲವರು ತೀರ್ಪಗಾರರ ತಲೆಗೇ ಒಡೆಯಲು ಹೋಗುತ್ತಿದ್ದರು. ಮಡಕೆ ಸಿಗದೆ ಕೆಲವರು ಪರದಾಡಿದರು, ಕೆಲವರು ಸಲೀಸಾಗಿ ಮಡಕೆ ಹುಡುಕಿ ಪುಡಿಪುಡಿ ಮಾಡಿದರು.
ಮಕ್ಕಳಿಗೆ ಕಪ್ಪೆ ಓಟದ ಸ್ಪರ್ಧೆ ಸಾಕಷ್ಟು ಮನರಂಜನೆ ನೀಡಿತು. ಹಲವು ಮಕ್ಕಳು ಭಾಗವಹಿಸಿ ಕಪ್ಪೆ ತರಹ ಕುಪ್ಪಳಿಸಿ ಗೆಲುವಿಗಾಗಿ ಸೆಣಸಾಡಿದರು.
ಹೆಚ್ಚು ರಂಜಿಸಿದ ಕೆಸರುಗದ್ದೆ ಓಟ: ಗ್ರಾಮೀಣ ಕ್ರೀಡೆ ಕೆಸರುಗದ್ದೆ ಓಟ ನೋಡಲು ಬಲು ಮಜಾ. ಆದರೆ ಓಡಿದವರಿಗೆ ಮಾತ್ರ ಗೊತ್ತು ಅದರ ಕಷ್ಟ. ಕೆಸರುಗದ್ದೆ ಓಟಕ್ಕಾಗಿಯೇ ನಿರಂತರ ಅಭ್ಯಾಸ ಮಾಡುವವರು ಇರುತ್ತಾರೆ. ಅಭ್ಯಾಸವಿಲ್ಲದೆ ಓಡಿದರೆ ಕೆಸರು ಮುಕ್ಕುವುದು ಗ್ಯಾರಂಟಿ ಎಂಬುದು ಹಲವರಿಗೆ ತಿಳಿಯಿತು. ಕೆಸರು ಗದ್ದೆ ಓಟದ ಸ್ಪರ್ಧೆಗೆ ಚಾಲನೆ ದೊರಕುತ್ತಿದ್ದಂತೆ ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು. ಮೊಣಕಾಲುದ್ದ ಆಳದ ಕೆಸರಿನಲ್ಲಿ ನಾ ಮುಂದು, ತಾ ಮುಂದು ಎಂದು ಓಡುವಾಗ ಸ್ಪರ್ಧಿಗಳು ಎದ್ದು-ಬಿದ್ದು ಗುರಿಮುಟ್ಟಿದರು. ಯುವಕ ಯುವತಿಯರು, ಮಕ್ಕಳು, ಮಹಿಳೆಯರು, ಪುರುಷರನ್ನು ಪ್ರತ್ಯೇಕವಾಗಿ ಕೆಸರುಗದ್ದೆ ಓಟಕ್ಕೆ ಬಿಡಲಾಗುತ್ತಿತ್ತು. ಸ್ಪರ್ಧಿಗಳು ಓಡುತ್ತಿದ್ದಂತೆ ಜನರು ಶಿಳ್ಳೆ, ಕೇಕೆ ಹಾಕುತ್ತ ಸ್ಪರ್ಧಿಗಳನ್ನು ಹುರಿದುಂಬಿಸಿದರು. ಗುರಿಮುಟ್ಟುವ ಧಾವಂತದಲ್ಲಿ ಸ್ಪರ್ಧಿಗಳು ಅಲ್ಲಲ್ಲಿ ದೊಪ್ಪೆಂದು ಬೀಳುತ್ತಿದ್ದಂತೆ ಜನರ ಕೂಗಾಟ ಜೋರಾಗುತ್ತಿತ್ತು. ಕೆಲವರು ಗುರಿಮುಟ್ಟಿದರೆ ಮತ್ತೆ ಕೆಲವರು ಸಾಕಪ್ಪ ಕೆಸರುಗದ್ದೆ ಓಟ ಎಂದು ಸೋಲೊಪ್ಪಿಕೊಂಡು ಸಪ್ಪೆ ಮುಖ ಮಾಡಿಕೊಂಡು ಬಂದರು. ಕೆಸರುಗದ್ದೆ ಓಟದಲ್ಲಿ ಮಹಿಳೆಯರು ಮತ್ತು ಮಕ್ಕಳು ತಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಿದರು.
ಉತ್ಸವಥಾನ್ಗೆ ಉತ್ತಮ ಪ್ರತಿಕ್ರಿಯೆ: ಬೆಳಗ್ಗೆ 6.30ಕ್ಕೆ ಆರಂಭವಾದ ‘ಫಿಟ್ ಚಿಕ್ಕಮಗಳೂರು ಉತ್ಸವಥಾನ್’ ನಡಿಗೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು, ಸಂಘ ಸಂಸ್ಥೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು, ವಿವಿಧ ಕಲಾ ತಂಡಗಳು, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, ಯೋಗ ಪಟುಗಳು, ಕೀಡಾಪಟುಗಳು, ನೌಕರರು ಭಾಗವಹಿಸಿದ್ದರು. ನಗರದ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆರಂಭವಾದ ನಡಿಗೆ ಐ.ಜಿ. ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮೂಲಕ ಪುನಃ ಮೈದಾನ ತಲುಪಿತು. ಜಾಥಾದಲ್ಲಿ ಭಾರತ ಮಾತಾಕಿ ಜೈ ಎಂಬ ಘೊಷಣೆ ಮೊಳಗಿತು.
ನಭದಲ್ಲಿ ಗಾಳಿಪಟದ ಚಿತ್ತಾರ: ಗಾಳಿಪಟ ಹಾರಿಸೋದು ಅಂದ್ರೇ ಮಕ್ಕಳಿಗೆ ಅಚ್ಚುಮೆಚ್ಚು. ಅದಕ್ಕೆ ಅವಕಾಶ ಸಿಕ್ರೇ ಬಿಡ್ತಾರ? ಕ್ರೀಡಾ ಉತ್ಸವದಲ್ಲಿ ನಗರದ ಸ್ಟೇಡಿಯಂನಲ್ಲಿ ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳು ಗಾಳಿಪಟ ಮುಗಿಲೆತ್ತರಕ್ಕೆ ಹಾರಿಸುವ ಮೂಲಕ ಸಂಭ್ರಮಿಸಿದರು.
ಬಣ್ಣ ಬಣ್ಣದ ಗಾಳಿಪಟ್ಟಕ್ಕೆ ದಾರಕಟ್ಟಿ ಬೀಸುವ ಗಾಳಿಗೆ ತಕ್ಕಂತೆ ಪಟವನ್ನು ಹರಿಸುತ್ತಿದ್ದ ಮಕ್ಕಳು ಒಮ್ಮೊಮ್ಮೆ ಗಾಳಿಪಟ ದಿಢೀರ್ ಕೆಳಗೆ ಬರುತ್ತಿದ್ದಂತೆ ಸಪ್ಪೆ ಮುಖ ಮಾಡಿಕೊಂಡು ಮತ್ತೆ ಹಾರಿಸುತ್ತಿದ್ದರು. ಎತ್ತರ ಎತ್ತರಕ್ಕೆ ಹಾರುತ್ತಿದ್ದಂತೆ ಅವರ ಖುಷಿಗೆ ಪರಾವೇ ಇರಲಿಲ್ಲ. ಪಾಲಕರು ಕೂಡ ಮಕ್ಕಳಿಗೆ ಸಾಥ್ ನೀಡುತ್ತಿದ್ದರು. ಇನ್ನೂ ಕೆಲ ಪಾಲಕರು ಮಕ್ಕಳ ಜತೆಗೆ ತಾವೂ ಮಕ್ಕಳಾಗಿದ್ದರು. ಅವರು ಗಾಳಿಪಟವನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದ್ದುದು ಸಾಮಾನ್ಯವಾಗಿತ್ತು.