ಅಪಾಯವನ್ನು ಆಹ್ವಾನಿಸುವ ಅತಿಯಾದ ಸ್ವವಿಮರ್ಶೆ

blank

ಅಪಾಯವನ್ನು ಆಹ್ವಾನಿಸುವ ಅತಿಯಾದ ಸ್ವವಿಮರ್ಶೆಬಾಲ್ಯದಲ್ಲಿ ಮಕ್ಕಳನ್ನು ಪಾಲಕರು ಬೆಳೆಸಿರುವ ಪರಿಯೂ ಮುಂದೆ ಅವರಲ್ಲಿ ಆತ್ಮವಿಶ್ವಾಸದ ಬೀಜ ಬಿತ್ತುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಣ್ಣ ಸಣ್ಣ ಗೆಲುವುಗಳನ್ನು ಆನಂದಿಸುವಂತೆ ಮಾಡಿ, ಸೋಲುಗಳನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರುವುದನ್ನು ಹೇಳಿಕೊಡಬೇಕು. ಬದಲು ತಪ್ಪುಗಳನ್ನೇ ದೊಡ್ಡರೀತಿಯಲ್ಲಿ ಬಿಂಬಿಸಬಾರದು.

ಕೆಲ ದಿನಗಳ ಹಿಂದೆ ನನ್ನ ಶಾಲಾ ಸಹಪಾಠಿಯೊಬ್ಬನನ್ನು ಭೇಟಿಯಾಗುವ ಪ್ರಸಂಗ ಒದಗಿಬಂತು. ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಶಾಲೆಯಲ್ಲಿ ಓದುವಾಗ ಶ್ರಮಜೀವಿಯಾಗಿದ್ದ ಆತನನ್ನು ಶಾಲೆ ಮುಗಿಸಿ ಹೊರಬಂದ ನಂತರ ಭೇಟಿಯಾದದ್ದು ಅಂದೇ. ಉಭಯಕುಶಲೋಪರಿಯ ನಂತರ ಆತ ತನ್ನ ಸ್ವಂತ ಪರಿಶ್ರಮದಿಂದ ಪದವಿಯನ್ನು ಮುಗಿಸಿ, ನಂತರ ಕಂಪನಿಯೊಂದನ್ನು ಸೇರಿಕೊಂಡು ಅಲ್ಲೂ ತನ್ನ ಪ್ರಾಮಾಣಿಕ ಸೇವೆಯಿಂದ ಹಂತಹಂತವಾಗಿ ಮೇಲೇರಿ ಇದೀಗ ಅದೇ ಕಂಪನಿಯ ಆಡಳಿತ ಮಂಡಳಿಗೆ ಸೇರಿಕೊಂಡಿರುವ ವಿಷಯ ತಿಳಿದುಕೊಂಡು ಖುಷಿಯಾಗಿ ಅಭಿನಂದಿಸಿದೆ. ಆದರೆ ಆತ ಮಾತ್ರ ಪದೇಪದೆ ‘ಈ ಹುದ್ದೆ ನನಗೆ ದೊರೆತಿದ್ದೇ ಅದೃಷ್ಟದಿಂದ. ನನಗಿಂತ ಇನ್ನೆಷ್ಟೋ ಜನ ಅರ್ಹರು ನಮ್ಮಲ್ಲಿದ್ದಾರೆ. ಅವರಿಗಿಂತ ಮೊದಲು ಸಿಕ್ಕಿದ್ದು ಅದೃಷ್ಟವಲ್ಲದೇ ಇನ್ನೇನು?’ ಎಂದು ಹೇಳುತ್ತಿದ್ದುದು ನನಗ್ಯಾಕೋ ಹಿಡಿಸಿರಲಿಲ್ಲ.

ಚಿಕ್ಕಂದಿನಿಂದಲೇ ಆತನ ಪ್ರಾಮಾಣಿಕತೆ, ನಿಷ್ಠೆ, ಕಷ್ಟಪಟ್ಟು ದುಡಿಯುವ ಸ್ವಭಾವವನ್ನು ಹತ್ತಿರದಿಂದ ನೋಡಿದ್ದ ನನಗೆ ಆತನ ಕ್ಷಮತೆ ಬಗ್ಗೆ ಒಂದಷ್ಟು ಅನುಮಾನವಿರಲಿಲ್ಲ. ಹೀಗಿರುವಾಗ ತನ್ನ ಸಾಧನೆಯ ಬಗ್ಗೆ ಹೆಮ್ಮೆ ಪಡಬೇಕಿದ್ದ ಆತನೇ ತನ್ನ ಕ್ಷಮತೆ ಬಗ್ಗೆ ಅನುಮಾನಿಸಿದ್ದುದು ನನಗೇನೂ ಇಷ್ಟವಾಗಲಿಲ್ಲ. ನಿಮಗೂ ಇಂತಹ ಅನುಭವ ಆಗಿರಲೂಬಹುದು. ಜನರು ತಮ್ಮ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿದ ನಂತರವೂ ಅದನ್ನು ಸಂಭ್ರಮಿಸುವುದನ್ನು ಬಿಟ್ಟು ಅದ್ಯಾಕೋ ತಮ್ಮ ಕ್ಷಮತೆ ಮೇಲೆಯೇ ಅನುಮಾನಿಸತೊಡಗುತ್ತಾರೆ. ಇಂತಹುದೊಂದು ಮನೋಸ್ಥಿತಿಗೆ ಮನಶಾಸ್ತ್ರದಲ್ಲಿ ‘ಇಂಪೋಸ್ಟರ್ ಸಿಂಡ್ರೋಮ್ ಅಂದರೆ ‘ವೇಷಧಾರಿ ಲಕ್ಷಣ’ ಎಂದು ಹೇಳುತ್ತಾರೆ.

ತಪಸ್ಸಿಗೆ ಭಂಗವುಂಟು ಮಾಡಿದ ಕಾರಣಕ್ಕೆ ಋಷಿಯೊಬ್ಬರು ಬಾಲಹನುಮಂತನಿಗೆ ತನ್ನ ಶಕ್ತಿಯನ್ನು ಮರೆಯುವ ಶಾಪ ಕೊಟ್ಟ ಕಥೆ ನಿಮಗೆ ನೆನಪಿರಬಹುದು. ಹೀಗೆ ಶಾಪಗ್ರಸ್ತನಾದ ಹನುಮಂತನು ನಂತರ ಪಶ್ಚಾತ್ತಾಪದಿಂದ ಮಾಡಿದ ತಪಸ್ಸಿನ ಫಲವಾಗಿ ಬೇರೆಯವರು ನೆನಪಿಸಿದ ನಂತರ ಹನುಮನು ತನ್ನ ಕ್ಷಮತೆಯನ್ನು ಅರಿಯುವಂತೆ ಶಿಕ್ಷೆ ಇಳಿಕೆಯಾಯಿತು. ಸೀತೆಯನ್ನು ರಾವಣ ಅಪಹರಿಸಿದ ನಂತರದಲ್ಲಿ ಆಕೆಯನ್ನು ಹುಡುಕಿಕೊಂಡು ಬರಲು ಲಂಕೆಗೆ ತೆರಳುವಂತೆ ಹನುಮನಲ್ಲಿ ಕೋರಿಕೊಂಡಾಗ ಸಾಗರವನ್ನು ದಾಟಿ ಲಂಕೆಯಲ್ಲಿ ಸೀತೆಯನ್ನು ಹುಡುಕುವ ಕೆಲಸ ತನ್ನಿಂದಾಗದು ಎಂದು ಆತ ಕೈಚೆಲ್ಲಿದ್ದ. ಹನುಮನಿಗಿರುವ ಶಾಪದ ವಿಷಯ ಗೊತ್ತಿದ್ದ ಜಾಂಬವಂತ ಆತನಿಗೆ ಅವನದೇ ಶಕ್ತಿಯ ಕುರಿತು ನೆನಪಿಸಿದ. ನಂತರ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ಲಂಕೆಗೆ ಹಾರಿ ಸೀತೆಯನ್ನು ಹುಡುಕುವಲ್ಲಿ ಹನುಮ ಯಶಸ್ವಿಯಾದ. ಈ ಕಥಾನಕದಲ್ಲಿ ಅಸಲಿಗೆ ಹನುಮಾನನಿಗೆ ಕಾಡಿದ್ದೇ ‘ಇಂಪೋಸ್ಟರ್ ಸಿಂಡ್ರೋಮ್ ಅಂದರೆ ‘ವೇಷಧಾರಿ ಲಕ್ಷಣ’.

ವೇಷಧಾರಿ ಲಕ್ಷಣವು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಕಂಡುಬರುತ್ತಿದೆ. ಆದರೆ ಅದಕ್ಕೆ ಕಾರಣ ಹಲವಾರು. ಒಂದು ಅಂದಾಜಿನಂತೆ ಸಾಧಕರಲ್ಲಿ 20ರಿಂದ 30 ಪ್ರತಿಶತ ಮತ್ತು ಜನಸಾಮಾನ್ಯರಲ್ಲಿ ಶೇಕಡ ಎಪ್ಪತ್ತರಷ್ಟು ಹಿರಿಯರು ಜೀವನದಲ್ಲಿ ಒಮ್ಮೆಯಾದರೂ ಈ ಮನೋವ್ಯಾಕುಲತೆಗೆ ಒಳಗಾಗಿರುತ್ತಾರೆ. ಅಷ್ಟಕ್ಕೂ ಈ ‘ಇಂಪೋಸ್ಟರ್ ಸಿಂಡ್ರೋಮ್ ಜನರಲ್ಲಿ ಬೇರುಬಿಡುವುದಾದರೂ ಏಕೆ? ಉತ್ತರ ಹುಡುಕಹೊರಟರೆ ಕೆಲ ಪ್ರಮುಖ ಕಾರಣಗಳು ನಮಗೆ ಕಂಡುಬರುತ್ತವೆ. ಮೊದಲಿಗೆ ಅತಿಯಾದ ಸ್ವವಿಮರ್ಶೆ. ನಮ್ಮ ಪ್ರತಿಯೊಂದು ಸಾಧನೆಯನ್ನೂ ಆನಂದಿಸಿ, ಅನುಭವಿಸಿ ಅವುಗಳ ಬಗ್ಗೆ ಹೆಮ್ಮೆಪಡುವುದರ ಬದಲು ಅವುಗಳನ್ನೇ ಅತಿಯಾಗಿ ವಿಮಶಿಸಿ ಅವುಗಳಲ್ಲಿನ ತಪ್ಪು, ಹುಳುಕುಗಳನ್ನು ಹುಡುಕುತ್ತ ಕೂರುವುದು. ಎರಡನೆಯದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಆ ನಿರ್ಧಾರದಿಂದ ಎಡವಟ್ಟಾದರೆ ಅದು ತಮಗೆ ಮುಳುವಾಗಬಹುದೇನೋ ಎಂಬ ಭಯದಿಂದ ಏನೂ ನಿರ್ಧರಿಸಲಾಗದೆ ಚಡಪಡಿಸುವುದು. ಮೂರನೆಯದು ಇಂದಿನ ಸೋಷಿಯಲ್ ಮೀಡಿಯಾದ ಹಾವಳಿಯ ದಿನಗಳಲ್ಲಿ ಬೇರೆಯವರ ಆತ್ಮರತಿಯ ಪೋಸ್ಟ್​ಗಳನ್ನೋ, ರೀಲ್ಸ್ಗಳನ್ನೋ ನೋಡಿ ಅಂಥವರ ಜೊತೆಗೆ ತಮ್ಮನ್ನು ಹೋಲಿಸಿಕೊಂಡು ತಮ್ಮ ಬಗ್ಗೆಯೇ ತಾವು ಕೀಳರಿಮೆ ಹುಟ್ಟಿಸಿಕೊಳ್ಳುವುದು. ಹೀಗೆ ಮುಂತಾದವುಗಳು.

‘ಇಂಪೋಸ್ಟರ್ ಸಿಂಡ್ರೋಮ್ ಎಂಬ ಪದವನ್ನು ಟಂಕಿಸಿದ್ದು ಜಾರ್ಜಿಯಾದ ಮನಶಾಸ್ತ್ರಜ್ಞರಾದ ಪಾಲಿನ್ ಕ್ಲಾನ್ಸ್. ಪದವಿ ಓದಿನಲ್ಲಿ ಖುದ್ದು ತಾವೇ ಈ ಕೀಳರಿಮೆಯನ್ನು ಹುಟ್ಟಿಸಿಕೊಂಡಿದ್ದ ಪಾಲಿನ್ ಕ್ಲಾನ್ಸ್ ನಂತರ ಅಧ್ಯಾಪಕರಾಗಿ ಹೊಸ ವೃತ್ತಿಯನ್ನು ಆರಂಭಿಸಿದಾಗ ತಮ್ಮ ಕೆಲ ವಿದ್ಯಾರ್ಥಿಗಳಲ್ಲೂ ಇಂತಹದೊಂದು ಮನೋವ್ಯಾಕುಲತೆ ಇರುವುದನ್ನು ಗಮನಿಸಿದರು. ಈ ಕುರಿತು ಹೆಚ್ಚಿನ ಸಂಶೋಧನೆ ಮಾಡಿ ಈ ಮನೋಸ್ಥಿತಿಗೆ ‘ಇಂಪೋಸ್ಟರ್ ಸಿಂಡ್ರೋಮ್ ಎಂಬ ಹೊಸ ಹೆಸರನ್ನೂ ನೀಡಿದರು. ಬಳಿಕ ಈ ಕುರಿತು ತಮ್ಮ ಸಂಶೋಧನೆಯನ್ನು ಆಧರಿಸಿ ಪ್ರಬಂಧ ಮಂಡಿಸಿದ ಪಾಲಿನ್ ಆರಂಭದಲ್ಲಿ ಗಮನಿಸಿದ್ದು ‘ವೇಷಧಾರಿ ಲಕ್ಷಣ’ವು ಮಹಿಳೆಯರಲ್ಲಷ್ಟೇ ಕಂಡುಬರುತ್ತದೆಯೆಂದು. ಆದರೆ ನಂತರದ ದಿನಗಳಲ್ಲಿ ಈ ನಿಟ್ಟಿನಲ್ಲಿ ನಡೆದ ಮತ್ತಷ್ಟು ಸಂಶೋಧನೆಗಳು ಇದು ಹೆಣ್ಣಿನಲ್ಲಿ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿದ್ದರೂ, ಗಂಡಿನಲ್ಲಿಯೂ ಗಣನೀಯ ಪ್ರಮಾಣದಲ್ಲಿ ಆವರಿಸಿಕೊಳ್ಳುತ್ತದೆ ಎಂಬುದನ್ನು ಸಾಬೀತು ಪಡಿಸಿದವು.

ಇತ್ತೀಚಿನ ದಿನಗಳಲ್ಲಿ ’ಇಂಪೋಸ್ಟರ್ ಸಿಂಡ್ರೋಮ್ ಹೆಚ್ಚಿನವರಲ್ಲಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ಸಂಸ್ಥೆಗಳು ಅದರಲ್ಲೂ ಮುಖ್ಯವಾಗಿ ಐಟಿ ಕಂಪನಿಗಳು ಈ ಕುರಿತು ಹೆಚ್ಚು ಜಾಗರೂಕವಾಗಿವೆ. ಹಲವು ಮಾನವ ಸಂಪನ್ಮೂಲ ಸಂಸ್ಥೆಗಳು ಗಮನಿಸಿದಂತೆ ನೌಕರಿಗಾಗಿ ಕರೆ ನೀಡಿದಾಗ ಪುರುಷ ಅಭ್ಯರ್ಥಿ ತಾನು ಆ ಹುದ್ದೆಗೆ ಬೇಕಾಗಿರುವ ಅರ್ಹತೆಯ ಶೇಕಡ ಐವತ್ತರಷ್ಟು ಅರ್ಹತೆಯನ್ನು ಹೊಂದಿದ್ದರೂ ತಾನೇ ಸೂಕ್ತ ವ್ಯಕ್ತಿ ಎಂಬಂತೇ ಅರ್ಜಿ ಸಲ್ಲಿಸುತ್ತಾನೆ. ಅದೇ ಮಹಿಳೆಯರಲ್ಲಿ ಆಕೆ ತಾನು ಶೇಕಡ ನೂರರಷ್ಟು ಅರ್ಹತೆ ಇದ್ದವಳಾಗಿದ್ದರೂ ನೌಕರಿಗೆ ಅರ್ಜಿ ಗುಜರಾಯಿಸುವ ಮೊದಲು ಹತ್ತು ಬಾರಿ ಯೋಚಿಸುತ್ತಾಳೆ. ಇದು ಅರ್ಜಿಹಾಕುವ ಸಮಯದ ಕತೆಯಾದರೆ, ನೌಕರಿಗೆ ಸೇರಿದ ನಂತರದ್ದು ಮತ್ತೊಂದು ಕಥೆ. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆಯನ್ನು ತೋರಿ, ಸಂದರ್ಶನದಲ್ಲೂ ಉತ್ತಮ ಪ್ರದರ್ಶನ ತೋರಿಸಿರುವ ಅಭ್ಯರ್ಥಿಗಳು ನೌಕರಿಗೆ ಸೇರಿದ ಕೆಲದಿನಗಳಲ್ಲಿಯೇ ಮೌನಕ್ಕೆ ಜಾರುತ್ತಾರೆ.

ಆರಂಭದ ದಿನಗಳಲ್ಲಿ ನೌಕರಿಯಲ್ಲಿ ಹೊಸಬರಿಗೆ ತಮ್ಮ ಆಫೀಸಿನ ತಂಡದಲ್ಲಿ ನಡೆಯುವ ತಾಂತ್ರಿಕ ವಿಚಾರ ವಿನಿಮಯದಲ್ಲಿ ಸಹಜವಾಗಿಯೇ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹೊಸದರಲ್ಲಿ ಇದು ಪ್ರತಿಯೊಬ್ಬರ ಅನುಭವವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ತಾವು ಚರ್ಚೆಗಳಲ್ಲಿ ಹೆಚ್ಚು ಪಾಲ್ಗೊಂಡು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಬದಲು ಈ ಕೆಲಸ ತನಗೆ ಸೂಕ್ತವಲ್ಲ ಅಥವಾ ತಾನು ಈ ಕೆಲಸವನ್ನು ನಿರ್ವಹಿಸಲು ಅಸಮರ್ಥ ಎನ್ನುವ ಅಳುಕು ಈ ಹೊಸಬರಿಗೆ ಕಾಡತೊಡಗುತ್ತದೆ. ಹೀಗೆ ಪ್ರತಿಭೆಯಿದ್ದೂ ಆತ್ಮವಿಶ್ವಾಸ ಕಳೆದುಕೊಳ್ಳುವ ಇವರುಗಳಲ್ಲಿ ಆಗ ಕಂಡುಬರುವುದು ‘ವೇಷಧಾರಿ ಲಕ್ಷಣ’ದ ಮೊದಲ ಕುರುಹುಗಳು.

ಇಂತಹ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ನಾಯಕರುಗಳು ಅಥವಾ ಮ್ಯಾನೇಜರ್​ಗಳು ಹೊಸಬರ ಮನಸ್ಸಿನ ತಲ್ಲಣವನ್ನು ಅರಿತುಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬಿಸುವ ಪ್ರಯತ್ನ ಮಾಡಬೇಕಾದದ್ದು ಅವಶ್ಯ. ಸಮರ್ಥ ನಾಯಕರುಗಳು ಈ ಪರಿಸ್ಥಿತಿಯ ಚಾಣಾಕ್ಷ ನಿರ್ವಹಣೆಯಿಂದ ಹೊಸಬರ ಮನಸ್ಸಿನ ದುಗುಡವನ್ನು ತಿಳಿಗೊಳಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಮುಂದೆ ಆ ಪ್ರತಿಭೆಗಳೇ ತಮ್ಮ ಸಂಸ್ಥೆಯ ಅಮೂಲ್ಯ ಆಸ್ತಿಗಳನ್ನಾಗುವಂತೆ ಮಾಡಬಲ್ಲರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಕಿರಿಯ ಸಹೋದ್ಯೋಗಿಗಳ ಮಾನಸಿಕ ಒತ್ತಡಗಳನ್ನು ಅರ್ಥೈಸಿಕೊಂಡು ಅವರನ್ನು ಅದರಿಂದ ಹೊರಬರಲು ಮತ್ತು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ತರಬೇತಿ ನೀಡುತ್ತಿವೆ.

ಪುರುಷಪ್ರಧಾನವಾದ ನಮ್ಮ ಸಮಾಜದಲ್ಲಿ ಎಲ್ಲ ಕಾರ್ಯಕ್ಷೇತ್ರಗಳಲ್ಲಿಯೂ ಹೆಣ್ಣಿಗೆ ಗಂಡಿಗಿಂತ ಸವಾಲುಗಳು, ಟೀಕೆ, ವಿಮರ್ಶೆಗಳು ಸ್ವಲ್ಪ ಹೆಚ್ಚೇ ಎನ್ನುವುದು ಇಂದಿಗೂ ಸತ್ಯ. ಹೀಗಿರುವಾಗ ಹೆಣ್ಣೊಬ್ಬಳು ‘ಬಾಸ್’ ಆದರಂತೂ ಮುಗಿದೇ ಹೋಯಿತು. ಅವಳ ಸವಾಲುಗಳು ದುಪ್ಪಟ್ಟಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಆಕೆ ತನ್ನ ಆತ್ಮವಿಶ್ವಾಸ ಕಾಪಿಟ್ಟುಕೊಳ್ಳದಿದ್ದರೆ ‘ಇಂಪೋಸ್ಟರ್ ಸಿಂಡ್ರೋಮ್​ಗೆ ಸುಲಭದ ತುತ್ತಾಗುತ್ತಾಳೆ. ಈ ಸನ್ನಿವೇಶವನ್ನು ಆಡಳಿತ ಮಂಡಳಿಗಳು ಮಹಿಳಾ ಸಿಬ್ಬಂದಿಗೆ ಅವರ ಕಾರ್ಯಕ್ಷೇತ್ರದಲ್ಲಿ ಆತ್ಮವಿಶ್ವಾಸದ ವಾತಾವರಣವನ್ನು ಮೂಡಿಸುವ ಮೂಲಕ ಅವರ ಮಾನಸಿಕ ಆರೋಗ್ಯ ವೃದ್ಧಿಸುವುದು ಅಪೇಕ್ಷಣೀಯ.

ಇದು ಕಾರ್ಯಕ್ಷೇತ್ರಕ್ಕೆ ಬಂದ ನಂತರದ ಕಥೆಯಾದರೆ ಬಾಲ್ಯದಲ್ಲಿ ಮಕ್ಕಳನ್ನು ಪಾಲಕರು ಬೆಳೆಸಿರುವ ಪರಿಯೂ ಮುಂದೆ ಅವರಲ್ಲಿ ಆತ್ಮವಿಶ್ವಾಸದ ಬೀಜ ಬಿತ್ತುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಸಣ್ಣ ಸಣ್ಣ ಗೆಲುವುಗಳನ್ನು ಆನಂದಿಸುವಂತೆ ಮಾಡಿ, ಸೋಲುಗಳನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದಿರುವುದನ್ನು ಹೇಳಿಕೊಡುವುದರ ಬದಲು ತಪ್ಪುಗಳನ್ನೇ ದೊಡ್ಡರೀತಿಯಲ್ಲಿ ಬಿಂಬಿಸಿ ಯಾವುದಕ್ಕೂ ಪ್ರಯೋಜನವಿಲ್ಲದವರೆಂಬ ರೀತಿಯಲ್ಲಿ ಹೀಯಾಳಿಸುತ್ತಿದ್ದರೆ ಮುಂದೆ ದೊಡ್ಡವರಾದ ಮೇಲೆ ತಾವೆಷ್ಟು ಸಾಧಿಸಿದರೂ ಅದನ್ನನುಭವಿಸದೆ ಇರುವಷ್ಟರ ಮಟ್ಟಿಗೆ ಕೀಳರಿಮೆಯ ಜೊತೆಗೆ ‘ವೇಷಧಾರಿ ಲಕ್ಷಣ’ವನ್ನು ಬೆಳೆಸಿಕೊಳ್ಳುತ್ತಾರೆ.

1921ರಲ್ಲಿ ಅಲ್ಬರ್ಟ್ ಐನ್​ಸೆ ್ಟನ್ ಅವರಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಪುರಸ್ಕರಿಸಿದಾಗ, ‘ನನ್ನ ಸಾಮಾನ್ಯ ಕೆಲಸಗಳನ್ನೆಲ್ಲ ಈ ಜನ ಇಷ್ಟೊಂದು ಅಟ್ಟಕ್ಕೇರಿಸಿ ಪ್ರಶಸ್ತಿಗಳನ್ನು ಕೊಟ್ಟು ಪುರಸ್ಕರಿಸುವುದರಿಂದ ನಾನು ಇವರಿಗೆಲ್ಲ ಮೋಸ ಮಾಡುತ್ತಿದ್ದೇನೆ ಎಂಬ ಅಪರಾಧ ಪ್ರಜ್ಞೆ ಕಾಡುತ್ತಿದೆ’ ಎಂದು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರಂತೆ. ಇಂತಹುದೇ ಹೇಳಿಕೆಗಳನ್ನು ಆವರು ಬೇರೆ ಬೇರೆ ವೇದಿಕೆಗಳಲ್ಲಿಯೂ ಹಂಚಿಕೊಂಡಿದ್ದರು. ‘ಇಂಪೋಸ್ಟರ್ ಸಿಂಡ್ರೋಮ್ ಅಲ್ಬರ್ಟ್ ಐನ್​ಸ್ಟೆ ೖನ್ ಅವರಂತಹ ಘಟಾನುಘಟಿಗಳಿಗೂ ಬಿಟ್ಟಿರಲಿಲ್ಲವೆಂದ ಮೇಲೆ ಸಾಮಾನ್ಯರನ್ನು ಬಿಟ್ಟಿತೇ.

ಇತ್ತೀಚೆಗೆ ಅಮೆರಿಕದ ಪ್ರಮುಖ ಪತ್ರಿಕೆಯೊಂದು ನಡೆಸಿದ ಸರ್ವೆಯಲ್ಲಿ ಅಲ್ಲಿನ ಶೇಕಡ ಎಪತ್ತರಷ್ಟು ಕಂಪನಿಗಳ ಮುಖ್ಯಸ್ಥರು ‘ವೇಷಧಾರಿ ಲಕ್ಷಣ’ ದಿಂದ ಬಳಲುತ್ತಿರುವುದು ಬಯಲಾಗಿದೆ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪನಿ-ಕಂಪನಿಗಳ ನಡುವಿನ ವ್ಯಾವಹಾರಿಕ ಸ್ಪರ್ಧೆಗಳಿಂದ ಅಲ್ಲಿನ ಉದ್ಯೋಗಿಗಳ, ಮುಖ್ಯಸ್ಥರ ಮೇಲುಂಟಾಗುವ ಮಾನಸಿಕ ಒತ್ತಡಗಳ ಅಡ್ಡಪರಿಣಾಮವಿದು. ಆತ್ಮವಿಶ್ವಾಸ ಕಳೆದುಕೊಂಡು ‘ವೇಷಧಾರಿ ಲಕ್ಷಣ’ದತ್ತ ವಾಲುವುದು ಮುಂದೆ ಸಾಗಿ ಖಿನ್ನತೆಗೆ ದಾರಿಯಾಗಬಹುದು. ಹಾಗಾಗಿ ಸಾಧನೆಗಳನ್ನು ಆನಂದಿಸುತ್ತ, ಅತಿಯಾದ ಸ್ವವಿಮರ್ಶೆಗೆೆ ಬ್ರೇಕ್ ಹಾಕಿಕೊಂಡರೆ ಈ ಮನೋಸ್ಥಿತಿಯಿಂದ ಹೊರಬರಲು ಸಾಧ್ಯ. ಹಾಗೆಯೇ ಪಾಲಕರೂ ಮಕ್ಕಳನ್ನು ಎಳವೆಯಲ್ಲಿಯೇ ಅವರ ಸಣ್ಣ-ಸಣ್ಣ ಸಾಧನೆಗಳಿಗೂ ಪ್ರೋತ್ಸಾಹಿಸುತ್ತ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಿಂದ ಮುಂದೆ ಆ ವಿಶ್ವಾಸವೇ ಅವರ ದೊಡ್ಡಸಾಧನೆಗೆ ಕಾರಣವಾಗುತ್ತದೆ. ಥೇಟ್ ಹನುಮನಂತೆ.

ಅಬ್ಬಾ! ಎಂತಹ ಜಾಗದಲ್ಲಿ ಅಡಗಿದೆ MH370 ವಿಮಾನ: ನಿಗೂಢ ನಾಪತ್ತೆ ಕೇಸ್​ ಬಗೆಹರಿದಿದೆ ಎಂದ ವಿಜ್ಞಾನಿ

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…