ದೇವದುರ್ಗ: ಹತ್ತಿ ಬೆಳೆ ಬೇಸಾಯದಲ್ಲಿ ಅಧಿಕ ಸಾಂದ್ರತೆ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಈ ಬೇಸಾಯ ಪದ್ಧತಿ ಅಧಿಕ ಇಳುವರಿ ತಂದುಕೊಡಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಣಮಂತಪ್ಪ ಶ್ರೀಹರಿ ಹೇಳಿದರು.
ಪಟ್ಟಣದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ರಾಯಚೂರು ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸಿದ್ದ ಹತ್ತಿ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಇದನ್ನು ಓದಿ: ಯಾಂತ್ರೀಕೃತ ಭತ್ತ ಬೇಸಾಯ ತರಬೇತಿ
ಭಾರತ ವಿಶ್ವದ ಎರಡನೇ ಅತಿದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರವಾಗಿದೆ. ಹತ್ತಿ ಕೃಷಿ ಶತಮಾನಗಳಿಂದ ಭಾರತದ ಕೃಷಿ ಆರ್ಥಿಕತೆಯ ನಿರ್ಣಾಯಕ ಅಂಶವಾಗಿದೆ. ನಾನಾ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ದೇಶ ಹತ್ತಿ ಉತ್ಪಾದನೆಯಲ್ಲಿ ಗಮನಾರ್ಹ ಕುಸಿತ ಅನುಭವಿಸಿದೆ. ಮಳೆಯಾಶ್ರಿತ ಕೆಂಪು ಮಣ್ಣಿಗೆ ಅತಿಸೂಕ್ತವಾಗಿರುವ ಅಧಿಕ ಸಾಂದ್ರತೆ ಹತ್ತಿ ಬೆಳೆ ಪದ್ಧತಿಯನ್ನು ರೈತರು ಅಳವಡಿಸಕೊಳ್ಳಬೇಕು. ಹವಾಮಾನಕ್ಕೆ ತಕ್ಕಂತೆ ಬಿತ್ತನೆ ಮಾಡುವ ಬಗ್ಗೆ ರೈತರು ವಿಜ್ಞಾನಿಗಳ ಸಲಹೆ ಪಡೆಯಬೇಕು ಎಂದು ಹೇಳಿದರು.
ಕೃಷಿ ಕೀಟಶಾಸ್ತ್ರದ ವಿಜ್ಞಾನಿ ಡಾ.ಶ್ರೀವಾಣಿ ಮಾತನಾಡಿ, ಹತ್ತಿಯಲ್ಲಿ ರಸಹೀರುವ ಕೀಟಗಳ ನಿರ್ವಹಣೆಗಾಗಿ ಹಳದಿ ಅಂಟು ಬಲೆಗಳ ಬಳಕೆ, ಬೇವಿನ ಮೂಲದ ಕೀಟನಾಶಕಗಳ ಸಿಂಪಡಣೆ ಮತ್ತು ಗುಲಾಬಿ ಕಾಯಿಕೊರಕ ನಿರ್ವಹಣೆಗಾಗಿ ವಿಶೇಷ ಕ್ರಮಗಳನ್ನು ರೈತರು ಅನುಸರಿಸಬೇಕು ಬಿತ್ತನೆ ಸಮಯ, ಎಕರೆಗೆ 12ರಂತೆ ಮೋಹಕ ಬಲೆ ಬಳಕೆ, ಕೀಟ ಕುಟುಂಬ ನಿಯಂತ್ರಣ ಪದ್ಧತಿ ಹಾಗೂ ತತ್ತಿ ನಾಶಕಗಳ ಸಿಂಪಡಣೆ ಮಾಹಿತಿ ಪಡೆಯಬೇಕು ಎಂದರು.