ಸಾಧನೆಗೆ ಅಂಕವೇ ಸಾಧನವಲ್ಲ: ಪರೀಕ್ಷೆಲಿ ಫೇಲ್​ ಆಗಿ ಜೀವನದಲ್ಲಿ ಪಾಸ್​ ಆದವರಿದ್ದಾರೆ

ತಮ್ಮ ಮಗನಿಗೆ ಎಸ್​ಎಸ್​ಎಲ್​ಸಿಯಲ್ಲಿ ಶೇ. 60ರಷ್ಟು ಅಂಕ ಬಂದರೂ ಕುಣಿದು ಕುಪ್ಪಳಿಸಿ ವಂದನಾ ಸೂಫಿಯಾ ಕಟೋಚ್ ಎಂಬುವವರು ಫೇಸ್​ಬುಕ್​ನಲ್ಲಿ ಹಾಕಿದ್ದ ಸ್ಟೇಟಸ್ ಅವರಿಗೇ ಅಚ್ಚರಿ ಹುಟ್ಟಿಸುವಷ್ಟು ವೈರಲ್ ಆಯಿತು. ಆದರೂ ಅಂಕವೇ ಸರ್ವಸ್ವ ಎಂದುಕೊಂಡು ಅದನ್ನೇ ಮಕ್ಕಳ ತಲೆಗೆ ತುಂಬುವವರ ಸಂಖ್ಯೆ ಈಗ ಹೆಚ್ಚಿದೆ. ಕಡಿಮೆ ಅಂಕ ಪಡೆದರೂ ದೊಡ್ಡ ದೊಡ್ಡ ಸಾಧನೆ ಮಾಡಿದವರು ಲಕ್ಷಾಂತರ ಮಂದಿ. ಆ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಅದ್ಭುತ ಎನಿಸುವಷ್ಟು ಪ್ರತಿಕ್ರಿಯೆಗಳು ಬಂದಿವೆೆ. ಅವುಗಳ ಪೈಕಿ ಆಯ್ದ ಕೆಲವನ್ನು ಹಿಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗಿದ್ದು, ಇಂದು ಅದರ ಕೊನೆಯ ಭಾಗ.

ಫೇಲ್​ನಿಂದ ಕೆಜಿಎಫ್​ವರೆಗೆ…

ಓದುವುದೆಂದರೆ ನನಗೆ ಅಲರ್ಜಿ, ಆದರೆ ಸಂಗೀತ ಎಂದರೆ ಪಂಚಪ್ರಾಣ. 8ನೇ ಕ್ಲಾಸಿನಲ್ಲೇ ಫೇಲಾದೆ. ಹಾಗೂ ಹೀಗೂ 10ನೇ ಕ್ಲಾಸ್ ಮುಗಿಸಿದೆ. ಅಲ್ಲಿ ಇಲ್ಲಿ ಕೆಲಸ ಮಾಡುತ್ತಲೇ ಒಂದಿಷ್ಟು ಹಣ ಕೂಡಿಡತೊಡಗಿದೆ. ಆಮೇಲೆ ಸಂಗೀತದಲ್ಲಿಯೇ ಗುರುತಿಸಿಕೊಳ್ಳೋ ಇಚ್ಛೆಯಾಗಿ ಬೆಂಗಳೂರಿಗೆ ಬಂದು ಕೀಬೋರ್ಡ್ ಕಲಿತೆ. ಮ್ಯೂಸಿಕ್ ಕಂಪೋಸ್ ಮಾಡುವ ಹಂಬಲ. ಅದಕ್ಕೆಂದೇ ಕೈಯಲ್ಲಿದ್ದ ಅಲ್ಪ ಸ್ವಲ್ಪ ದುಡ್ಡಿನಿಂದ ಮುಂಬೈಗೆ ಹೋದೆ. ಬಾಲಿವುಡ್​ನಲ್ಲಿ ಸಂಗೀತ ಕಂಪೋಸ್ ಮಾಡೋ ಆಸೆ ಹುಟ್ಟಿತು! ಆದರೆ ಅಲ್ಲಿ ಅವಮಾನ ಮಾಡಿದರು. ಪಬ್​ನಲ್ಲಿ ಕೆಲಸಕ್ಕೆ ಸೇರಿದೆ. ಪೊಲೀಸರು ರೇಡ್ ಮಾಡಿದ್ದರಿಂದ ಅದರ ಬಾಗಿಲು ಮುಚ್ಚಿತು. ಆ ದಿನಗಳಲ್ಲಿ ಮುಂಬೈನಲ್ಲಿ ಬಾಂಬ್ ಸ್ಪೋಟವಾಗಿತ್ತು. ನನ್ನ ವೇಷಭೂಷಣ ನೋಡಿದ ಪೊಲೀಸರು ವಶಕ್ಕೆ ಪಡೆದು ಸಂಗೀತ ಸಾಧನಗಳನ್ನೆಲ್ಲಾ ನಾಶ ಮಾಡಿಬಿಟ್ಟರು. ಕೈಯಲ್ಲಿ ದುಡ್ಡಿಲ್ಲ. 16 ಗಂಟೆ ರೈಲಿನ ಶೌಚಾಲಯದಲ್ಲೆ ಕುಳಿತು ಮಂಗಳೂರಿಗೆ ಬಂದೆ. ದುಡ್ಡಿಗಾಗಿ ಕಿಡ್ನಿ ಮಾರುವ ಯೋಚನೆ ಬಂದು ಆಸ್ಪತ್ರೆಗೆ ಹೋದೆ. ಅಲ್ಲಿಯ ಸಿಬ್ಬಂದಿ ಮಾನಸಿಕವಾಗಿ ನನ್ನನ್ನು ಸಿದ್ಧಪಡಿಸುತ್ತಿದ್ದಾಗ ತಳಮಳ ಶುರುವಾಗಿ ತಪ್ಪಿಸಿಕೊಂಡು ಬಂದುಬಿಟ್ಟೆ. ಸಾರ್ವಜನಿಕ ಶೌಚಾಲಯದಲ್ಲಿಯೇ ದಿನಕ್ಕೆ -ಠಿ; 3 ಕೊಟ್ಟು ಒಂದು ತಿಂಗಳು ಅಲ್ಲಿಯೇ ವಾಸವಿದ್ದೆ. ಅಲ್ಲಿಂದ ಬೆಂಗಳೂರಿಗೆ ಬಂದೆ. ದೇವಸ್ಥಾನಗಳಲ್ಲಿನ ಪ್ರಸಾದವೇ ಆಹಾರವಾಯಿತು. ಸಂಗೀತದ ಹುಚ್ಚು ಮಾತ್ರ ಬಿಟ್ಟಿರಲಿಲ್ಲ. ನನ್ನಲ್ಲಿದ್ದ ಪ್ರತಿಭೆ ಗುರುತಿಸಿದ ಅಕ್ಕಸಾಲಿಗನೊಬ್ಬ 35 ಸಾವಿರ ರೂಪಾಯಿ ಕೊಟ್ಟುಬಿಟ್ಟರು. ಅದರಿಂದ ಕೀಬೋರ್ಡ್ ಖರೀದಿಸಿದೆ. ಬೆಂಗಳೂರಿನ ರೇಡಿಯೋ ಸ್ಟೇಷನ್​ನಲ್ಲಿ ಸಾಹಸದಿಂದ ಕೆಲಸ ಗಿಟ್ಟಿಸಿಕೊಂಡೆ. ಅಲ್ಲಿಂದ ನನ್ನ ಜೀವನದ ದಿಕ್ಕೇ ಬದಲಾಯಿತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜತೆ ಕೆಲಸ ಮಾಡುವ ಭಾಗ್ಯ ಸಿಕ್ಕಿತು. ಅವರ ಜತೆ 64 ಸಿನಿಮಾಗಳಲ್ಲಿ ಕೆಲಸ ಮಾಡಿದೆ. 65ನೇ ಸಿನಿಮಾ ‘ಉಗ್ರಂ’ ಚಿತ್ರಕ್ಕೆ ನಾನೇ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದೆ. ಅದು ಸೂಪರ್ ಹಿಟ್ ಆದ್ದರಿಂದ ಜನ ನನ್ನನ್ನು ಗುರುತಿಸತೊಡಗಿದರು. ನಂತರ ಈಚೆಗೆ ಕೆಜಿಎಫ್​ಗೂ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಲಾಕ್​ಬಸ್ಟರ್ ಸಿನಿಮಾ ಆಗಿ ಇದು ಮೂಡಿಬಂದಿದ್ದರಿಂದ ಜಗತ್ತಿನೆಲ್ಲೆಡೆ ಜನ ನನ್ನತ್ತ ದೃಷ್ಟಿ ಬೀರುವಂತೆ ಮಾಡಿದೆ. ಗುರಿಯೊಂದು ಸ್ಪಷ್ಟವಾಗಿದ್ದರೆ ಎಲ್ಲವೂ ಸಾಧ್ಯ.

| ರವಿ ಬಸ್ರೂರು ‘ಕೆಜಿಎಫ್’ ಚಲನಚಿತ್ರದ ಸಂಗೀತ ನಿರ್ದೇಶಕ

ವಿಜ್ಞಾನ ತೆಗೆದುಕೊಂಡೆ, 3 ವರ್ಷ ಫೇಲಾದೆ!

‘ಏನೋ ಮಗನೇ, ಎಸ್​ಎಸ್​ಎಲ್​ಸಿ ಯಲ್ಲಿ ಶೇ.71 ಅಂಕ ಪಡೆದಿದ್ದ ನೀನು ಪಿಯುಸಿ ಯಲ್ಲಿ ಫೇಲಾಗಿಬಿಟ್ಟೆಯಲ್ಲೋ’ ಎಂದು ಅಮ್ಮನ ಅಳಲು. ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡ ಗೋಳು ಅದು. ಅಕ್ಟೋಬರ್​ನಲ್ಲಿ ಪರೀಕ್ಷೆ ಬರಿ ಎಂದರು ಅಣ್ಣ ಮತ್ತು ಅಪ್ಪ. ಆದರೆ ಅಲ್ಲೂ ಫೇಲ್! ನಾನು ತುಂಬಾ ಜಾಣ ಎಂದು ತಿಳಿದಿದ್ದ ಪಾಲಕರಿಗೆ ನಿರುತ್ಸಾಹ ಕಾದಿತ್ತು. ಮರುವರ್ಷವೂ ಸೇಮ್ ರಿಸಲ್ಟ್!

ಸೈನ್ಯಕ್ಕೆ ಸೇರುವ ಪ್ರಯತ್ನ ಮಾಡಿ ಅಲ್ಲೂ ಸೋತೆ. ಊರಿನವರಿಗೆ ಮುಖ ತೋರಿಸಲು ನಾಚಿಕೆಯಾಗಿ ಬೆಂಗಳೂರಿಗೆ ಹೋಗಿ ಹಾಗೂ ಹೀಗೂ ಮಾಡಿ ಸೆಕ್ಯೂರಿಟಿ ಗಾರ್ಡ್ ಆಗಿ ರಾತ್ರಿ ಪಾಳಿ ಕೆಲಸಕ್ಕೆ ಸೇರಿದೆ. ಓದಿ ಪಾಸಾಗುವ ಎಂದು ಮಾಡಿದರೂ ಭೌತಶಾಸ್ತ್ರ ಪುಸ್ತಕ ಹಿಡಿದ ತಕ್ಷಣ ನಿದ್ದೆ ಬರುತ್ತಿತ್ತು!

ಸೆಕ್ಯೂರಿಟಿ ಎಂದು ಹೇಳಿಕೊಳ್ಳಲು ಬೇಸರವಾದ ನಾನು, ಸ್ನೇಹಿತನ ಜತೆಗೂಡಿ ಚಿತ್ರರಂಗಕ್ಕೆ ಹೋಗುವ ಎಂದುಕೊಂಡೆ. ಯಾವುದೋ ಒಂದು ಕಿರುತೆರೆಯ ಚಿತ್ರ ನಿರ್ವಿುಸುವವರ ವಿಳಾಸ ಹುಡುಕಿ ಹೋಗಿ ಅವರಿಗೊಂದಿಷ್ಟು ದುಡ್ಡೂ ಕೊಟ್ಟಾಯಿತು. ದುಡ್ಡು ಪಡೆದ ಆತ ನಮ್ಮನ್ನು ಕ್ಯಾರೇ ಮಾಡಲಿಲ್ಲ. ಆಗ ಅಮ್ಮನ ನೆನಪಾಯಿತು! ಊರಿಗೆ ವಾಪಸ್ ಆಗುವ ಎಂದುಕೊಂಡೆ. ಎಸ್​ಎಸ್​ಎಲ್ ಸಿ ಅಂಕಪಟ್ಟಿಯ ನೆನಪಾಯಿತು. ಅದು ಸೆಕ್ಯೂರಿಟಿ ಏಜೆನ್ಸಿ ಕಂಪನಿಯವರ ಬಳಿ ಇತ್ತು! ಅವರಿಂದ ಹೇಗೋ ಪಡೆದು ಹೈದರಾಬಾದ್​ಗೆ ಹೋದೆ. ಅಲ್ಲಿ ಒಂದೂವರೆ ತಿಂಗಳು ಕಳೆದು ವಾಪಸ್ ಬೆಂಗಳೂರಿಗೆ ಬರುವ ಎಂದರೆ ದುಡ್ಡಿಲ್ಲ. ಟಿಕೆಟ್ ಪಡೆಯದೇ ರೈಲು ಹತ್ತಿದೆ. ಸಿಕ್ಕಿ ಹಾಕಿಕೊಂಡು ಎಲ್ಲೋ ಇಳಿಸಿಬಿಟ್ಟರು! ಯಾರನ್ನೋ ಕಾಡಿ ಬೇಡಿ ಅಂತೂ ಬೆಂಗಳೂರು ತಲುಪಿದೆ.

ಅಲ್ಲಿಗೆ ಬುದ್ಧಿ ನೆಟ್ಟಗಾಗಿತ್ತು. ಊರಿಗೆ ತಲುಪಿ ಪರೀಕ್ಷೆ ಬರೆದೆ. ಶೇ. 35 ಅಂಕದೊಂದಿಗೆ ಉತ್ತೀರ್ಣನಾಗಿದ್ದೆ. ಆದರೆ ಅಲ್ಲಿಯವರೆಗೆ ನನ್ನ ಸ್ನೇಹಿತರಿಂದ ಚುಚ್ಚು ಮಾತು ಕೇಳಿದ್ದ ನಾನು ಸಾಧನೆಯ ಮೂಲಕವೇ ಇದಕ್ಕೆ ಉತ್ತರ ಕೊಡಬೇಕು ಎಂದು ತೀರ್ವನಿಸಿದೆ. ಅದನ್ನೂ ಸಾಧಿಸಿಬಿಟ್ಟೆ. ಹೇಗೆ ಅಂತೀರಾ? ಅವರೆಲ್ಲಾ ಪದವಿ ಮುಗಿಸುವುದರೊಳಗಾಗಿ ನಾನು ಬಿ.ಎಡ್ ಮುಗಿಸಿ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಸೇರಿದ್ದೆ. ಎಂಟು ವರ್ಷ ಅಲ್ಲಿ ಸೇವೆ ಮಾಡಿದ ನಂತರ ಸರ್ಕಾರಿ ಹೈಸ್ಕೂಲ್​ನಲ್ಲಿಯೂ ಕೆಲಸ ಗಿಟ್ಟಿಸಿಕೊಂಡೆ. ಉತ್ತಮ ಶಿಕ್ಷಕ ಎಂಬ ಹೆಸರೂ ಪಡೆದಿದ್ದೇನೆ. ಯಾವ ವಿಷಯದಲ್ಲಿ ಆಸಕ್ತಿ ಇದೆಯೋ, ಯಾವ ವಿಷಯ ನಮಗೆ ಒಗ್ಗುತ್ತದೆಯೋ ಆ ವಿಷಯದಲ್ಲಿಯೇ ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ನನ್ನ ಉದಾಹರಣೆಯನ್ನೇ ಕೊಡುತ್ತಿದ್ದೇನೆ.

| ಮಂಜುನಾಥ ಸು.ಮ. ಚಿಂತಾಮಣಿ

ಅತ್ಯುತ್ತಮ ಶಿಕ್ಷಕನಾದೆ, ಸಾಹಿತಿಯೂ ಆದೆ

ಅದೆಷ್ಟೇ ತಿಣುಕಿದರೂ ನನಗೆ ಶಾಲೆಯಲ್ಲಿ ಗಣಿತ ತಲೆಗೆ ಹತ್ತಲೇ ಇಲ್ಲ. ಪರಿಣಾಮ ಹತ್ತನೇ ತರಗತಿಯಲ್ಲಿ ಫೇಲಾದೆ! ಇನ್ನೇನು ಮಾಡುವುದು? ರಜೆಯ ಅವಧಿಯಲ್ಲಿ ರಾಣಿಬೆನ್ನೂರು ನಗರದ ಬೀದಿ- ಬೀದಿಯಲ್ಲಿ ಐಸ್​ಕ್ಯಾಂಡಿ ಮಾರಿದೆ, ಅವರಿವರ ಮನೆಗಳಿಗೆ ಸುಣ್ಣ- ಬಣ್ಣ ಹಚ್ಚಿದೆ. ಇದರ ಜತೆ ಕಷ್ಟಪಟ್ಟು ಓದಿ, ಹಾಗೂ- ಹೀಗೂ ಮಾಡಿ 35 ಅಂಕ ಪಡೆದು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸಾದೆ! ಈ ಫೇಲು ಪರಂಪರೆ ಬಿ.ಎಗೂ ಮುಂದುವರಿಯಿತು. ಅರ್ಥಶಾಸ್ತ್ರ ವಿಷಯದಲ್ಲಿ ಫೇಲಾದೆ. ನಂತರ ಅದನ್ನೂ ಪಾಸು ಮಾಡಿದೆ. ಬೇರೆಲ್ಲಾ ವಿಷಯ ಏನಾದರೇನು? ಹಿಂದಿ ನನ್ನ ಅಚ್ಚುಮೆಚ್ಚಿನ ವಿಷಯವಾಗಿತ್ತು. ಅದರಲ್ಲಿಯೇ ಸಾಧನೆ ಮಾಡುವ ಎಂದು ಬಿ.ಎಡ್, ಎಂ.ಎ ಮಾಡಿ ಉತ್ತಮ ಅಂಕ ಗಳಿಸಿದೆ. ನಂತರ ಅದೇ ವಿಷಯದಲ್ಲಿ ಶಿಕ್ಷಕನಾಗಿ ಸರ್ಕಾರಿ ಹುದ್ದೆಯೂ ಸಿಕ್ಕಿತು,‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿಯೂ ದಕ್ಕಿತು. ಈವರೆಗೆ ಐದು ಪುಸ್ತಕಗಳನ್ನು ಬರೆದಿದ್ದೇನೆ. ಒಂದು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ಅನೇಕ ಟೀವಿ ಚಾನೆಲ್​ಗಳಲ್ಲಿ ನನ್ನ ಹಾಸ್ಯ ಕಾರ್ಯಕ್ರಮ ಪ್ರಸಾರವಾಗಿವೆ. ಹಾಗೆ ನೋಡಿದರೆ ನಾನೆಂದೂ ಶೇ 54 ಅಂಕವನ್ನು ದಾಟಿದ್ದೇ ಇಲ್ಲ. ಅದಕ್ಕೇ ಹೇಳುವುದು. ಅಂಕವೇ ಎಲ್ಲವೂ ಅಲ್ಲ.

| ಪರಮೇಶ್ವರಪ್ಪ ಕುದರಿ ಚಿತ್ರದುರ್ಗ

ದನ ಮೇಯಿಸುತ್ತಾ ಓದಿದೆ, ಗೆದ್ದೆ

ಓದಲು ನನಗೆ ಸರಿಯಾದ ಮಾರ್ಗದರ್ಶನ ಸಿಕ್ಕಿರಲಿಲ್ಲ. ಮನೆಯಲ್ಲಿ ಬೇರೆ ಬಡತನ. ಎಸ್​ಎಸ್​ಎಲ್​ಸಿಯಲ್ಲಿ ಫೇಲಾದೆ. ಸಪ್ಲಿಮೆಂಟರಿ ಪರೀಕ್ಷೆಗೆ ಆಗ ಇನ್ನೊಂದು ವರ್ಷ ಕಾಯಬೇಕಿತ್ತು. ಫೇಲಾದ ಕಾರಣಕ್ಕೆ ಅಣ್ಣ ಎರಡು ದನ ತಂದು ಕೊಟ್ಟ. ಬೆಳಗಿನಿಂದ ಸಂಜೆವರೆಗೂ ಅವುಗಳನ್ನು ಮೇಯಿಸಿಕೊಂಡು ಬರುವ ಕೆಲಸ ನನ್ನದಾಯಿತು. ಶಾಲೆಯಂತೂ ಮುಗಿಸಲೇಬೇಕಲ್ಲ. ರಾತ್ರಿ ಓದಲು ಶುರು ಮಾಡಿದೆ. ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಾಸಾದೆ. ಫೇಲಾದದ್ದು ಒಂದು ರೀತಿಯ ಪಾಠವಾಯಿತು ನನಗೆ. ಚೆನ್ನಾಗಿ ಓದಿ ಪಿಯುಸಿಯಲ್ಲಿ ಶೇ. 80 ಅಂಕ ಗಳಿಸಿದೆ. ಶಿಕ್ಷಕನಾಗಿ ಕೆಲಸ ಸಿಕ್ಕಿತು. ಶಾಲೆಯನ್ನು ರಾಜ್ಯಮಟ್ಟದವರೆಗೆ ಗುರುತಿಸಲು ಶ್ರಮ ವಹಿಸಿದ್ದೇನೆ. ಜತೆಗೆ, ಜನಪದ ಕಲೆಯಲ್ಲಿ ಆಸಕ್ತಿ ಇದ್ದ ನಾನು, ಹಂಪಿ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಇಟಗಿ ಉತ್ಸವ ಸೇರಿದಂತೆ ಅನೇಕ ಕಡೆ ಜಾನಪದ ಕಾರ್ಯಕ್ರಮಗಳನ್ನು ನೀಡಿದೆ. 2018 ರಲ್ಲಿ ‘ದಾಟಬೇಡ ಹೊಸ್ತಿಲು’ ಕವನ ಸಂಕಲನವನ್ನೂ ಪ್ರಕಟಿಸಿದೆ. ಹಲವಾರು ಪತ್ರಿಕೆಗಳಲ್ಲಿ ಕವನಗಳು ಪ್ರಕಟವಾಗುತ್ತಿವೆ. ಫೇಲಾದೆನೆಂದು ಹತಾಶೆಯಿಂದ ಕೈಕಟ್ಟಿ ಕುಳಿತುಕೊಳ್ಳದೇ ಮುಂದುವರಿದಿದ್ದಕ್ಕೆ ಇಂದು ಉತ್ತಮ ಶಿಕ್ಷಕನಾಗಿ, ಸಾಹಿತಿಯಾಗಿ, ಕವಿಯಾಗಿ ಗುರುತಿಸಿಕೊಂಡಿದ್ದೇನೆ.

| ಮೈಲಾರಪ್ಪ ಬೂದಿಹಾಳ (ಮುಗಿಲಹಕ್ಕಿ) ಹೊಸೂರು. ಗದಗ

ಗಾರೆ ಕೆಲಸಕ್ಕೆ ಹೋದವ ನಾನು

ಹಾಸನ ಜಿಲ್ಲೆ ಗೋರೂರಿನಲ್ಲಿ ಶಿಕ್ಷಣ ಪಡೆದವ ನಾನು. ಆದರೆ ಮೊದಲಿನಿಂದಲೂ ಅಭ್ಯಾಸ ತಲೆಗೆ ಹತ್ತಿದ್ದೇ ಇಲ್ಲ. ಎಸ್​ಎಸ್​ಎಲ್​ಸಿಯಲ್ಲಿ ಎರಡು ವಿಷಯದಲ್ಲಿ ಫೇಲಾದೆ. ಹಾಗಂತ ತಲೆ ಕೆಡಿಸಿಕೊಳ್ಳಲಿಲ್ಲ. ‘ರಾತ್ರಿ ಆಯ್ತು ಎಂದು ಅಳುತ್ತಾ ಕೂತರೆ ಚಂದ್ರ, ನಕ್ಷತ್ರಗಳನ್ನು ನೋಡುವ ಭಾಗ್ಯ ಕಳೆದುಕೊಳ್ಳುತ್ತೇವೆ’ ಎನ್ನೋ ಮಾತನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡವ ನಾನು. ಮನೆಯಲ್ಲಿ ಬಡತನ ಬೇರೆ. ಪರೀಕ್ಷೆ ಫೇಲಾದರೇನು? ಮತ್ತೊಂದು ಛಾನ್ಸ್ ಇದೆಯಲ್ಲಾ ಎಂದು ಅಲ್ಲಿಯವರೆಗೆ ಗಾರೆ ಕೆಲಸಕ್ಕೆ ಹೋದೆ. ದಿನಕ್ಕೆ 60 ರೂಪಾಯಿ ಕೂಲಿ ಕೊಡುತ್ತಿದ್ದರು. ಅದರಿಂದಲೇ ಒಂದಿಷ್ಟು ಬಟ್ಟೆ ಕೊಂಡೆ. ಸಪ್ಲಿಮೆಂಟರಿಯಲ್ಲಿ ಪರೀಕ್ಷೆ ಬರೆದು ಪಾಸಾದೆ. ನನ್ನಪ್ಪ ಡ್ರಾಮಾ ಮಾಸ್ಟರ್ ಆಗಿದ್ದರಿಂದ ನಟನೆಯ ಬಗ್ಗೆ ಸಹಜವಾಗಿಯೇ ಒಲವಿತ್ತು. ಅದರಲ್ಲಿಯೇ ಮುಂದುವರಿಯುವ ಯೋಚನೆ ಮಾಡಿದೆ. ನನ್ನಂಥವರಿಗೆ ದೇವರಂತೆ ಕಾಣುವವರು ಡಾ. ರಾಜ್​ಕುಮಾರ್. 3ನೇ ಕ್ಲಾಸಿನವರೆಗೆ ಓದಿದ್ದರೂ ಅವರಷ್ಟು ಸುಲಲಿತವಾಗಿ ಹಳೆಗನ್ನಡ, ಶ್ಲೋಕ, ಸಂಗೀತವನ್ನು ಹೇಳುವವರನ್ನು ನಾನು ನೋಡಿದ್ದೇ ಇಲ್ಲ. ಇಂಥವರನ್ನು ಉದಾಹರಣೆಯಾಗಿಟ್ಟುಕೊಂಡು ಅದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಯೋಚನೆ ಮಾಡಿದೆ. ಅಷ್ಟು ದೊಡ್ಡ ಸಿನಿಮಾ ಇಂಡಸ್ಟ್ರಿಯ ಒಳಗೆ ಹೋಗುವುದು ಸುಲಭದ ಮಾತಲ್ಲದಿದ್ದರೂ ಗುರಿಯೊಂದು ನಿಶ್ಚಲವಾಗಿದ್ದರೆ ಯಾವುದೂ ಅಸಾಧ್ಯವಲ್ಲ. ನನ್ನ ಜತೆ ಓದಿದವರು ಒಳ್ಳೊಳ್ಳೆ ಉದ್ಯೋಗದಲ್ಲಿ ಇದ್ದರೂ, ಫೇಲಾದ ನನ್ನನ್ನು ಗುರುತಿಸುವಷ್ಟು ಮಂದಿ ಅವರನ್ನು ಇಂದಿಗೆ ಗುರುತಿಸಲಾರರು ಎನ್ನುವ ಹೆಮ್ಮೆಯೂ ನನಗಿದೆ. ಆದ್ದರಿಂದ ಓದು, ಅಂಕ, ಶಾಲೆ ಎಲ್ಲವೂ ಬೇಕು. ಆದರೆ ಅದೇ ಸರ್ವಸ್ವವಲ್ಲ.

| ಶಿವರಾಜ್ ಕೆ.ಆರ್.ಪೇಟೆ ‘ಕಾಮಿಡಿ ಕಿಲಾಡಿ’ ಖ್ಯಾತಿಯ ನಟ