ಅರ್ಜಿ ಶುಲ್ಕಕ್ಕೆ ಅಂಗವಿಕಲ ಸೋಗು

|ದೇವರಾಜ್ ಎಲ್.

ಬೆಂಗಳೂರು: ಪರೀಕ್ಷಾ ಶುಲ್ಕ ಪಾವತಿಸುವುದರಿಂದ ಬಚಾವ್ ಆಗಲು ದೈಹಿಕವಾಗಿ ಸದೃಢವಾಗಿದ್ದವರೂ ಅಂಗವಿಕಲರೆಂದು ಸುಳ್ಳು ಹೇಳಿ ಅರ್ಜಿ ಸಲ್ಲಿಸುತ್ತಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಗಮನಕ್ಕೆ ಬಂದಿದೆ.

ಕೆಇಎ 1069 ಪಿಯು ಉಪನ್ಯಾಸಕರ ಹುದ್ದೆಗಳ ಭರ್ತಿಗೆ ನ.29ರಿಂದ ದಿ.8ರವರೆಗೆ ಪರೀಕ್ಷೆ ನಡೆಸಲಿದೆ. ಈ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಅಂದಾಜು 24 ಸಾವಿರ ಅರ್ಜಿಗಳು ಬಂದಿವೆ. ಈ ಪೈಕಿ ಅಂಧ ಮತ್ತು ದೃಷ್ಟಿ ಮಾಂಧ್ಯ ಒಂದೇ ವರ್ಗದಲ್ಲಿ 254 ಅರ್ಜಿಗಳು ಸಲ್ಲಿಕೆಯಾಗಿವೆ. ಕೆಇಎ ನಡೆಸುವ ಈ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ವರ್ಗದವರಿಗೆ 2,500 ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 2,000 ರೂ. ಹಾಗೂ ಅಂಗವಿಲಕರಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ. ಇದರ ಪ್ರಯೋಜನ ಪಡೆಯಲು ಸಾಕಷ್ಟು ಜನರು ಅಂಗವಿಕಲ ಕೋಟಾದಲ್ಲಿ ನುಸುಳಿರುವ ಸಾಧ್ಯತೆ ಹೆಚ್ಚಿದೆ.

ಸಿಕ್ಕಿಬಿದ್ದಿದ್ದು ಹೇಗೆ?

ಕೆಇಎ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದಾಗ 254 ಜನರು ಅಂಗವಿಕಲ ಕೋಟಾದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅಂಧ ಮತ್ತು ದೃಷ್ಟಿಮಾಂಧ್ಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಲಿಪಿಕಾರರ ನೀಡಲು ಕೆಇಎ ಅರ್ಜಿ ಆಹ್ವಾನಿಸಿತ್ತು. ಈ ವೇಳೆ ಕೇವಲ 20 ಮಂದಿಗಳು ಮಾತ್ರವೇ ಲಿಪಿಕಾರರ ಅವಶ್ಯಕತೆ ಕೇಳಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಈ ಅಂಗವಿಲಕರು ಕನಿಷ್ಠ ಶೇ.40 ಅಂಗವೈಕಲ್ಯ ಹೊಂದಿರುವುದು ಕಡ್ಡಾಯವಾಗಿದೆ. ಹೀಗಾಗಿ ಲಿಪಿಕಾರರನ್ನು ಕೇಳಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದೇ ಕೆಇಎ ಅನುಮಾನಕ್ಕೆ ಕಾರಣವಾಗಿದೆ.

ದಾಖಲಾತಿ ಪರಿಶೀಲನೆ

ದಾಖಲಾತಿ ಪರಿಶೀಲನೆ ವೇಳೆ ಅಂಗವೈಕಲ್ಯವನ್ನು ಕೆಇಎ ಗಮನಿಸಲಿದೆ. ಇದು ಪರೀಕ್ಷೆ ನಡೆದು, ಫಲಿತಾಂಶ ನೀಡಿದ ಬಳಿಕವಷ್ಟೇ. ಕನಿಷ್ಠ ಶೇ.40ಕ್ಕಿಂತ ಕಡಿಮೆ ಇದ್ದರೆ ಆ ಅಭ್ಯರ್ಥಿಯು ಮೀಸಲಾತಿ ಕೋಟಾದಿಂದ ವಂಚಿತರಾಗುತ್ತಾರೆ.

ಪರೀಕ್ಷೆಗೆ ಅವಕಾಶ?

ಅರ್ಜಿ ಸಲ್ಲಿಸುವ ವೇಳೆ ಅಂಗವೈಕಲ್ಯ ಪತ್ತೆ ಹಚ್ಚಲು ಸಾಧ್ಯವಿಲ್ಲ. ಹೀಗಾಗಿ ಅಂಗವಿಕಲ ಮೀಸಲಾತಿ ಕೋರಿರುವ ಎಲ್ಲರಿಗೂ ಪರೀಕ್ಷೆ ನೀಡಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆ ಕೆಇಎಗೆ ಉಂಟಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಪತ್ತೆ ಹಚ್ಚಲು ಸಾಧ್ಯವಿಲ್ಲದಿರುವುದರಿಂದ ಪರೀಕ್ಷೆಗೆ ಅವಕಾಶ ಕಲ್ಪಿಸುವುದೇ ಉತ್ತಮ ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ. ಅಂಧ ಮತ್ತು ದೃಷ್ಟಿಮಾಂಧ್ಯ ಅಭ್ಯರ್ಥಿಗಳಿಗೆ ಸಾಮಾನ್ಯ ಅಭ್ಯರ್ಥಿಗಳಿಗಿಂತ ಪ್ರತಿ ಗಂಟೆಗೆ 10 ನಿಮಿಷ ಹಾಗೂ ಚಲನವಲನ ವೈಕಲ್ಯತೆ, ಸೆರೆಬ್ರಲ್ ಪಾಲ್ಸಿ ಇರುವವರಿಗೆ 20 ನಿಮಿಷವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ.

ಆಂಗ್ಲ ಭಾಷೆ ಅಂತಿಮ

ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಆಂಗ್ಲಭಾಷೆ ಎರಡರಲ್ಲೂ ಇರಲಿದೆ. ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳಲ್ಲಿ ಏನಾದರೂ ಸಂದೇಹವಿದ್ದಲ್ಲಿ, ಆಂಗ್ಲ ಭಾಷೆಯಲ್ಲಿನ ಪ್ರಶ್ನೆಗಳನ್ನು ನೋಡಬಹುದಾಗಿದ್ದು, ಈ ಪ್ರಶ್ನೆಗಳನ್ನೇ ಅಂತಿಮವೆಂದು ಪರಿಗಣಿಸಲಾಗುತ್ತದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

ಹಲವಾರು ಅಭ್ಯರ್ಥಿಗಳು ಅಂಗವಿಕಲ ಮೀಸಲಾತಿಯನ್ನು ದುರುಪಯೋಗಪಡಿಸಿ ಕೊಂಡಿರುವ ಅನುಮಾನವಿದೆ. ಸದ್ಯದ ಪರಿಸ್ಥಿತಿಯಲ್ಲಿ ಪತ್ತೆ ಹಚ್ಚುವುದು ಕಷ್ಟ. ದಾಖಲಾತಿ ಪರಿಶೀಲನೆ ವೇಳೆ ಸಿಕ್ಕಿ ಬೀಳುತ್ತಾರೆ.

| ಗಂಗಾಧರಯ್ಯ ಕೆಇಎ ಆಡಳಿತಾಧಿಕಾರಿ