ಪರೀಕ್ಷೆ ಬರೆಯಲು ಹೋದ ಬಾಣಂತಿಯ 4 ತಿಂಗಳ ಮಗು ಸಮಾಧಾನ ಪಡಿಸಿದ ಪೊಲೀಸ್​ ಪೇದೆ

ಹೈದರಾಬಾದ್​: ನಾಲ್ಕು ತಿಂಗಳ ಮಗುವಿನ ತಾಯಿ ಪರೀಕ್ಷೆ ಬರೆಯಲು ಕೇಂದ್ರದ ಒಳಕ್ಕೆ ಹೋದಾಗ ಹೊರಗೆ ಅಳುತ್ತಿದ್ದ ಪುಟ್ಟ ಮಗುವನ್ನು ಪೊಲೀಸ್ ಪೇದೆಯೊಬ್ಬರು ಸಮಾಧಾನ ಪಡಿಸುತ್ತ, ಆಟವಾಡಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಈ ಫೋಟೋವನ್ನು ಐಪಿಎಸ್ ಅಧಿಕಾರಿ ರೇಮಾ ರಾಜೇಶ್ವರಿ ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ಅದರಲ್ಲಿ ಪೊಲೀಸ್​ ಕಾನ್​ಸ್ಟೆಬಲ್​ ಹೊರಗಿನ ಬೆಂಚ್​ ಮೇಲೆ ಕುಳಿತುಕೊಂಡು ಮಗುವನ್ನು ಆಟವಾಡಿಸುತ್ತಿದ್ದಾರೆ.

ತೆಲಂಗಾಣ ಜಿಲ್ಲೆಯ ಮೂಸಾಪೆಟ್​ ಪೊಲೀಸ್​ ಠಾಣೆಯ ಹೆಡ್​ ಕಾನ್ಸ್​ಟೆಬಲ್ ಮುಜೀಬ್ ಅರ್​ ರೆಹಮಾನ್​ ಹೀಗ ಮಗುವನ್ನು ನೋಡಿಕೊಂಡು ಸುದ್ದಿಯಾದವರು.

ಮಹಬೂಬ್​ನಗರದ ಬಾಯ್ಸ್​ ಜ್ಯೂನಿಯರ್​ ಪರೀಕ್ಷೆ ಕೇಂದ್ರಕ್ಕೆ ಭದ್ರತೆಗಾಗಿ ಅವರನ್ನು ನಿಯೋಜನೆ ಮಾಡಲಾಗಿತ್ತು. ಪರೀಕ್ಷೆ ಬರೆಯಲು ಬಂದ ಮಹಿಳೆ ಮಗುವನ್ನು ನೋಡಿಕೊಳ್ಳಲು ಜತೆಗೆ 14 ವರ್ಷದ ಬಾಲಕಿಯನ್ನು ಕರೆದುಕೊಂಡು ಬಂದಿದ್ದರು. ಆದರೆ, ಅವರು ಕೇಂದ್ರದ ಒಳಗೆ ಹೋಗುತ್ತಲೇ ಆ ಮಗು ಅಳಲು ಪ್ರಾರಂಭಿಸಿತು. ಅದನ್ನು ನೋಡಿ ಸಮಾಧಾನ ಪಡಿಸಲು ನಾನು ಎತ್ತುಕೊಂಡೆ ಎಂದು ಮುಖ್ಯಪೇದೆ ರೆಹಮಾನ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹಾಗೇ ಪರೀಕ್ಷೆ ಬರೆಯಲು ಬಂದ ಬಾಣಂತಿ ಒಂದು ಹಿಂದುಳಿದ ಕುಟುಂಬದವರು. ಸ್ನಾತಕೋತ್ತರ ಪದವೀಧರರಾದರೂ ಕೆಲಸ ಸಿಕ್ಕಿರಲಿಲ್ಲ. ಹಾಗಾಗಿ ಪರೀಕ್ಷೆ ಬರೆಯಲು ಬಂದಿದ್ದರು ಎಂದು ಹೇಳಿದ್ದಾರೆ.