ನಾನು ಮೊದಲು ಮಂಡ್ಯನ್​ ಆಮೇಲೆ ಇಂಡಿಯನ್​: ನನಗೆ ಮಂಡ್ಯದಿಂದ ಟಿಕೆಟ್​ ಕೊಡಿ ಎಂದ ಬಿಜೆಪಿ ನಾಯಕ ಅಬ್ದುಲ್​ ಅಜೀಮ್​

ಬೆಂಗಳೂರು: ಮುಖ್ಯಮಂತ್ರಿ ಪುತ್ರ ನಿಖಿಲ್​ ಕುಮಾರಸ್ವಾಮಿ, ದಿವಂಗತ ಅಂಬರೀಷ್​ ಪತ್ನಿ ಸುಮಲತಾ ಅವರ ಸ್ಪರ್ಧೆಯ ಮುನ್ಸೂಚನೆಯಿಂದಲೇ ಬಿಸಿಯೇರಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ತಾನೇನು ಮಾಡಬೇಕು ಎಂಬ ಗೊಂದಲದಲ್ಲಿದೆ. ಈ ನಡುವೆಯ ಆ ಪಕ್ಷದ ಮುಖಂಡ ಅಬ್ದುಲ್​ ಅಜೀಮ್​ ಅವರು ನನಗೆ ಟಿಕೆಟ್​ ನೀಡಿ ಎಂದು ಬಿಜೆಪಿಯನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಮಾಜಿ ಪೊಲೀಸ್​ ಅಧಿಕಾರಿಯೂ ಆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅಬ್ದುಲ್​ ಅಜೀಂ “ನಾನು ಮೊದಲು ಮಂಡ್ಯನ್. ಆನಂತರ ಇಂಡಿಯನ್. ನಾನು ನಿಜವಾದ ಮಂಡ್ಯ ಹೀರೋ. ಅಲ್ಲಿ ಸ್ಪರ್ಧಿಸಲು ನನಗೆ ಎಲ್ಲ ಅರ್ಹತೆಗಳಿವೆ. ಮಂಡ್ಯದಲ್ಲಿ ನಮ್ಮ ಕುಟುಂಬಕ್ಕೆ 600 ವರ್ಷಗಳ ಇತಿಹಾಸವಿದೆ. ನನಗೆ ಮಂಡ್ಯದವರನ್ನು ಹೇಗೆ ಮನವೊಲಿಸಬೇಕೆಂಬುದು ಗೊತ್ತಿದೆ. ನನಗೆ ಟಿಕೆಟ್ ಕೊಡಬೇಕು,” ಎಂದು ಅವರು ಒತ್ತಾಯಿಸಿದರು.

“ಟಿಕೆಟ್​ ವಿಚಾರವಾಗಿ ಈಗಾಗಲೇ ನಾನು ಅಮಿತ್ ಷಾ, ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಅಶೋಕ್ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದೇನೆ. ಈ ಹಿಂದೆ ನಾನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಒಂದೂವರೆ ಲಕ್ಷ ಮತ ಪಡೆದಿದ್ದೇನೆ,” ಎಂದೂ ಅಬ್ದುಲ್​ ಅಜೀಂ ಹೇಳಿಕೊಂಡಿದ್ದಾರೆ.