More

    ಮಾಜಿ ಶಾಸಕರ ಮನೆಗೆ ನುಗ್ಗಿ ದರೋಡೆ, ಐವರ ಬಂಧನ

    ಚಿಕ್ಕಮಗಳೂರು: ತರೀಕೆರೆಯ ಮಾಜಿ ಶಾಸಕ ಎಸ್.ಎಂ.ನಾಗರಾಜು ಅವರ ಬಳಿ 5 ಕೋಟಿ ರೂ. ನಗದು ಇದೆ ಎಂಬ ಅನುಮಾನದಲ್ಲಿ ಶನಿವಾರ ಮಧ್ಯರಾತ್ರಿ ಮುಸುಕುಧಾರಿಗಳ ತಂಡ ಶಸ್ತ್ರಾಸ್ತ್ರಗಳೊಂದಿಗೆ ತೋಟದ ಮನೆಗೆ ನುಗ್ಗಿ ಬೆದರಿಸಿ 490 ಗ್ರಾಂ ಚಿನ್ನಾಭರಣ ಮತ್ತು 75 ಸಾವಿರ ರೂ. ನಗದು ದೋಚಿದ್ದಾರೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಐವರನ್ನು ಬಂಧಿಸಿ 190 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

    ಪ್ರಕರಣದಲ್ಲಿ ಸ್ಥಳೀಯನೊಬ್ಬ ಸೇರಿ ಭದ್ರಾವತಿ, ದಾವಣಗೆರೆ, ತುಮಕೂರಿನ ಐವರನ್ನು ಬಂಧಿಸಿದ್ದು ತಲೆಮರೆಸಿಕೊಂಡ 10ಕ್ಕೂ ಅಧಿಕ ಮಂದಿ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ದರೋಡ ಸುದ್ದಿ ತಿಳಿಯುತ್ತಿದ್ದಂತೆ ತಡರಾತ್ರಿಯೇ ಎಸ್ಪಿ ಉಮಾ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
    ಈ ವೇಳೆ 43.33 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು75 ಸಾವಿರ ರೂ. ನಗದು ದರೋಡೆ ಮಾಡಿರುವುದಾಗಿ ಮಾಜಿ ಶಾಸಕ ನಾಗರಾಜು ಅವರು ಎಸ್ಪಿಗೆ ಮಾಹಿತಿ ನೀಡಿದರು. ಎಎಸ್‌ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಅಜ್ಜಂಪುರ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೆಲವರು ತಲೆಮರೆಸಿಕೊಂಡವರ ಹುಡುಕಾಟ ಮುಂದುವರಿಸಿದ್ದಾರೆ.

    ಏನಿದು ಪ್ರಕರಣ ?
    ಮಾಜಿ ಶಾಸಕ ಎಸ್.ಎಂ.ನಾಗರಾಜು ಅವರು ಅಜ್ಜಂಪುರ ತಾಲೂಕಿನ ಗಡೀಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಎಂದಿನಂತೆ ಕುಟುಂಬದವರು ರಾತ್ರಿ ಮನೆ ಬಾಗಿಲು ಚಿಲಕ ಹಾಕಿ ಮಲಗಿದ್ದರು. ಸಂಬಂಧಿಕರ ಮದುವೆ ಕಾರ್ಯವಿದ್ದ ಕಾರಣ ಮನೆಯಲ್ಲಿ ಮಹಿಳೆಯರೂ ಇದ್ದರು. ಹಾಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಮಾಜಿ ಶಾಸಕರ ಮನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತದಾರರಿಗೆ ಹಂಚಲು 5 ಕೋಟಿ ರೂ. ನಗದು ಸಂಗ್ರಹಿಸಲಾಗಿದೆ ಎಂಬ ಅನುಮಾನದ ಮೇಲೆ 15ಕ್ಕೂ ಅಧಿಕ ಮಂದಿ ಮುಸುಕುಧಾರಿಗಳು ತಡರಾತ್ರಿ 1.30ರ ಸುಮಾರಿಗೆ ಪಿಸ್ತೂಲ್, ಮಚ್ಚು, ಲಾಂಗ್‌ನೊಂದಿಗೆ ಮನೆ ಬಾಗಿಲು ಮುರಿದು ಒಳನುಗ್ಗಿದ್ದರು.
    ಬಳಿಕ ಇಡೀ ಮನೆ ಜಾಲಾಡಿದರೂ ದರೋಡೆಕೋರರಿಗೆ 5 ಕೋಟಿ ರೂ. ಸಿಕ್ಕಿಲ್ಲ. ಈ ವೇಳೆ ಮಾಸ್ಕ್, ಮಂಕಿಟೋಪಿ ಹಾಕಿದ್ದ ದರೋಡೆಕೋರರು ಚುನಾವಣೆ ಹಣ ಎಲ್ಲಿಟ್ಟಿದ್ದೀಯಾ ಎಂದು ಬೆದರಿಕೆ ಹಾಕಿದ್ದರು. ಯಾವ ಹಣವೂ ನಮ್ಮ ಮನೆಯಲ್ಲಿಲ್ಲವೆಂದು ನಾಗರಾಜು ಹೇಳಿದಾಗ ಸಿಟ್ಟಿನಿಂದ ಮುಖಕ್ಕೆ ಹಲ್ಲೆ ಮಾಡಿದ್ದಾರೆ.
    ತಮ್ಮ ಯೋಜನೆ ಪ್ರಕಾರ ಚುನಾವಣಾ ಹಣ ಇಲ್ಲದಿರುವುದನ್ನು ಅರಿತ ದರೋಡೆಕೋರರು ಮನೆಯಲ್ಲಿದ್ದ ಮಹಿಳೆಯರ ಚಿನ್ನಾಭರಣ ಕಸಿದುಕೊಂಡಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ 75 ಸಾವಿರ ರೂ. ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts