ಹುಬ್ಬಳ್ಳಿ: ಕೋವಿಡ್ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿ ಯಡಿಯೂರಪ್ಪನವರು ಎಲ್ಲರನ್ನೂ ರಕ್ಷಣೆ ಮಾಡಿದ್ದಾರೆ. ಅವರು ಮುಖ್ಯಮಂತ್ರಿ ಇಲ್ಲದಿದ್ದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗಿತ್ತು. ಇಷ್ಟು ದಿನ ಸುಮ್ಮನಿದ್ದು, ಈಗ ಕಾಂಗ್ರೆಸ್ ನವರು ಹಗರಣ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಮಾಜಿ ಶಾಸಕ ರಾಜುಗೌಡ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರ ಕಥೆ ಸಂತೆಗಳಲ್ಲಿ ಹಾವಾಡಿಸಿದಂತಾಗಿದೆ. ಹಾವು ತೋರಿಸುತ್ತೇನೆ ಅಂತ ಕೊನೆವರೆಗೂ ತೋರಿಸುವುದೇ ಇಲ್ಲವಲ್ಲ, ಹಾಗೇ ಹಗರಣ ಇದ್ದರೆ ತಾನೇ ಇವರು ತೋರಿಸೋದು ಎಂದು ಲೇವಡಿ ಮಾಡಿದರು.
ಶಿಗ್ಗಾಂವಿ ಕ್ಷೇತ್ರವನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಹಾಗಾಗಿಯೇ ಇಡೀ ಸರ್ಕಾರವೇ ಕ್ಷೇತ್ರದಲ್ಲಿ ಬಂದು ಕುಳಿತಿದೆ. ಪಂಚಾಯಿತಿಗೆ ಒಬ್ಬ ಮಿನಿಸ್ಟರ್, ಎಂಎಲ್ಎ ನಿರ್ವಹಣೆ ಮಾಡುತ್ತಿದ್ದಾರೆ. ಏನೇ ಮಾಡಿದರೂ ಶಿಗ್ಗಾಂವಿಯಲ್ಲಿ ಭರತ ಬೊಮ್ಮಾಯಿ ಗೆಲ್ಲುವುದು ನಿಶ್ಚಿತ ಎಂದರು.
ಯಡಿಯೂರಪ್ಪ ಮತ್ತು ರಾಮುಲು ಅವರ ಮೇಲೆ ಕ್ರಿಮಿನಲ್ ಕೇಸ್ ಎಂದು ಬಹಳ ದಿನದಿಂದ ಬೆದರಿಕೆ ಹಾಕುತ್ತಿದ್ದಾರೆ. ಕಾಂಗ್ರೆಸ್ ನವರು ಸಾಕಷ್ಟು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ವಾಲ್ಮೀಕಿ ನಿಗಮ ಹಗರಣದಲ್ಲಿ 187 ಕೋಟಿಯಲ್ಲ, 87 ಕೋಟಿ ರೂ. ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿಯವರಿಗೆ ಬೆದರಿಕೆ ಹಾಕಲಾಗುತ್ತಿದ್ದು, ಇದರಿಂದ ನಮ್ಮ ನಾಯಕರು ಸುಮ್ಮನಾಗುತ್ತಾರೆ ಎಂದು ತಿಳಿದಿದ್ದಾರೆ ಎಂದು ಗುಡುಗಿದರು.
ವಕ್ಫ ಸಮಸ್ಯೆ ಎಲ್ಲ ಜಿಲ್ಲೆಗಳಲ್ಲೂ ಇದೆ. ಕೇವಲ ನೋಟಿಸ್ ವಾಪಸ್ ಪಡೆದರೆ ಸಾಲದು. ವಕ್ಪ ಎಂದು ಇದ್ದರೆ ಆ ಜಮೀನು ಯಾರು ಖರೀದಿಸುತ್ತಾರೆ? ಹಾಗಾಗಿ ಶಾಶ್ವತ ಪರಿಹಾರ ನೀಡಬೇಕು ಎಂದರು.
ನಮ್ಮದು ಒಬ್ಬರ ಪಕ್ಷವಲ್ಲ, ಪ್ರಜಾಪ್ರಭುತ್ವ ನಂಬಿದೆ. ಹೀಗಾಗಿ ನಮ್ಮ ನಾಯಕರ ಕಾಲು ನಾವೇ ಎಳೆಯುತ್ತೇವೆ ಎಂದು ರಾಜುಗೌಡ ಬಿಜೆಪಿ ಬಣಗಳ ಕುರಿತು ಪ್ರತಿಕ್ರಿಯಿಸಿದರು.