ಐಸಿಐಸಿಐ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್​, ಪತಿ ದೀಪಕ್​ ಕೊಚ್ಚಾರ್​ ವಿರುದ್ಧ ಕೇಸ್​ ದಾಖಲಿಸಿದ ಸಿಬಿಐ

ಮುಂಬೈ: ಐಸಿಐಸಿಐ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್​ ಹಾಗೂ ಅವರ ಪತಿ ದೀಪಕ್​ ಕೊಚ್ಚಾರ್​, ವಿಡಿಯೋಕಾನ್​ ಮುಖ್ಯಸ್ಥ ವೇಣುಗೋಪಾಲ್​ ಧೂಟ್​ ಅವರ ವಿರುದ್ಧ ಅಕ್ರಮ ಸಾಲ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.

ಸಿಬಿಐ ಗುರುವಾರ ಮುಂಬೈ, ಔರಾಂಗಾಬಾದ್​ ಹಾಗೂ ಮಹಾರಾಷ್ಟ್ರದಲ್ಲಿರುವ ವಿಡಿಯೋಕಾನ್​ ಮುಖ್ಯಕಚೇರಿಗಳಲ್ಲಿ ತಪಾಸಣೆ ನಡೆಸಿದೆ.

2012ರಲ್ಲಿ ವಿಡಿಯೋಕಾನ್​ ಗ್ರೂಪ್​ಗೆ 3,250 ಕೋಟಿ ರೂಪಾಯಿ ಸಾಲ ಅಕ್ರಮವಾಗಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದಾ ಕೊಚ್ಚಾರ್​ ಐಸಿಐಸಿಐ ಬ್ಯಾಂಕ್​ನ ಸಿಇಒ, ಎಂಡಿ ಸ್ಥಾನದಿಂದ ಕಳೆದ ವರ್ಷ ಹೊರ ನಡೆದಿದ್ದರು. ವಿಡಿಯೋಕಾನ್​ ಗ್ರೂಪ್​ಗೆ ಅಕ್ರಮ ಸಾಲ ನೀಡುವ ಒಪ್ಪಂದದಲ್ಲಿ ಚಂದಾ ಕೊಚ್ಚಾರ್​, ಆಕೆಯ ಪತಿ ದೀಪಕ್​ ಕೊಚ್ಚಾರ್​ ಮತ್ತು ಅವರ ಕುಟುಂಬ ಲಾಭ ಪಡೆದಿದೆ ಎಂದು ವಿಶಲ್​ ಬ್ಲೋವರ್​ ಆರೋಪಿಸಿದ್ದರು.
ಐಸಿಐಸಿಐ ಬ್ಯಾಂಕ್​ನಿಂದ ಸಾಲ ಪಡೆದ ವಿಡಿಯೋಕಾನ್​ ಗ್ರೂಪ್ ಮುಖ್ಯಸ್ಥ ವೇಣುಗೋಪಾಲ್​ ಧೂತ್,​ ದೀಪಕ್​ ಕೊಚ್ಚಾರ್​ ಅವರ ನುಪವರ್​ ರಿನಿವೇಬಲ್ಸ್​ ಕಂಪನಿಯಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ಹೂಡಿಕೆ ಮಾಡಿದ್ದರು.