ಬೆಂಗಳೂರು: ಪ್ರೀತಿ ಮುರಿದು ಬಿದ್ದ ಮೇಲೂ ಮದುವೆಯಾದಿ ಸುಖ ಸಂಸಾರ ಮಾಡಿದವರು ಅನೇಕರಿದ್ದಾರೆ. ಆದರೆ ಮದುವೆ ಆದ ಮೇಲೆ ಹಳೆ ಪ್ರೇಯಸಿ ಕರೆದಿದ್ದಕ್ಕೆ ಹೆಂಡತಿಯನ್ನು ಬಿಟ್ಟು ಹೋಗುವುದು ಮಾತ್ರ ಅಪರೂಪದ ಘಟನೆ.

ಈ ವಿಚಿತ್ರ ಘಟನೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದಿದ್ದು ಈ ಪತಿರಾಯ ಮದುವೆಯಾದ್ದೇ ಫೆ.15ರಲ್ಲಿ. ಇವರಿಬ್ಬರೂ ಮದುವೆಯಾಗಿ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು.
ಈ ಹಿಂದೆ ಕೆಲ ತಿಂಗಳ ಮೊದಲು ಈ ಯುವಕ ಗೋವಾದಲ್ಲಿ ವಾಸವಿದ್ದ ಎನ್ನಲಾಗಿದೆ. ಅಲ್ಲಿ ಬೇರೆ ಯುವತಿಯ ಜೊತೆಗೆ ಸಂಭಂದ ಹೊಂದಿದ್ದ. ಆದರೆ ಇತ್ತಕಡೆ ಈತನ ಕುಟುಂಬದವರು ಇತ್ತೀಚಿಗೆ ಒಂದು ಸಂಭಂದ ನೋಡಿ ಮದುವೆ ಮಾಡಿದ್ದರು. ಮದುವೆಯಾದ ಹೊಸತರಲ್ಲಿ ನವ ದಂಪತಿಗಳಂತೆಯೇ ಎಲ್ಲೆಡೆ ಸುತ್ತಾಡಿದ್ದಾರೆ. ಇಬ್ಬರು ಸಹ ಕಾರಿನಲ್ಲಿ ದೇವಸ್ಥಾನಕ್ಕೆ ತೆರಳಿದ್ದಾರೆ.
ಆದರೆ ಮನೆಗೆ ವಾಪಸ್ ಆಗುವ ಮಾರ್ಗ ಮಧ್ಯದಲ್ಲಿ ಹಳೆ ಗೆಳತಿಯ ಕರೆ ಬಂದಿದೆ. ಅಷ್ಟಕ್ಕೇ ಉತ್ಸಾಹಕ್ಕೆ ಒಳಗಾದ ಯುವಕ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಅಲ್ಲಿಂದ ಪತ್ನಿ ಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ! ಈ ವಿಚಾರದಲ್ಲಿ ಮೊದಲೇ ಅನುಮಾನ ಹೊಂದಿದ್ದ ಯುವತಿ ಪತಿಯನ್ನು ಹಿಂಬಾಲಿಸಿ ಹೋದ್ರು ಉಪಯೋಗವಾಗಿಲ್ಲ. ಆತ ಅದಾಗಲೇ ಎಸ್ಕೇಪ್ ಆಗಿದ್ದ. ಸದ್ಯಕ್ಕೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓಡಿ ಹೋದ ಯುವಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.