ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊನೆಗೂ ‘ಕಾವೇರಿ’ ವಸತಿ ಗೃಹವನ್ನು ತ್ಯಜಿಸಿದ್ದು, ಸರ್ಕಾರ ನೀಡಿದ ಹೊಸಮನೆ ಪ್ರವೇಶಿಸಿದ್ದಾರೆ. 2013ರಲ್ಲಿ ಮುಖ್ಯಮಂತ್ರಿಯಾದ ಬಳಿಕ ಅವರು ಕಾವೇರಿ ನಿವಾಸ ಆಯ್ಕೆ ಮಾಡಿಕೊಂಡಿದ್ದರು.
2018ರಲ್ಲಿ ಚುನಾವಣೆ ಸೋತು ಕೇವಲ ಶಾಸಕರಾದರೂ ವಸತಿಗೃಹ ತ್ಯಜಿಸಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕೈಗಾರಿಕೆ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಗೆ ಕಾವೇರಿ ಹಂಚಿಕೆ ಮಾಡಿಸಿಕೊಂಡು, ತಾವು ಅಲ್ಲೇ ಮುಂದುವರಿದಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರ ಪತನವಾದ ಬಳಿಕ ಪ್ರತಿಪಕ್ಷ ನಾಯಕ ಸ್ಥಾನ ಅರಸಿ ಬಂದಿತ್ತು. ಕಾಂಗ್ರೆಸ್ ಹೈಕಮಾಂಡ್ ಪ್ರತಿಪಕ್ಷ ನಾಯಕ ಸ್ಥಾನ ನೀಡಿದರೆ ಸರ್ಕಾರದಿಂದ ಪುನಃ ಇದೇ ಮನೆ ಮಂಜೂರು ಮಾಡಿಕೊಂಡು ಅಲ್ಲೇ ಮುಂದುವರಿಯಲು ಇಚ್ಛಿಸಿದರು.
ಆದರೆ, ಸರ್ಕಾರ ಮಾತ್ರ ಕಾವೇರಿ ನಿವಾಸವನ್ನು ಸಿದ್ದರಾಮಯ್ಯಗೆ ನೀಡಲು ಆಸಕ್ತಿ ತೋರಲಿಲ್ಲ. ಪ್ರತಿನಿತ್ಯ ಸಿಎಂ ಯಡಿಯೂರಪ್ಪ ಅವರು ಓಡಾಟಕ್ಕೆ ಕಾವೇರಿ ನಿವಾಸವೇ ಸೂಕ್ತ ಮತ್ತು ಸಿಎಂ ಗೃಹ ಕಚೇರಿ ಪಕ್ಕದಲ್ಲಿಯೇ ವಸತಿ ಇದ್ದರೆ ಅನುಕೂಲ ಎಂದು ಭಾವಿಸಿತು. ಈ ಕಾರಣಕ್ಕೆ ವಸತಿಗೃಹ ಖಾಲಿ ಮಾಡುವಂತೆ ಸಿದ್ದರಾಮಯ್ಯಗೆ ಅನೇಕ ಬಾರಿ ನೋಟಿಸ್ ನೀಡಿತ್ತು. ಗಾಂಧಿ ಭವನ ಹಿಂಭಾಗದ ಕುಮಾರಕೃಪ ಅನೆಕ್ಷರ್-ಒನ್ ವಸತಿ ಗೃಹವನ್ನು ಅವರಿಗೆ ನೀಡಿತು. ಬುಧವಾರದಿಂದಲೇ ಹೊಸ ವಸತಿ ಗೃಹಕ್ಕೆ ಸ್ಥಳಾಂತರವಾಗಿದ್ದಾರೆ.