ಆರ್ಥಿಕ ದುರ್ಬಲರಿಗೆ ಮೀಸಲಾತಿಯಿಂದ ಹಾಲಿ ಮೀಸಲು ಪದ್ಧತಿಗೆ ಧಕ್ಕೆ ಇಲ್ಲ

ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ

ಚೆನ್ನೈ: ಆರ್ಥಿಕ ದುರ್ಬಲರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಶೇ.10 ಮೀಸಲು ನೀತಿಯಿಂದ ಹಾಲಿಯಿರುವ ಮೀಸಲು ಪದ್ಧತಿಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡಿನ ಪ್ರವಾಸದಲ್ಲಿರುವ ಅವರು ಭಾನುವಾರ ಚೆನ್ನೈನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಆರ್ಥಿಕ ದುರ್ಬಲರಿಗೆ ಜಾರಿಗೊಳಿಸಿರುವ ಶೇ.10 ಮೀಸಲು ನೀತಿ ಕುರಿತು ತಮಿಳುನಾಡಿನಲ್ಲಿ ಕೆಲವರು ಅನುಮಾನ ಮತ್ತು ಅಪನಂಬಿಕೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದು ತಪ್ಪು ಎಂದರು.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡುವ ಸಲುವಾಗಿ ಆರ್ಥಿಕ ದುರ್ಬಲರಿಗೂ ಮೀಸಲು ನೀಡಲಾಗುತ್ತಿದೆ. ದಲಿತರು, ಬುಡಕಟ್ಟು ಜನರ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಈ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಪ್ರತಿಪಕ್ಷಗಳ ಮಹಾಘಟಬಂಧನದ ವಿರುದ್ಧ ಮತ್ತೊಮ್ಮೆ ಹರಿಹಾಯ್ದ ಪ್ರಧಾನಿ ಮೋದಿ, ದೇಶದ ಕಾವಲುಗಾರನನ್ನು ಕಿತ್ತೊಗೆಯಲು ತಮ್ಮ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಜನರು ಒಂದಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ತೊಪ್ಪೂರು ಬಳಿ 1,264 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದರು. ತಮಿಳುನಾಡಿನ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಲಿರುವ 12 ಪಾಸ್​ಪೋಟ್​ರ್ ಸೇವಾ ಕೇಂದ್ರಗಳಿಗೂ ಚಾಲನೆ ನೀಡಿದರು.