ಚಿಕ್ಕಬಳ್ಳಾಪುರ: ದುಶ್ಚಟಗಳು ಉತ್ತಮ ಬದುಕಿಗೆ ಕಂಟಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಸರ್.ಎಂ.ವಿ.ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶುಕ್ರವಾರ ಕೈಗೊಂಡಿದ್ದ ವಿಶ್ವ ತಂಬಾಕು ರಹಿತ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಕುತೂಹಲ, ಆಕರ್ಷಣೆಯಿಂದ ವಿದ್ಯಾರ್ಥಿ ಯುವ ಜನರಲ್ಲಿ ಆರಂಭವಾಗುವ ತಂಬಾಕು ಉತ್ಪನ್ನಗಳ ಸೇವನೆಯ ಆಸಕ್ತಿಯು ಕಡೆಗೆ ಚಟವಾಗಿ ಪರಿವರ್ತನೆಯಾಗುತ್ತದೆ. ನಿಧಾನವಾಗಿ ಇಡೀ ಬದುಕನ್ನು ಸರ್ವನಾಶ ಮಾಡಿ ಬಿಡುತ್ತದೆ ಎಂದರು.
ಅಂದಾಜಿನ ಪ್ರಕಾರ ಪ್ರಸ್ತುತ ಭಾರತದಲ್ಲಿ ಶೇ.28 ರಷ್ಟು ಜನರು ತಂಬಾಕು ವ್ಯಸನಿಗಳಿದ್ದು ಅಪಾಯಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುತ್ತಿದ್ದರೂ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ದುಶ್ಚಟಗಳ ಅಭ್ಯಾಸವು ಸುಲಭ. ಆದರೆ, ತ್ಯಜಿಸುವುದು ತುಂಬಾ ಕಷ್ಟ ಎಂಬುದನ್ನು ಅರಿಯಬೇಕು. ಯುವಜನರು ತಂಬಾಕು ಉತ್ಪನ್ನಗಳಿಂದ ದೂರವಿದ್ದು ಆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ. ಗಂಟಲು, ಶ್ವಾಸಕೋಶ, ನರಗಳು ದುರ್ಬಲಗೊಂಡು, ಕೊನೆಗೆ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಅನ್ಯರ ಧೂಮಪಾನವು ಸಮೀಪವರ್ತಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಸರ್. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಿವ ಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಂ.ಪ್ರಕಾಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್, ಮನೋವೈದ್ಯ ಡಾ.ನಂದ ಕಿಶೋರ್, ಎನ್.ಒ.ಹೆಚ್.ಪಿ.ನೋಡಲ್ ಆರೋಗ್ಯ ಅಧಿಕಾರಿ ಡಾ.ಚಿತ್ತ್ ಕಲಾ ಉಮೇಶ್ ಪಾಟೀಲ್, ಸರ್ ಎಂ.ವಿ. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜಿ.ವಿ. ಹನುಮಂತರೆಡ್ಡಿ ಮತ್ತಿತರರು ಇದ್ದರು.
* ಪ್ರತಿಜ್ಞಾ ವಿಧಿ ಸ್ವೀಕಾರ
ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸರ್ ಎಂ.ವಿ. ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳ ಕುರಿತು ನಾಟಕ ಪ್ರದರ್ಶನದ ಮೂಲಕ ಗಮನ ಸೆಳೆದರು.