ಕರುಣ್​ ನಾಯರ್​ ಆಯ್ಕೆ ಕುರಿತು ನಾಯಕ ವಿರಾಟ್​ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತಾ?

>

ರಾಜ್​ಕೋಟ್​: ಕರ್ನಾಟಕದ ಪ್ರತಿಭಾವಂತ ಆಟಗಾರ ತ್ರಿಶತಕ ವೀರ ಕರುಣ್​ ನಾಯರ್​ ಅವರನ್ನು ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡದಿರುವ ಕುರಿತು ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮೌನ ಮುರಿದಿದ್ದು, ತಂಡದ ಆಯ್ಕೆ ನನ್ನ ಕೆಲಸವಲ್ಲ. ಕರುಣ್​ ನಾಯರ್​ ಅವರನ್ನು ತಂಡದಿಂದ ಕೈಬಿಟ್ಟಿರುವುದರಲ್ಲಿ ನನ್ನ ಪಾತ್ರವೇನೂ ಎಂದು ತಿಳಿಸಿದ್ದಾರೆ.

ತಂಡವನ್ನು ಆಯ್ಕೆ ಮಾಡುವುದು ಆಯ್ಕೆದಾರರ ಕೆಲಸ. ಒಂದು ತಂಡವಾಗಿ ನಾವು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ. ಪ್ರತಿಯೊಬ್ಬರಿಗೂ ತಮ್ಮ ಕರ್ತವ್ಯದ ಕುರಿತು ಅರಿವಿರಬೇಕು. ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ನಾನು ಮತ್ತೊಮ್ಮೆ ಈ ವಿಷಯದ ಕುರಿತು ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ಪೃಥ್ವಿ ಷಾ ಪದಾರ್ಪಣೆ

ಈ ವರ್ಷದ ಆರಂಭದಲ್ಲಿ 19 ವಯೋಮಿತಿ ತಂಡವನ್ನು ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ ಮುಂಬೈನ ಯುವ ಬ್ಯಾಟ್ಸ್​ಮನ್ ಪೃಥ್ವಿ ಷಾ ರಾಜ್​ಕೋಟ್​ನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ರನ್​ಹೊಳೆಯನ್ನೇ ಹರಿಸಿ ಗಮನ ಸೆಳೆದಿದ್ದ ಕರ್ನಾಟಕದ ಆರಂಭಿಕ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್​ಗೆ ಮೊದಲ ಟೆಸ್ಟ್​ನಲ್ಲಿ ಸ್ಥಾನ ಸಿಕ್ಕಿಲ್ಲ. ಈ ಮೂಲಕ ಅವರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲು ಇನ್ನಷ್ಟು ಸಮಯ ಕಾಯಬೇಕಿದೆ. (ಏಜೆನ್ಸೀಸ್​)