ಧೋನಿಗೆ ವಯಸ್ಸಾಗಿ ವೀಲ್​ ಚೇರ್​ನಲ್ಲಿ ಕುಳಿತರೂ ನನ್ನ ತಂಡದಲ್ಲಿ ಆಡಿಸುವೆ: ಡಿವಿಲಿಯರ್ಸ್​

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಗೂ ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​ ಟೀಂ ಇಂಡಿಯಾದ ಕೂಲ್​ ಕ್ಯಾಪ್ಟನ್​ ಎಂ.ಎಸ್​.ಧೋನಿ ಅವರನ್ನು ಮನತುಂಬಿ ಹೊಗಳಿದ್ದಾರೆ.

ಧೋನಿ ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರಿಗೆ ಹೋಲಿಕೆಯೇ ಇಲ್ಲ. ಧೋನಿ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆ ಮಾಡ ಹೊರಟರೆ ಅದು ವ್ಯರ್ಥ. ಯಾಕೆಂದರೆ, ಆಯ್ಕೆಯೇ ಇಲ್ಲ. ನಿವೃತ್ತಿ ನಂತರದ ದಿನಗಳಲ್ಲೂ ಟೀಂ ಇಂಡಿಯಾದ ಭಾಗವಾಗಿ ಧೋನಿ ಉಳಿಯಬೇಕಿದೆ. ಧೋನಿ ಅವರ ಪ್ರತಿಭೆ ಹಾಗೂ ಅವರ ವಿಕೆಟ್​​ ಕೀಪಿಂಗ್​ ತಂತ್ರಗಾರಿಕೆ ಅಮೋಘವಾಗಿದ್ದು, ಯುವ ಆಟಗಾರ ಮಾರ್ಗದರ್ಶಿಯಾಗಿ ಅವರ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಂಡ ಹನ್ನೊಂದರಲ್ಲಿ ಧೋನಿ ಅವರ ಸ್ಥಾನವನ್ನು ಬದಲಾಯಿಸಬೇಕೆ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿ ಡಿವಿಲಿಯರ್ಸ್​, ಧೋನಿ ಅವರಿಗೆ 80 ವರ್ಷ ವಯಸ್ಸಾಗಿ ವೀಲ್ ಚೇರ್ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ಬಂದರೂ ನನ್ನ ತಂಡದಲ್ಲಿ ಅವರನ್ನು ಪ್ರತಿದಿನ, ಪ್ರತಿವರ್ಷವೂ ಆಡಿಸುತ್ತೇನೆ ಎಂದು ಡಿವಿಲಿಯರ್ಸ್​ ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಕಳೆದ ವರ್ಷ ಆಂಗ್ಲರ ನೆಲದಲ್ಲಿ ನಡೆದ ಚಾಂಪಿಯನ್ಸ್​ ಟ್ರೋಫಿ ಹಾಗೂ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಧೋನಿ ಅವರು ತಮ್ಮ ಫಾರ್ಮ್​ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದರು. ನಂತರ ಐಪಿಎಲ್​ನಲ್ಲಿ ಚೆನ್ನೈ ತಂಡಕ್ಕೆ ಮರಳಿದ ನಂತರ ಸ್ವಲ್ಪ ಚೇತರಿಕೆ ಕಂಡಿದ್ದರು. ಆದರೆ, ಈ ವರ್ಷ ಆಂಗ್ಲರ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಮತ್ತೆ ಫಾರ್ಮ್​ ಕಳೆದುಕೊಂಡರು. 9 ಪಂದ್ಯಗಳಲ್ಲಿ ಕೇವಲ 156 ರನ್​ ಗಳಿಸಿ ಟೀಕೆಗೆ ಗುರಿಯಾಗಿದ್ದರು. ಈ ಕುರಿತಾಗಿ ಧೋನಿ ಅವರ ಸ್ಥಾನ ಬದಲಾವಣೆಗೆ ಕಾಲ ಬಂದಿದೆಯಾ ಎಂಬ ಮಾಧ್ಯಮ ಪ್ರಶ್ನೆಗೆ ಡಿವಿಲಿಯರ್ಸ್​ ಈ ಮೇಲಿನಂತೆ ಉತ್ತರಿಸಿದ್ದಾರೆ. (ಏಜೆನ್ಸೀಸ್​)