ಆಂಬುಲೆನ್ಸ್, ಪೊಲೀಸ್ ವಾಹನ ತಪಾಸಣೆ: ಚುನಾವಣಾ ಅಕ್ರಮ ತಡೆಗೆ ಕ್ರಮ

<<ವಿಶೇಷಾಧಿಕಾರಿ ಮನೀಷ್ ಮೌದ್ಗಿಲ್ ಸೂಚನೆ>>

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ ಸೇರಿ ಇನ್ನಿತರ ವಸ್ತುಗಳ ಸಾಗಣೆ ತಡೆಗೆ ಆಂಬುಲೆನ್ಸ್, ಪೊಲೀಸ್ ವಾಹನಗಳನ್ನು ತಪಾಸಣೆಗೊಳಪಡಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಬಿಬಿಎಂಪಿ ವ್ಯಾಪ್ತಿಯ ಚುನಾವಣಾ ವಿಶೇಷ ಅಧಿಕಾರಿ ಯಾಗಿ ನೇಮಕಗೊಂಡ ನಂತರ ಅಧಿಕಾರಿಗಳೊಂದಿಗೆ ಮೊದಲ ಬಾರಿ ಸಭೆ ನಡೆಸಿದ ಮನೀಷ್ ಮೌದ್ಗಿಲ್, ಚುನಾವಣಾ ಅಕ್ರಮ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಚುನಾವಣೆಗಾಗಿ ಮತದಾರರಿಗೆ ಹಂಚಲು ವಸ್ತುಗಳನ್ನು ಕೊಂಡೊಯ್ಯಲು ಆಂಬುಲೆನ್ಸ್ ಬಳಸುವ ಸಾಧ್ಯತೆಗಳಿವೆ. ಈ ಬಗ್ಗೆ ಕೆಲ ದೂರುಗಳು ಕೂಡ ಬಂದಿವೆ. ಹೀಗಾಗಿ ಚೆಕ್​ಪೋಸ್ಟ್​ಗಳಲ್ಲಿ ಅನುಮಾನ ಬಂದ ಆಂಬುಲೆನ್ಸ್ ಗಳನ್ನು ತಪಾಸಣೆ ನಡೆಸಲಾಗುವುದು. ಅದರ ಜತೆಗೆ ಪೊಲೀಸ್ ವಾಹನ ಸೇರಿ ಸರ್ಕಾರಿ ವಾಹನಗಳನ್ನು ಪರಿಶೀಲಿಸಲಾಗುವುದು ಎಂದು ಸಭೆ ನಂತರ ತಿಳಿಸಿದರು.

ಈಗಾಗಲೇ ಸಿಬ್ಬಂದಿ, ಅಧಿಕಾರಿಗಳಿಗೆ ತಮ್ಮ ಚುನಾವಣಾ ಕೆಲಸದ ಬಗ್ಗೆ ತಿಳಿಸಿಕೊಡಲಾಗಿದೆ. ಅದನ್ನು ಅವರು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು.

ಒಂದು ವೇಳೆ ಚುನಾವಣಾ ಕರ್ತವ್ಯ ನಿರ್ಲಕ್ಷಿಸುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೆಚ್ಚ ಬಹಿರಂಗಪಡಿಸಿ: ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೂ ಮುನ್ನ ರಾಷ್ಟ್ರೀಯ ಪಕ್ಷಗಳು, ಎಲ್ಲ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಮಾಡಿರುವ ವೆಚ್ಚದ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಮನೀಷ್ ಮೌದ್ಗಿಲ್ ಸೂಚಿಸಿದರು.

ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆಯೂ ಮೌದ್ಗಿಲ್ ಸಭೆ ನಡೆಸಿದರು.

49 ಸಾವಿರ ಲೀಟರ್ ಮದ್ಯ ವಶ: ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 22 ಲಕ್ಷ

ರೂ.ಗೂ ಹೆಚ್ಚಿನ ಹಣವನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ 2 ಕೋಟಿ ರೂ. ಮೌಲ್ಯದ 49 ಸಾವಿರ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 3 ಕ್ಷೇತ್ರಗಳಿಗೆ ಒಟ್ಟು 181 ಸ್ಟಾ್ಯಟಿಕ್ ಸರ್ವೆವಲೆನ್ಸ್ ತಂಡಗಳನ್ನು ರಚಿಸಲಾಗಿದೆ ಎಂದು ಮನೀಷ್ ಮೌದ್ಗಿಲ್ ತಿಳಿಸಿದರು.

ಮೂರು ಕ್ಷೇತ್ರಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ದೂರುಗಳು ಬಂದಿವೆ. ಅದರಲ್ಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತಹ ದೂರುಗಳು ಹೆಚ್ಚಾಗಿದ್ದು, ಅವನ್ನೆಲ್ಲ ನಿವಾರಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ರಾಷ್ಟ್ರಧ್ವಜ ಮತ್ತು ಅಪ್ರಾಪ್ತರ ಬಳಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರ ಮೇಲೆ ನಾಲ್ಕು ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

ಏ.8 ರಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ, 11ರಂದು ವಿಜಯನಗರ, 12ರಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಮಕ್ಕಳನ್ನು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಳಕೆ ಮಾಡಲಾಗಿದೆ. ಈ ಸಂಬಂಧ ಫ್ಲೈಯಿಂಗ್ ಸ್ಕಾ್ವಡ್ ಮೂರು ಪ್ರತ್ಯೇಕ ಪ್ರಕರಣಗಳನ್ನು ಪ್ರಚಾರಕ್ಕೆ ಅನುಮತಿ ಪಡೆದ ಬಿಜೆಪಿ ಮುಖಂಡರ ಮೇಲೆ ದಾಖಲಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಪ್ರಚಾರ ಕರಪತ್ರದಲ್ಲಿ ರಾಷ್ಟ್ರಧ್ವಜ ಬಳಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರ ದೂರಿನನ್ವಯ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದರು.