ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಮಹಾನಗರ, ನಗರ, ಪಟ್ಟಣಗಳಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಆರಂಭಿಕ ಪ್ರಮಾಣ ಪತ್ರ (ಸಿಸಿ) ಹಾಗೂ ವಾಸ ಯೋಗ್ಯ ಪ್ರಮಾಣ ಪತ್ರ (ಒಸಿ) ಕಡ್ಡಾಯ ಮಾಡಿದ್ದ ರಾಜ್ಯ ಸರ್ಕಾರ ಈ ನಿಯಮವನ್ನು ಇದೀಗ ಹಳ್ಳಿಗಳಿಗೂ ವಿಸ್ತರಿಸಿದೆ. ಸಿಸಿ, ಒಸಿ ಇಲ್ಲದಿದ್ದರೇ ನೀರು, ವಿದ್ಯುತ್, ಒಳಚರಂಡಿ ಸಂಪರ್ಕ ಸೇರಿ ಅಗತ್ಯ ಸೇವಾ ಸಂಪರ್ಕಗಳು ಸಿಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶದಂತೆ ಮಾರ್ಗಸೂಚಿ ಹೊರಡಿಸಿದೆ.
ಅನಧಿಕೃತ ಕಟ್ಟಡ ನಿರ್ಮಾಣ, ವಿನ್ಯಾಸ ಉಲ್ಲಂಸಿ ನಡೆಯುವ ಕಾಮಗಾರಿ ತಡೆಗಟ್ಟಲು ಹಾಗೂ ಸರ್ಕಾರದ, ಸಾರ್ವಜನಿಕ ಸ್ವತ್ತಿನಲ್ಲಿ ನಿರ್ಮಿಸುತ್ತಿರುವ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶಿಸಿ ಮಾರ್ಗಸೂಚಿ ಹೊರಡಿಸಿದೆ. ಇದರ ಅನ್ವಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೋರ್ಟ್ ಆದೇಶ ಪಾಲಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.

ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರಲ್ಲಿ ಕಟ್ಟಡ ನಿರ್ಮಾಣ ಮತ್ತು ನಿಯಂತ್ರಣದ ಬಗ್ಗೆ ಉಲ್ಲೇಖಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದು ವಿಧಿವಿಧಾನಗಳನ್ನು ಪಾಲಿಸಬೇಕು.
ಗ್ರಾಮಠಾಣಾ ವ್ಯಾಪ್ತಿಯನ್ನು ಹೊರತುಪಡಿಸಿ ಹೊಸದಾಗಿ ಅಭಿವೃದ್ಧಿಪಡಿಸಿರುವ ಲೇಔಟ್‌ಗಳಲ್ಲಿ ಕಟ್ಟಡ ನಿರ್ಮಿಸಲು ಪರವಾನಗಿ ನೀಡುವ ಮುನ್ನ ಕಟ್ಟಡ ಕಟ್ಟುವ ಸೈಟ್ ಕ್ರಮಬದ್ಧವಾಗಿ ಇದ್ದೆಯೇ. ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ನಿಯಮಗಳ ಅನುಸಾರ ಲೇಔಟ್ ಅಭಿವೃದ್ಧಿಪಡಿಸಲಾಗಿದೆಯೇ ಎಂದು ಗ್ರಾಮ ಪಂಚಾಯಿತಿ ಖಾತರಿಪಡಿಸಿಕೊಳ್ಳಬೇಕು.
ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದು ಕಟ್ಟಡ ಯೋಜನೆ ಮತ್ತು ಅನುಮೋದಿತ ನಕ್ಷೆಯಂತೆ ಕಟ್ಟಡ ನಿರ್ಮಾಣ ಆಗುತ್ತಿದೆಯೇ ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ನಂತರ ವಾಸ ಯೋಗ್ಯ ಪ್ರಮಾಣ ಪತ್ರ ವಿತರಿಸಬೇಕು. ವಿನ್ಯಾಸ ಉಲ್ಲಂಸಿದ್ದರೇ ವಸತಿ, ವಾಣಿಜ್ಯ ಮತ್ತು ಇತರೆ ಕಟ್ಟಡಗಳ ಕಾಮಗಾರಿ ತಡೆದು ಸರಿಪಡಿಸಿಕೊಳ್ಳುವಂತೆ ನೋಟಿಸ್ ಜಾರಿ ಮಾಡಬೇಕು. ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಅನುಮೋದಿತ ನಕ್ಷೆ ಅಂತಿಮ ಹಂತದವರೆಗೂ ಪ್ರದರ್ಶಿಸಬೇಕು.
ಕಟ್ಟಡ ನಿರ್ಮಾಣ ಪೂರ್ಣಗೊಂಡ ಮೇಲೆ ಮಾಲೀಕರು ಗ್ರಾಮ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಿದ ಆನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ನಿಯಮ ಪಾಲನೆ ಮಾಡಿದ್ದರೇ ಮಾಲೀಕ ಅಥವಾ ವಾರಸುದಾರರಿಂದ ಲಿಖಿತ ಮುಚ್ಚಳಿಕೆ ಪಡೆದು ಸಿಸಿ, ಒಸಿ ನೀಡಬೇಕು. ತಪ್ಪಿದರೇ ಕಟ್ಟಡ ಮಾಲೀಕ, ವಾಸ್ತುಶಿಲ್ಪಿ, ಇಂಜಿನಿಯರ್, ಮೇಲ್ವಿಚಾರಕರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ಇವುಗಳಿಗಿಲ್ಲ ಪರವಾನಗಿ!
ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳಲ್ಲಿ ವ್ಯಾಪಾರ, ವಾಣಿಜ್ಯ ವಹಿವಾಟು ನಡೆಸಲು ಅನುಮತಿ, ಲೈಸೆನ್ಸ್ ನೀಡಬಾರದು. ಬ್ಯಾಂಕ್, ಹಣಕಾಸು ಸಂಸ್ಥೆಗಳು ಸಾಲ, ಹಣಕಾಸಿನ ನೆರವು ಮಂಜೂರು ಮಾಡುವ ಮುನ್ನ ಕಟ್ಟಡದ ಸಿಸಿ ಮತ್ತು ಓಸಿ ಪರಿಶೀಲನೆ ನಡೆಸಬೇಕು.
ನೆಲ ಸಮಕ್ಕೆ ಕಟ್ಟಾಜ್ಞೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ನಿಯಮ ಉಲ್ಲಂಸಿ ನಿರ್ಮಿಸುತ್ತಿರುವ ಕಟ್ಟಡಗಳನ್ನು ತಡೆಯಬೇಕು. ಸರ್ಕಾರದ, ಸಾರ್ವಜನಿಕ ಸ್ವತ್ತಿನಲ್ಲಿ ಮತ್ತು ಕೆರೆ, ಕುಂಟೆ, ಕಾಲುವೆ ಮತ್ತಿತರ ಸಾರ್ವಜನಿಕ ಹಿತಾಸಕ್ತಿಯುಳ್ಳ ಜಾಗದಲ್ಲಿ ಕಟ್ಟಡಗಳ ನಿರ್ಮಾಣವಾಗಿದ್ದರೇ ಸುಪ್ರೀಂ ಕೋರ್ಟ್ ಆದೇಶ, ಮಾರ್ಗಸೂಚಿಯಂತೆ ನೆಲಸಮಗೊಳಿಸಬೇಕು. ಗ್ರಾಮ ಪಂಚಾಯಿತಿ ನಿಯಮಾನುಸಾರ ಸ್ಥಳೀಯ ಕಂದಾಯ ಇಲಾಖೆ, ಪೊಲೀಸ್ ಸಹಕಾರ ನೀಡಬೇಕು ಎಂದು ಸರ್ಕಾರ ಕಟ್ಟಾಜ್ಞೆ ಹೊರಡಿಸಿದೆ.