ಬ್ರಸೆಲ್ಸ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಪ್ರಕ್ರಿಯೆಗೆ (ಬ್ರೆಕ್ಸಿಟ್) ಐರೋಪ್ಯ ಸಂಸತ್ ಅಂತಿಮ ಒಪ್ಪಿಗೆ ನೀಡಿದೆ. ಈ ಮೂಲಕ ಐದು ದಶಕದ ಐರೋಪ್ಯ ಒಕ್ಕೂಟದ ಒಡನಾಟವನ್ನು ಬ್ರಿಟನ್ ಶುಕ್ರವಾರ ಅಧಿಕೃತವಾಗಿ ಕಡಿದುಕೊಳ್ಳಲಿದೆ. ಇದರಿಂದ 28 ದೇಶಗಳ ಪ್ರಬಲ ಒಕ್ಕೂಟದಿಂದ ಬ್ರಿಟನ್ ದೂರವಾಗಲಿದ್ದು, ಒಕ್ಕೂಟಕ್ಕೆ ದೊಡ್ಡ ಹಿನ್ನಡೆ ಆಗಲಿದೆ.
ಬ್ರೆಕ್ಸಿಟ್ ನಿಲುವಳಿ ಮೇಲೆ ಬುಧವಾರ ನಡೆದ ಚರ್ಚೆಯಲ್ಲಿ ಐರೋಪ್ಯ ಸಂಸತ್ನ ಅನೇಕ ಸದಸ್ಯರು ಭಾವನಾತ್ಮಕ ಭಾಷಣ ಮಾಡಿದರು. ಕೊನೆಯಲ್ಲಿ ನಡೆದ ಮತದಾನದಲ್ಲಿ ಬ್ರಿಕ್ಸಿಟ್ ಪರ 621 ಮತ್ತು ವಿರುದ್ಧ 49 ಮತ ಚಲಾವಣೆಯಾದವು. 13 ಸದಸ್ಯರು ತಟಸ್ಥರಾದರು. ಸ್ಕಾಟ್ಲೆಂಡ್ನ ಸಾಂಪ್ರದಾಯಿಕ ವಿದಾಯ ಗೀತೆ ‘ಆಲ್ಡ್ ಲ್ಯಾಂಗ್ ಸೈನ್’ ಅನ್ನು ನುಡಿಸುವ ಮೂಲಕ ಬ್ರಿಟನ್ಗೆ ಬೀಳ್ಕೊಡುಗೆ ನೀಡಲಾಯಿತು. ಐರೋಪ್ಯ ಸಂಸತ್ನಲ್ಲಿ ಅಯು ರಿವೊಯಿಲ್ ಪಕ್ಷದ ನೇತೃತ್ವದಲ್ಲಿ ಬ್ರಿಟನ್ನ 73 ಸಂಸದರು ಇದ್ದು, ಇವರ ಕಣ್ಣಾಲಿಗಳು ತೇವಗೊಂಡವು.
ಕ್ಯಾಮರಾನ್ ಪದತ್ಯಾಗ: ಬ್ರೆಕ್ಸಿಟ್ ಹೋರಾಟಗಾರರ ಬೇಡಿಕೆಯಂತೆ 2016ರ ಜೂನ್ 23ರಂದು ಬ್ರೆಕ್ಸಿಟ್ ಬಗ್ಗೆ ಜನಮತ ಗಣನೆ ನಡೆಸಿದ ಆಗಿನ ಪ್ರಧಾನಿ ಡೇವಿಡ್ ಕ್ಯಾಮರಾನ್, ಜನರು ಬ್ರೆಕ್ಸಿಟ್ ಬೆಂಬಲಿಸುವುದಿಲ್ಲವೆಂದು ಕೊಂಡಿದ್ದರು. ಆದರೆ, ಶೇ.52 ಮಂದಿ ಬ್ರೆಕ್ಸಿಟ್ಗೆ ಸಮ್ಮತಿಸಿದರು. ಇದರಿಂದ ಅವರು ರಾಜೀನಾಮೆ ನೀಡಬೇಕಾಯಿತು. ಬಳಿಕ ತೆರೆಸಾ ಮೇ ಕೂಡ ರಾಜೀನಾಮೆ ನೀಡಿದ್ದರು.
ಜಯಶಾಲಿಯಾದ ಜಾನ್ಸನ್: ಪ್ರಧಾನಿ ಬೋರಿಸ್ ಜಾನ್ಸನ್ ಮಧ್ಯಂತರ ಚುನಾವಣೆ ಘೋಷಿಸಿದರು. ಕಳೆದ ಡಿಸೆಂಬರ್ 12ರಂದು ನಡೆದ ಚುನಾವಣೆಯಲ್ಲಿ ಜಾನ್ಸನ್ ನೇತೃತ್ವದ ಕನ್ಸರ್ವೆಟಿವ್ ಪಕ್ಷ ಸ್ಪಷ್ಟ ಬಹುಮತಪಡೆಯುವುದರೊಂದಿಗೆ ಬ್ರೆಕ್ಸಿಟ್ಗೆ ಇದ್ದ ತೊಡಕು ನಿವಾರಣೆ ಆಯಿತು.
ಏನಿದು ಬ್ರೆಕ್ಸಿಟ್?
28 ದೇಶಗಳು ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. ಈ ಸೇರ್ಪಡೆಗೆ 1975ರ ಜನಮತ ಗಣನೆ ಅಂಗೀಕಾರ ನೀಡಿತು. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಎಡ ಚಿಂತನೆಯ ಪಕ್ಷಗಳಿಂದ ಕೇಳಿಬರ ತೊಡಗಿದವು. ಬ್ರೆಕ್ಸಿಟ್ ಹೆಸರಿನ ಆಂದೋಲನಗಳು ನಡೆದಿದ್ದವು.