ಜಿಲ್ಲಾಡಳಿತದಿಂದ ‘ಎತ್ತಿನಹೊಳೆ’ ನಿರ್ಲಕ್ಷೃ

ಹಾಸನ: ಹಿಂದಿನ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ಅನುಷ್ಠಾನ ವಿಳಂಬವಾಗಲು ಜಿಲ್ಲಾಡಳಿತದ ನಿರ್ಲಕ್ಷೃವೇ ಕಾರಣ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಶಿವರಾಮು ಆರೋಪಿಸಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸ್ಪೀಕರ್ ರಮೇಶ್‌ಕುಮಾರ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜೆಡಿಎಸ್ ಆರಂಭದಿಂದಲೂ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದೆ. ಎಚ್.ಡಿ.ದೇವೇಗೌಡರು ಈ ಯೋಜನೆಯಿಂದ ನೀರು ದೊರಕುವುದಿಲ್ಲ ಎನ್ನುತ್ತಿದ್ದರು. ತಾನು ಮುಖ್ಯಮಂತ್ರಿಯಾದರೆ ಯೋಜನೆಯ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದ್ದರಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ರಸ್ತೆ ಕೆಲಸಕ್ಕೆ ನೀಡುತ್ತಿರುವ ಪ್ರಾಧಾನ್ಯತೆಯನ್ನು ಕುಡಿಯುವ ನೀರಿನ ಯೋಜನೆಗೆ ನೀಡುತ್ತಿಲ್ಲ ಎಂದು ದೂರಿದರು.
ಜಿಲ್ಲಾಡಳಿತದ ನಿರ್ಲಕ್ಷೃವೇ ಕಾರಣ:
ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸಬೇಕೆಂಬ ಉದ್ದೇಶದಿಂದ ರೂಪುಗೊಂಡ ಎತ್ತಿನಹೊಳೆ ಯೋಜನೆಗೆ 2014ರಲ್ಲಿ 12,912.36 ಕೋಟಿ ರೂ. ಅಂದಾಜು ವೆಚ್ಚಕ್ಕೆ ಮಂಜೂರಾತಿ ದೊರೆತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 6,037.10 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ. ಇದುವರೆಗೆ ಕೇವಲ 3011 ಕೋಟಿ ರೂ. ಖರ್ಚಾಗಿದೆ. ಉಳಿದ 3,025 ಕೋಟಿ ರೂ. ಕೆಲಸ ನಡೆಯದೇ ಇರುವುದಕ್ಕೆ ಜಿಲ್ಲಾಡಳಿತವೇ ಕಾರಣ ಎಂದು ಆರೋಪಿಸಿದರು.
ಭೂಸ್ವಾಧೀನ, ನೇರ ಖರೀದಿ, ಪರಿಹಾರ ವಿತರಣೆ ಸೇರಿದಂತೆ ಯಾವ ಕೆಲಸವೂ ಜಿಲ್ಲಾಡಳಿತದಿಂದ ನಡೆದಿಲ್ಲ. ಎತ್ತಿನಹೊಳೆ ಯೋಜನೆಯಿಂದ ಬೇರೆ ಜಿಲ್ಲೆಗಳಿಗೆ ಮಾತ್ರವಲ್ಲ ಹಾಸನದ ಅರಸೀಕೆರೆ, ಬೇಲೂರು ತಾಲೂಕಿನ ಕೆರೆಗಳಿಗೂ ನೀರು ಲಭ್ಯವಾಗುತ್ತದೆ ಎಂಬ ಸತ್ಯ ಅರಿಯಬೇಕು. ಆದರೆ, ಜಿಲ್ಲೆಯಲ್ಲಿ ಭೂಸ್ವಾಧೀನಾಧಿಕಾರಿ ಕಚೇರಿಗಳ ಪ್ರಮುಖ ಹುದ್ದೆಗಳೆಲ್ಲ ಖಾಲಿ ಬಿದ್ದಿದ್ದವು. ಭೂಸ್ವಾಧೀನಾಧಿಕಾರಿ ನೇಮಕವಾಗಿ ಕೇವಲ 10 ದಿನಗಳಾಗಿವೆ. ಈ ರೀತಿ ವಿಳಂಬ ನೀತಿ ಅನುಸರಿಸಿದರೆ ಕಾಲಮಿತಿಯೊಳಗೆ ಕೆಲಸ ಮುಗಿಯುವುದು ಹೇಗೆ ಎಂದು ಪ್ರಶ್ನಿಸಿದರು.

ಹಣದ ಕೊರತೆಯಿಲ್ಲ:
ಯೋಜನೆಗೆ ಹಣಕಾಸಿನ ತೊಂದರೆಯಿಲ್ಲ. 12 ಸಾವಿರ ಕೋಟಿ ರೂ. ಕಾಮಗಾರಿಯನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಆದರೆ ಭೂ ಖರೀದಿಯಲ್ಲಿ ಯಾವ ಕಾನೂನನ್ನ್ನೂ ಇಲಾಖೆ ಪಾಲಿಸಿಲ್ಲ ಎಂದರು.

ಪ್ರಾಥಮಿಕ ಪ್ರಜ್ಞೆ ಇದೆಯೇ?:
ಯಾವುದೇ ಕಾಮಗಾರಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕೆಂದರೆ ಮೊದಲಿಗೆ ಅದರ ಸಾಮಾಜಿಕ ಪರಿಣಾಮದ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಬೇಕು. ಇದಕ್ಕಾಗಿ ಸಮಿತಿ ರಚನೆ ಮಾಡಬೇಕು. ಆದರೆ, ಯೋಜನೆ ಆರಂಭವಾಗಿ ಮೂರು ವರ್ಷ ಗತಿಸಿದರೂ ಸಮಿತಿ ರಚನೆ ಮಾಡಿರಲಿಲ್ಲ. ಹೀಗಾಗಿ, ಸಕಲೇಶಪುರ ತಾಲೂಕಿನ 139 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಇದೀಗ ಅಂದರೆ, 2018ರ ನವೆಂಬರ್ 14 ರಂದು ಸಮಿತಿ ರಚನೆ ಮಾಡಲಾಗಿದೆ. ಆದರೆ, ಈ ಸಮಿತಿ ಸ್ಥಳ ಪರಿಶೀಲಿಸಿ, ಭೂಮಿಗೆ ಬೆಲೆ ನಿಗದಿ ಮಾಡುವುದು ಯಾವಾಗ ಎಂಬ ಪ್ರಾಥಮಿಕ ಪ್ರಜ್ಞೆಯೂ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಬೆಳೆನಷ್ಟ ಕೊಟ್ಟರೆ ಮುಗಿಯಲ್ಲ:
18 ತಿಂಗಳಲ್ಲಿ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಗಡುವು ಇರುವುದರಿಂದ ಗುತ್ತಿಗೆದಾರ ಯೋಜನೆ ವ್ಯಾಪ್ತಿಯ ರೈತರಿಗೆ ಬೆಳೆನಷ್ಟ ಪರಿಹಾರ ನೀಡಿ ಕೆಲಸ ಮಾಡುತ್ತಿದ್ದಾನೆ. ಆದರೆ, ಇದರಿಂದ ರೈತರಿಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಬೆಲೆ ನಿಗದಿ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು. ಸಕಲೇಶಪುರ ವ್ಯಾಪ್ತಿಯಲ್ಲಿ ಮಾತ್ರ ಪೈಪ್‌ಲೈನ್ ಹಾಕಬೇಕಿದ್ದು, ಹನಿಕೆ, ಹಗರೆ ಕಡೆಗೆ ಕಾಲುವೆ ಮಾಡಬೇಕಾಗುತ್ತದೆ. ಹೀಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.

ಬಗರ್ ಹುಕುಂ ಏನಾಯ್ತು?
ಅಕ್ರಮ-ಸಕ್ರಮ ಯೋಜನೆಯಡಿ ಸಾಗುವಳಿ ಜಮೀನು ಖಾತೆ ಮಾಡಿಕೊಡಬೇಕೆಂಬ ನಿಯಮವಿದೆ. ಆದರೆ, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಏನು ಪ್ರಗತಿಯಾಗಿದೆ? ಫಾರಂ ನಂ. 50, 52, 57 ಅರ್ಜಿಗಳು ವಿಲೇವಾರಿಯಾಗಿಲ್ಲ. ರೈತರನ್ನು ನಿರ್ಗತಿಕರನ್ನಾಗಿ ಮಾಡಲು ಹೊರಟಿರುವ ಅಧಿಕಾರಿಗಳಿಗೆ ಏನೆನ್ನಬೇಕು? ಕಂದಾಯ ಇಲಾಖೆಯವರು ಇದಕ್ಕೆ ಉತ್ತರಿಸಬೇಕಲ್ಲವೇ ಎಂದರು.ವಿಮಾನ ನಿಲ್ದಾಣವೋ, ರೈತರೋ?
ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಶಕ್ತಿಮೀರಿ ಶ್ರಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಸಕಲೇಶಪುರ ಭಾಗದ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಶಿವರಾಮು ವಾಗ್ದಾಳಿ ನಡೆಸಿದರು.
ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಸಚಿವ ರೇವಣ್ಣ ಒಮ್ಮೆಯೂ ಭೇಟಿ ನೀಡಿಲ್ಲ. ಆ ಸಂಬಂಧ ಒಂದು ಸಭೆಯನ್ನೂ ನಡೆಸಿಲ್ಲ. ಕೇವಲ ಒಂದು ತಾಲೂಕು/ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸದೆ ಜಿಲ್ಲೆಯ ಸಮಗ್ರ ಬೆಳವಣಿಗೆಗೆ ಮುಂದಾಗಬೇಕು ಎಂದರು.

ಡಿಕೆಶಿ ಎಡ-ಬಲಕ್ಕೆ ಸಹೋದರರು:
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಎಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಬಲ ಭಾಗಕ್ಕೆ ಸಿಎಂ ಕುಮಾರಸ್ವಾಮಿ ಇದ್ದಾರೆ. ಇವರಿಬ್ಬರ ಮಧ್ಯೆ ಸಿಲುಕಿರುವ ಶಿವಕುಮಾರ್ ಎತ್ತಿನಹೊಳೆ ಯೋಜನೆಯತ್ತ ಗಮನಹರಿಸಿ, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳ್ಳಲು ಕ್ರಮ ವಹಿಸಬೇಕಿದೆ ಎಂದು ಶಿವರಾಮು ಸಲಹೆ ನೀಡಿದರು.
ಸ್ಪೀಕರ್ ರಮೇಶ್‌ಕುಮಾರ್ ತಮ್ಮ ಕ್ಷೇತ್ರಕ್ಕೆ ಕುಡಿಯುವ ನೀರು ದೊರಕಿಲ್ಲವೆಂದು ಕಣ್ಣೀರು ಸುರಿಸಿದ್ದರು. ಎತ್ತಿನಹೊಳೆ ಯೋಜನೆಯಿಂದ ಅವರ ಜಿಲ್ಲೆಗೂ ಲಾಭವಿದೆ. ಆದರೆ, ಯೋಜನೆಗಾಗಿ ಹಿಂದಿನ ಸರ್ಕಾರದಲ್ಲಿ ತೋರಿದ್ದ ಆಸಕ್ತಿಯನ್ನು ಈಗ ಅವರು ತೋರುತ್ತಿಲ್ಲ ಎಂದು ಆರೋಪಿಸಿದರು.