ಪ್ಯಾರಿಸ್: ಇಥಿಯೋಪಿಯಾದ ದೂರದ ಓಟಗಾರ ತಮಿರತ್ ಟೋಲಾ ಪ್ಯಾರಿಸ್ ಒಲಿಂಪಿಕ್ಸ್ ಮ್ಯಾರಥಾನ್ ಸ್ಪರ್ಧೆಯ ಪುರುಷರ ಚಾಂಪಿಯನ್ ಎನಿಸಿದ್ದಾರೆ. ಇದರೊಂದಿಗೆ ಮ್ಯಾರಥಾನ್ ಓಟದಲ್ಲಿ ಕೀನ್ಯಾ ಓಟಗಾರರ ಪ್ಯಾಬಲ್ಯಕ್ಕೆ ತೆರೆ ಎಳೆದಿದ್ದಾರೆ. ಎರಡು ಬಾರಿ ವಿಶ್ವ ಚಾಂಪಿಯನ್ ಕೀನ್ಯಾದ ಎಲಿವುಡ್ ಕಿಪ್‌ಚಾಂಗ್ ಓಟ ಪೂರ್ಣಗೊಳಿಸಲಾಗದೆ ತನ್ನ ಕೊನೆಯ ಒಲಿಂಪಿಕ್ಸ್ ಕೂಟದಲ್ಲಿ ನಿರಾಸೆ ಮೂಡಿಸಿದ್ದಾರೆ.
ಟೋಲಾ 2 ಗಂಟೆ, 6 ನಿಮಿಷ, 26 ಸೆಕೆಂಡ್‌ಗಳಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರೆ, ಬೆಲ್ಜಿಯಂನ ಬಶೀರ್ ಅಬ್ದಿ (2ಗ, 6 ನಿ, 47 ಸೆ), ಕೀನ್ಯಾದ ಬೆನ್ಸನ್ ಕಿಪ್ರುಟೊ (2 ಗಂಟೆ, 7 ನಿಮಿಷ) ನಂತರದ 2 ಸ್ಥಾನ ಪಡೆದು, ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಒಲಿಸಿಕೊಂಡರು. 2012ರಲ್ಲಿ ಲಂಡನ್ ಕೂಟದಲ್ಲಿ ಉಗಾಂಡಾದ ಸ್ಟೀಫನ್ ಕಿಪ್ರೊಟಿಚ್ ಕೀನ್ಯಾ ದೇಶದ ಹೊರತಾಗಿ ಮ್ಯಾರಥಾನ್ ಚಿನ್ನ ಗೆದ್ದ ಕೊನೆಯ ಅಥ್ಲೀಟ್ ಎನಿಸಿದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕೀನ್ಯಾದ ಸ್ಯಾಮುಯೆಲ್ ವಾನ್‌ಜಿರು 2 ಗಂಟೆ, 6 ನಿಮಿಷ, 32 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿದ್ದು ಹಿಂದಿನ ಕೂಟ ದಾಖಲೆ.
ಬಿ-ಗರ್ಲ್ ಆಮಿ ಚೊಚ್ಚಲ ಚಾಂಪಿಯನ್: ಜಪಾನ್‌ನ ಬಿ ಗರ್ಲ್ ಅಮಿ ಬ್ರೇಕಿಂಗ್ ಬ್ರೇಕ್ ಡ್ಯಾನ್ಸ್ ಸ್ಪರ್ಧೆಯ ಚೊಚ್ಚಲ ಒಲಿಂಪಿಕ್ಸ್ ಚಾಂಪಿಯನ್ ಎನಿಸಿದ್ದಾರೆ. ಪ್ಯಾರಿಸ್ ಗೇಮ್ಸ್‌ನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಬ್ರೇಕ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಡ್ಯಾನ್ಸರ್‌ಗಳ ಕಾಲುಗಳ ಚಲನೆ, ಗಾಳಿಯಲ್ಲಿ ದೇಹದ ಚಲನೆ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಲಿಥುವೇನಿಯಾದ ಬಿ ಗರ್ಲ್ ನಿಕಾ (ಡೊಮಿನಿಕಾ ಬಾನೆವಿಕ್) ತಂಡ ಬೆಳ್ಳಿ ಜಯಿಸಿದರೆ, ಚೀನಾದ ಬಿ ಗರ್ಲ್ 671 (ಲಿಯು ಕ್ವಿಂಗಿ) ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಮಧ್ಯಾಹ್ನ ಆರಂಭಗೊಂಡ ಸ್ಪರ್ಧೆ ರಾತ್ರಿ 10 ಗಂಟೆಯವರೆಗೂ ನಡೆಯಿತು. 15 ದೇಶಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಆತಿಥೇಯರ ಒಲಿವಿನ ಮೇರೆಗೆ ಈ ಬಾರಿಯ ಒಲಿಂಪಿಕ್ಸ್ ಸೇರಿಸಲಾಗಿತ್ತು. ಆದರೆ ಇದು 2028 ರಲ್ಲಿ ಲಾಸ್ ಏಂಜಲಿಸ್‌ನಲ್ಲಿ ಬ್ರೇಕಿಂಗ್ ಡ್ಯಾನ್ಸ್ ತನ್ನ ಸ್ಥಾನ ಉಳಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.