ಬರ ಬಂದಾಗ ಎತ್ತಿನಹೊಳೆ ನೆನಪು

– ಪ್ರಕಾಶ್ ಮಂಜೇಶ್ವರ ಮಂಗಳೂರು
ಎತ್ತಿನಹೊಳೆ ಯೋಜನೆ ವಿರೋಧಿಸಿದ್ದ ಎಲ್ಲ ಅರ್ಜಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಆವರಿಸಿದ ಸಂದರ್ಭದಲ್ಲೇ ವಜಾಗೊಳಿಸಿರುವುದು ಜನರನ್ನು ಚಿಂತೆಗೆ ಹಚ್ಚಿದೆ.
ಯೋಜನೆಗೆ ಸರ್ಕಾರ ಅನುಮೋದನೆ ನೀಡಿದಾಗ, ಬಜೆಟ್‌ನಲ್ಲಿ ಹಣ ಕಾದಿರಿಸಿದಾಗ, ಕಾಮಗಾರಿ ಆರಂಭಗೊಂಡಾಗ ಜಿಲ್ಲೆಯ ಜನ ಸುಮ್ಮನಿದ್ದರು. ಹೆಚ್ಚಿನವರು ಮನೆ ಆವರಣದಲ್ಲೇ ಇರುವ ಬಾವಿ, ಬೋರ್‌ವೆಲ್‌ಗಳನ್ನು ನಂಬಿದ್ದರು, ನಗರದಲ್ಲಿ ಪೈಪ್‌ಲೈನ್‌ನಲ್ಲಿ ನೀರು ಬರುವವರು ಚಿಂತೆ ಮಾಡಿರಲಿಲ್ಲ. ಯಾರೋ ವಿರೋಧಿಸಿದರೆ ನಮಗೂ ಲಾಭವಾಗಬಹುದು ಎಂದುಕೊಂಡಿದ್ದರು. ರಾಜಕೀಯ ವ್ಯಕ್ತಿಗಳು ತಮ್ಮ ನಾಯಕರು ಕೈಗೊಂಡ ತೀರ್ಮಾನವನ್ನು ವಿರೋಧಿಸಲಾಗದ ಗೊಂದಲದಲ್ಲಿದ್ದರು. ಆದರೆ ಇಂದು ನೀರಿನ ಬರ ಎಲ್ಲರ ಮನೆ ಬಾಗಿಲು ಬಡಿಯಲು ಆರಂಭಿಸಿದೆ.

ಕಣ್ಣು ತೆರೆಸಿದ ಪರಿಸ್ಥಿತಿ: ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಮಂಗಳೂರು ಮಹಾನಗರ ಪಾಲಿಕೆ ಹಾಗೂ ಆಸುಪಾಸಿನಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ರೇಷನಿಂಗ್ ಆರಂಭಗೊಂಡು ತಿಂಗಳು ಕಳೆದಿದೆ. ಕರಾವಳಿಯ ಜೀವನದಿ ಕಳಾಹೀನವಾಗಿದೆ. ಇತರ ನದಿಗಳೂ ಬರಡಾಗಿವೆ. ಅಂದು ಎತ್ತಿನಹೊಳೆ ಯೋಜನೆ ವಿರೋಧಿಸುತ್ತಿರುವವರನ್ನು ‘ಹುಚ್ಚರು’ ಎನ್ನುತ್ತಿದ್ದ ಜನರೇ ಈಗ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂದು ಹೋರಾಟಗಾರರು ಹೇಳಿದ್ದು ನಿಜವಿರಬಹುದು ಎಂದು ಚಿಂತಿಸತೊಡಗಿದ್ದಾರೆ.
ಎನ್‌ಜಿಟಿಯಲ್ಲೇ ದೊರೆಯದ ನ್ಯಾಯ ಇನ್ನು ಸುಪ್ರೀಂ ಕೋರ್ಟ್‌ನಲ್ಲಿ ದೊರೆಯುತ್ತದೆಯೇ ಎಂದು ಕೆಲವರು ಸಾಮಾಜಿಕ ಜಾಲತಾಣ ಮೂಲಕ ಹೋರಾಟದಿಂದ ಹಿಂಸರಿಯುವ ಸೂಚನೆ ನೀಡಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲಲ್ಲಿ ಸರ್ಕಾರ ಕೈಗೊಂಡ ನಿಸರ್ಗ ವಿರೋಧಿ ಚಟುವಟಿಕೆಗಳ ದುಷ್ಪರಿಣಾಮ ಯೋಜನೆ ಅನುಷ್ಠಾನಗೊಳ್ಳುವ ಕಾಣಿಸಿಕೊಂಡಿರುವ ಸಂದರ್ಭದಲ್ಲೇ ಎನ್‌ಜಿಟಿ ಪ್ರತಿಕೂಲ ತೀರ್ಪು ನೀಡಿದ್ದರೂ ನೀರಿಗಾಗಿ ಬದ್ಧತೆಯಿಂದ ಹೋರಾಟ ನಡೆಸುತ್ತಿರುವ ಅತ್ಯಂತ ಕಿರಿಯ ತಂಡ ವಿಚಲಿತಗೊಂಡಿಲ್ಲ.

ಸುಪ್ರೀಂ ಹೋರಾಟ ಮುಂದುವರಿಕೆ
ಎನ್‌ಜಿಟಿ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ಕಾನೂನು ಹೋರಾಟದ ಮುಂಚೂಣಿಯಲ್ಲಿರುವ ಹಿರಿಯ ವಕೀಲ ಕೆ.ಎನ್.ಸೋಮಶೇಖರ, ಸಾಮಾಜಿಕ ಕಾರ‌್ಯಕರ್ತರಾದ ಕಿಶೋರ್ ಕುಮಾರ್ ಹಾಗೂ ಪುರುಷೋತ್ತಮ ಚಿತ್ರಾಪುರ ನಿರ್ಧರಿಸಿದ್ದಾರೆ.
ಎನ್‌ಜಿಟಿ ಮುಖ್ಯವಾಗಿ ಪರಿಸರ ಸಂಬಂಧಿಸಿದ ವಿಷಯಗಳನ್ನು ಮಾತ್ರ ಪರಿಣಿಸುತ್ತದೆ. ಅಲ್ಲಿ ಕುಡಿಯುವ ನೀರಿನ ಹೆಸರಿನಲ್ಲಿ ಅನೇಕ ಮುಖ್ಯ ಸಂಗತಿಗಳನ್ನು ಮರೆಮಾಚಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಅವೈಜ್ಞಾನಿಕ ಸಂಗತಿ, ಭ್ರಷ್ಟಾಚಾರ ಮುಂತಾದ ಸಂಗತಿಗಳನ್ನು ಮನವರಿಕೆ ಮಾಡಿಕೊಡಲು ಸುಪ್ರೀಂ ಕೋರ್ಟ್‌ನಲ್ಲಿ ಅವಕಾಶವಿದೆ. ನ್ಯಾಯ ಸಿಗಬಹುದು ಎಂಬ ನಂಬಿಕೆ ಇದೆ ಎಂದು ಕೆ.ಎನ್.ಸೋಮಶೇಖರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಬಹುರೂಪ ಹೋರಾಟ
ದ.ಕ. ಜಿಲ್ಲೆಯಲ್ಲಿ ಬರ ಆವರಿಸಿದ ನಂತರ ಎತ್ತಿನಹೊಳೆ ಯೋಜನೆ ವಿರುದ್ಧ ಕೆಲವರಲ್ಲಿ ವಿರೋಧ ಅಭಿಪ್ರಾಯ ಹುಟ್ಟಿಕೊಂಡಿದೆ. ವಿವಿಧ ವಾಟ್ಸಪ್ ಗುಂಪುಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಯೋಜನೆ ತಡೆಯಲು ಮತ್ತೆ ಹೋರಾಟ ನಡೆಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಒಟ್ಟು 13 ಸಾವಿರ ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ನಾಲ್ಕು ಸಾವಿರ ಕೋಟಿ ರೂ. ಈಗಾಗಲೇ ವೆಚ್ಚವಾಗಿದೆ. ಈ ಹಂತದಲ್ಲಿ ಯೋಜನೆ ತಡೆಯುವುದು ಸುಲಭವಲ್ಲ.

ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಹೋರಾಟಗಾರ, ಕಲಾವಿದ ದಿನೇಶ್ ಹೊಳ್ಳ, ‘ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈಗ ಒಂದೇ ಪಕ್ಷದ ಸಂಸದರಿದ್ದಾರೆ. ಅವರದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಉಭಯ ಕಡೆಗಳ ಸಂಸದರು ಹಾಗೂ ಜಿಲ್ಲೆಯ ಶಾಸಕರ ಮೂಲಕ ಯೋಜನೆಯ ಅಡ್ಡ ಪರಿಣಾಮದ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಬೇಕು’ ಎಂದರು.
ಸಮಾನ ಮನಸ್ಕ ಎಲ್ಲರೂ ಟ್ವೀಟ್ ಮಾಡುವ ಮೂಲಕವೂ ಕೇಂದ್ರದ ಗಮನ ಸೆಳೆಯಬೇಕು. ದೊಡ್ಡ ರೀತಿಯ ಜನಾಭಿಪ್ರಾಯ ರೂಪಿಸುವುದೊಂದೇ ಯೋಜನೆ ತಡೆಯಲು ಇರುವ ಪರಿಣಾಮಕಾರಿ ಮಾರ್ಗ ಎನ್ನುತ್ತಾರವರು.

ಚಾರ್ಮಾಡಿ ತುದಿಯ ಬಿದಿರ ತಳದಲ್ಲಿರುವ ಒಂದು ಹಳ್ಳಿಗೆ ಕಳೆದ 24 ವರ್ಷಗಳಿಂದ ನಾನು ಭೇಟಿ ನೀಡುತ್ತಿದ್ದೇನೆ. ಅದು ಚಾರ್ಮಾಡಿ ಘಾಟಿ ತುದಿಯ ಪ್ರದೇಶ. ಅಲ್ಲಿ ಬೆಟ್ಟಕ್ಕೆ ಒಂದು ಕೊಳವೆ ಹಾಕಿದರೆ ದಿನಪೂರ್ತಿ ನೀರು ಬರುತ್ತಿರುತ್ತದೆ. ಅದು ಮೃತ್ಯುಂಜಯ ನದಿ ಹುಟ್ಟುವ ಜಾಗ. ಎರಡು ವಾರ ಹಿಂದೆ ಆ ಹಳ್ಳಿಗೆ ಭೇಟಿ ನೀಡಿದಾಗ ಪ್ರಥಮ ಬಾರಿಗೆ ನೀರಿನ ಸಮಸ್ಯೆ ಕಂಡೆ. ನೇತ್ರಾವತಿ ನದಿ ಮೂಲದಲ್ಲೇ ನೀರಿನ ಒರತೆ ಬತ್ತುತ್ತಿದೆ ಎನ್ನುವುದಕ್ಕೆ ಸಾಕ್ಷಿ ಅನಿಸಿತು.
– ದಿನೇಶ್ ಹೊಳ್ಳ, ಪರಿಸರ ಹೋರಾಟಗಾರ

Leave a Reply

Your email address will not be published. Required fields are marked *