ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಸರ್ಕಾರ ಬದ್ಧ

ಸಕಲೇಶಪುರ : ಸಮಸ್ಯೆಗಳ ಸವಾಲನ್ನು ಮೆಟ್ಟಿನಿಂತು ನಿಗದಿತ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.

ತಾಲೂಕಿನ ಕಪ್ಪಳಿ ಸಮೀಪ ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎತ್ತಿನಹೊಳೆ ಯೋಜನೆ ಕುರಿತು ಆರಂಭದಿಂದಲೂ ಅಪಸ್ವರ ಇರುವುದನ್ನು ಗಮನಿಸಿದ್ದು ಕಾಮಗಾರಿ ಬಗ್ಗೆ ಅಲ್ಪಸ್ವಲ್ಪ ತಿಳಿವಳಿಕೆ ಹೊಂದಿದ್ದೇನೆ. ಆದರೆ ಯೋಜನೆಯ ಅನುಷ್ಠಾನದ ಬಗೆಗಿನ ಅನುಮಾನಗಳನ್ನು ಮೆಟ್ಟಿನಿಂತು ಯೋಜನೆ ಸಫಲಗೊಳಿಸಲು ನಮ್ಮ ಸರ್ಕಾರ ಸಮರ್ಥವಾಗಿದೆ. ಈಗಾಗಲೇ ಕಾಮಗಾರಿ ಶೇ.70 ರಷ್ಟು ಮುಗಿದಿದ್ದು ಬಾಕಿ ಕೆಲಸಕ್ಕೆ ಭೂಸ್ವಾಧೀನ ಪ್ರಕ್ರಿಯೆ ತೊಡಕಾಗಿದೆ. ಅಲ್ಲದೆ ಬೆಟ್ಟಸಾಲು ಮತ್ತು ಅತ್ಯಧಿಕ ಮಳೆಯ ನಡುವೆ ಸೀಮಿತ ಅವಧಿಯಲ್ಲಿ ಕಾಮಗಾರಿ ನಡೆಸುವುದು ಸವಾಲಿನ ಕೆಲಸವಾಗಿದೆ. ಬೃಹತ್ ಯೋಜನೆಗೆ ಕಾಲ ನಿಗದಿಮಾಡಿದರೆ ಹಾಸ್ಯಾಸ್ಪವಾಗಲಿದೆ ಎಂದು ತಿಳಿಸಿದರು.

ಬಯಲು ಸೀಮೆಯ ಜನರಿಗೆ ಅತ್ಯಂತ ಅವಶ್ಯಕವಾಗಿರುವ ಈ ಯೋಜನೆ ಸಾಕಷ್ಟು ಬೇಗ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಅಧಿಕಾರ ವಹಿಸಿಕೊಂಡ ಒಂದು ವಾರದಲ್ಲೇ ಮೊದಲ ಬಾರಿಗೆ ಈ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದು ಮತ್ತಷ್ಟು ಮಾಹಿತಿ ಸಂಗ್ರಹಿಸಿ ಕಾಮಗಾರಿಗೆ ವೇಗ ನೀಡಲು ಚಿಂತನೆ ನಡೆಸಲಾಗಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಭೂ ಸಂತ್ರಸ್ತರಿಗೆ ಇನ್ನು ಕೆಲವೇ ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದರು.

ನಂತರ ಹೇಮಾವತಿ ನದಿ ಸೇತುವೆ ಪರಿಶೀಲಿಸಿದರು. ಕಾಮಗಾರಿ ವೀಕ್ಷಣೆಗೂ ಮುನ್ನ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಯೋಜನೆ ರೂಪುರೇಷೆ ವಿವರಿಸಿದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಜೈಪ್ರಕಾಶ್, ಮಳೆಗಾಲದಲ್ಲಿ ಎತ್ತಿನಹೊಳೆಯೊಂದರಲ್ಲಿ ನಿತ್ಯ 30 ಟಿಎಂಸಿ ನೀರು ಹರಿಯುತ್ತಿದ್ದರೆ ನೇತ್ರಾವತಿ ನದಿಯ ಮೂಲಕ ನಿತ್ಯ 400 ಟಿಎಂಸಿ ನೀರು ಅರಬ್ಬಿ ಸಮುದ್ರ ಸೇರುತ್ತಿದೆ. ಇದರಲ್ಲಿ ಶೇ.2 ನೀರನ್ನು ಬಯಲು ಸೀಮೆಗೆ ಹರಿಸಲು ಯೋಜನೆ ರೂಪಿಸಲಾಗಿದ್ದು ಯಾವುದೆ ಕಾರಣಕ್ಕೆ ಯೋಜನೆ ಬಗ್ಗೆ ನಕಾರತ್ಮಕ ಭಾವನೆ ಬೇಡ ಎಂದರು.

ಅರಸೀಕೆರೆ ಶಾಸಕ ಶಿವಲಿಂಗೇಗೌಡ, ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಮಾಜಿ ಶಾಸಕರಾದ ಬಿ.ಶಿವರಾಂ,ಎಚ್.ಎಂ ವಿಶ್ವನಾಥ್,ಜವರೇಗೌಡ, ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಮೀಕಾಂತರೆಡ್ಡಿ, ವಿಶ್ವೇಶ್ವರಯ್ಯ ಜಲನಿಗಮದ ಮುಖ್ಯ ಇಂಜಿನಿಯರ್ ಮಾಧವ್, ಎಸ್‌ಇ ವೇಣುಗೋಪಾಲ್, ಎಇ ಹರೀಶ್, ತಹಸೀಲ್ದಾರ್ ನಾಗಭೂಷಣ್ ಇತರ ಅಧಿಕಾರಿಗಳಿದ್ದರು.

ಮಳೆ ನಡುವೆ ಪರಿಶೀಲನೆ: ಸುರಿವ ಮಳೆಯಲ್ಲೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಕಾಮಗಾರಿ ಪರಿಶೀಲಿಸಿದರು. ಅಧಿಕಾರಿಗಳ ಬಳಿ ಮಾಹಿತಿ ಪಡೆಯುತ್ತಿದ್ದ ವೇಳೆ ವೀಡಿಯೊ ಚಿತ್ರೀಕರಣಕ್ಕೆ ಮುಂದಾದವರ ವಿರುದ್ಧ ಹರಿಹಾಯ್ದರು. ಇನ್ನೊಂದೆಡೆ ಕಾಮಗಾರಿ ಬಗ್ಗೆ ಮಾಹಿತಿ ನೀಡುತ್ತಿದ್ದ ಯೋಜನೆಯ ಎಇ ಹರೀಶ್ ಅವರು ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಪರದಾಡಿದರು. ಈ ವೇಳೆ ಸಹಾಯಕ ಇಂಜಿನಿಯರ್‌ಗಳು ಅವರನ್ನು ಕೆಸರಿನಿಂದ ಹೊರತಂದರು.

5 ವರ್ಷ ಅಧಿಕಾರ ನಡೆಸುವೆವು: ಮ್ಮಿಶ್ರ ಸರ್ಕಾರ 5 ವರ್ಷ ಅಧಿಕಾರ ನಡೆಸುವುದರಲ್ಲಿ ಯಾವುದೆ ಅನುಮಾನ ಬೇಡ. ರಾಜಕೀಯ ಹೊಟ್ಟೆ ನೋವಿನಿಂದ ಸದಾನಂದಗೌಡ ಏನೇನೊ ಹೇಳುತ್ತಿದ್ದಾರೆ. ಇವರು ಯಾವಾಗ ಜ್ಯೋತಿಷ್ಯ ಕಲಿತರೋ ತಿಳಿಯುತ್ತಿಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಸಿದ್ದರಾಮಯ್ಯನವರ ಬಜೆಟ್‌ಗೆ ಪೂರಕವಾಗಿದ್ದು ಎಲ್ಲಿಯೂ ಗೊಂದಲವಿಲ್ಲ ಎಂದು ಇದೇ ಸಂರ್ಧಭದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.