ಬಜೆಟ್ ಅನುಷ್ಠಾನಕ್ಕೆ ನೀತಿಸಂಹಿತೆ ಅಡ್ಡಿ: ಜಾರಿಯಾಗದ ಹಲವು ಯೋಜನೆ, ಆಡಳಿತ ಯಂತ್ರ ಸ್ತಬ್ಧ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಎರಡನೇ ಬಜೆಟ್​ನ ಅನುಷ್ಠಾನದೊಂದಿಗೆ ಹೊಸ ಲೆಕ್ಕಾಚಾರ ಸೋಮವಾರದಿಂದ ಆರಂಭವಾಗುವುದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬಂದಿದೆ. ನೀತಿ ಸಂಹಿತೆ ಜಾರಿಗೆ ಬರುವುದಕ್ಕೆ ಮುನ್ನವೇ ಬಜೆಟ್​ನ ಘೋಷಣೆಗಳ ಆದೇಶಗಳು ಹೊರಬಿದ್ದರೂ ಅವುಗಳನ್ನು ಅನುಷ್ಠಾನ ಮಾಡಲಾಗದ ಸ್ಥಿತಿ ಎದುರಾಗಿದೆ. ಸರ್ಕಾರಿ ಆಡಳಿತ ಯಂತ್ರ ಚುನಾವಣಾ ಕಾರ್ಯದಲ್ಲಿ ತೊಡಗಿರುವುದರ ಪರಿಣಾಮ ಆಡಳಿತ ಸ್ತಬ್ಧವಾಗಿದೆ.

ತೆರಿಗೆ ಸಂಗ್ರಹಣೆ ಮೇಲೂ ಪರಿಣಾಮ: ರಾಜ್ಯ ಸರ್ಕಾರ ತನ್ನ ಸ್ವಂತ ಸಂಪನ್ಮೂಲ ಗಳಿಂದ ಹೆಚ್ಚಿನ ತೆರಿಗೆ ಸಂಗ್ರಹ ಮಾಡುವ ಮೂಲಕ ಯೋಜನೆಗಳ ಜಾರಿಗೆ ಉದ್ದೇಶಿಸಿದೆ.

ಆದರೆ ಮೇ ಅಂತ್ಯದ ತನಕ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಮೊದಲ ತ್ರೖೆಮಾಸಿಕದಲ್ಲಿ ತೆರಿಗೆ ಸಂಗ್ರಹಣೆಯ ಮೇಲೆ ಹೊಡೆತ ಬೀಳುವುದು ಗ್ಯಾರಂಟಿ. ಉಳಿದ ಮೂರು ತ್ರೖೆಮಾಸಿಕಗಳಲ್ಲಿ ಎಷ್ಟರ ಮಟ್ಟಿಗೆ ಚೇತರಿಕೆ ಕಾಣುತ್ತದೆ ಎಂಬುದನ್ನು ಹೇಳಲಾಗದು. ವಾಣಿಜ್ಯ ತೆರಿಗೆಯಲ್ಲಿ 76,046 ಕೋಟಿ ರೂ., ನೋಂದಣಿ ಮುದ್ರಾಂಕದಲ್ಲಿ 11,828 ಕೋಟಿ ರೂ., ಅಬಕಾರಿಯಲ್ಲಿ 20,950 ಕೋಟಿ ರೂ. ಹಾಗೂ ಸಾರಿಗೆಯಲ್ಲಿ 7,100 ಕೋಟಿ ರೂ. ಸಂಗ್ರಹದ ಗುರಿ ಹಾಕಿಕೊಂಡಿದೆ.

ಬಾಯಿ ಸುಡಲಿದೆ ಬಿಯರ್: ಅಬಕಾರಿ ಹೊರತುಪಡಿಸಿದರೆ ರಾಜ್ಯ ಸರ್ಕಾರಕ್ಕೆ ಬೇರೆ ಕಡೆ ಆದಾಯದ ಯಾವುದೇ ಮೂಲಗಳಿಲ್ಲ. ಆದ್ದರಿಂದಲೇ ಎಲ್ಲ ರೀತಿಯ ಸುಂಕ ಹೆಚ್ಚಿಸಲಾಗಿದೆ. ದರ ಹೆಚ್ಚಳ ಮಾತ್ರ ಗುರುವಾರದಿಂದ ಜಾರಿಗೆ ಬರುತ್ತಿದೆ. ನೋಂದಣಿಯಲ್ಲಿ ಮಾರ್ಗಸೂಚಿ ಬೆಲೆ ಇತ್ತೀಚಿಗೆ ಪರಿಷ್ಕರಣೆಗೊಂಡಿದ್ದರಿಂದ ಅಲ್ಲಿಯೂ ಹೆಚ್ಚಿನ ತೆರಿಗೆ ನಿರೀಕ್ಷೆ ಮಾಡಲಾಗುತ್ತಿದೆ.

ಸಾರಿಗೆಯಲ್ಲಿ 7100 ಕೋಟಿ ನಿರೀಕ್ಷೆ ಇದೆ, ಆದರೆ ಕಾರುಗಳ ಬೆಲೆ ದುಬಾರಿ ಆಗುವುದರಿಂದ ವಾಹನ ನೋಂದಣಿ ನಿರೀಕ್ಷೆಯಷ್ಟು ಆಗುವುದೇ ಎಂಬ ಪ್ರಶ್ನೆ ಇದೆ.

ಜಾರಿಯಾಗಬೇಕಾದ ಪ್ರಮುಖ ಯೋಜನೆ

# ಸಿರಿಧಾನ್ಯಕ್ಕೆ ಉತ್ತೇಜನ ನೀಡುವ ರೈತ ಸಿರಿ
# ಕರಾವಳಿ ಮತ್ತು ಮಲೆನಾಡಿನಲ್ಲಿ ಭತ್ತಕ್ಕೆ ಆದ್ಯತೆ ನೀಡುವ ಕರಾವಳಿ ಪ್ಯಾಕೇಜ್​
# ಪಸಲ್ ಬಿಮಾಕ್ಕೆ ಪರ್ಯಾಯವಾಗಿ ಪ್ರತ್ಯೇಕ ವಿಮಾ ಯೋಜನೆ
#ನಾಟಿ ಕೋಳಿ ಸಾಕಣೆಗೆ ಪ್ರೋತ್ಸಾಹ
# ಹಾಲಿನ ಸಹಾಯಧನ 1 ರೂ. ಹೆಚ್ಚಳ
# 12 ಬೆಳೆಗಳಿಗೆ ಆವರ್ತಕ ನಿಧಿ ಒದಗಿಸುವ ರೈತ ಕಣಜ
# ಬೆಲೆ ಕೊರತೆ ಪಾವತಿ ಯೋಜನೆ
# ಗೃಹ ಲಕ್ಷ್ಮಿ ಬೆಳೆ ಸಾಲ ಯೋಜನೆ
# ಕೇರಳ ಮಾದರಿಯಲ್ಲಿ ಸಾಲ ಪರಿಹಾರ ಆಯೋಗ
# ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ
# ಸವಿತಾ ಸಮಾಜ ಹಾಗೂ ಕ್ರೖೆಸ್ತ ಅಭಿವೃದ್ಧಿ ನಿಗಮಗಳ ಸ್ಥಾಪನೆ
# ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸಾರಥಿ ಸೂರು
# ಗ್ರಾಮೀಣ ಪ್ರದೇಶಕ್ಕೆ ಸಮಗ್ರ ಕುಡಿಯುವ ನೀರು ಒದಗಿಸುವ ಜಲಸಿರಿ
# ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಜಲಮಂಡಳಿ
# ರೈತರಿಗೆ ಗುಣಮಟ್ಟದ ವಿದ್ಯುತ್​ಗಾಗಿ 40 ಸಾವಿರ ಟ್ರಾನ್ಸ್​ಫಾರ್ಮರ್ ಅಳವಡಿಕೆ ್ಝಮಗ್ರ ತೆಂಗುನಾರು ನೀತಿ
# ಮನೆ ಬಾಗಿಲಿಗೆ ಸರ್ಕಾರದ ನಾಗರಿಕ ಸೇವೆ
# ಎಲ್ಲ ಇಲಾಖೆಗಳಲ್ಲಿ ಸಿ ಮತ್ತು ಡಿ ನೌಕರರ ವರ್ಗಾವಣೆಗೆ ಕೌನ್ಸೆಲಿಂಗ್