ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶ್ರಮಿಸಿ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಈಶ್ವರಪ್ಪ ಮನವಿ

ಚಾಮರಾಜನಗರ : ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿ ಮಾಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದ ನಂದಿ ಭವನದಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರದ ಮೇಲ್ಪಟ್ಟ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
2019 ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ದೇಶದ ಎಲ್ಲ ವರ್ಗದವರು ನರೇಂದ್ರಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಇಚ್ಛಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವ, ದಲಿತ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದೆ. ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದ ಅತ್ಯಾಚಾರವನ್ನು ತಡೆಯಲು 12 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಲಾಗಿದೆ. ಜತೆಗೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆಯಲು ತಲಾಕ್ ನಿಷೇಧದಂತಹ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಭಾರತೀಯರು ವಿದೇಶಕ್ಕೆ ಹೋದ ಸಂದರ್ಭದಲ್ಲಿ ಹಿಂದುಳಿದ ದೇಶದಿಂದ ಬಂದವರು ಎಂಬ ಅವಮಾನವನ್ನು ಅನುಭವಿಸುತ್ತಿದ್ದರು. ಆದರೆ ನರೇಂದ್ರಮೋದಿ ಅವರು ಪ್ರಧಾನಮಂತ್ರಿ ಆದ ನಂತರ ಭಾರತೀಯರಿಗೆ ವಿದೇಶಗಳಲ್ಲಿ ವಿಶೇಷ ಗೌರವ ಸಿಗುತ್ತಿದೆ. ನರೇಂದ್ರಮೋದಿ ಅವರಿಗೆ ವೀಸಾ ಕೊಡದೆ ನಿರಾಕರಿಸಿದ ದೇಶವು ಇಂದು ನರೇಂದ್ರಮೋದಿ ಅವರನ್ನು ತಮ್ಮ ದೇಶಕ್ಕೆ ಆಹ್ವಾನಿಸುತ್ತಿದೆ ಎಂದರು.

40 ಲಕ್ಷ ಮುಸ್ಲಿಂರು ಬಾಂಗ್ಲಾದೇಶದಿಂದ ದೇಶಕ್ಕೆ ನುಸುಳಿ ಬಂದಿದ್ದಾರೆ. ಮುಸ್ಲಿಂರು ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತಾರೆ ಎಂಬ ಭ್ರಮೆಯಿಂದ ಪಕ್ಷವು ಈ ಕುರಿತು ಚಕಾರವೆತ್ತಲಿಲ್ಲ. ಆದರೆ ಪ್ರಸ್ತುತ ಬಾಂಗ್ಲಾದೇಶದವರನ್ನು ವಾಪಸ್ ಕಳುಹಿಸಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್, ಯೂ ಟರ್ನ್ ಹೊಡೆದಿದೆ ಎಂದರು.

ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ ಮಾತನಾಡಿ, ನರೇಂದ್ರಮೋದಿ ಅವರು ಪ್ರಧಾನಮಂತ್ರಿ ಆದ ನಂತರ ದೇಶದ ರೈತರಿಗೆ ಹೆಮ್ಮೆಯ ಭಾವನೆ ಬಂದಿದೆ. ಸ್ವಾತಂತ್ರೃ ನಂತರ ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಅಭದ್ರತೆ ಕಾಡುತ್ತಿತ್ತು. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿತ್ತು. ಇದನ್ನು ಅರಿತ ನರೇಂದ್ರಮೋದಿ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರನ್ನು ರಕ್ಷಣೆ ಮಾಡಿದ್ದಾರೆ ಎಂದರು.

ರಾಜ್ಯದ 22 ಲಕ್ಷ ರೈತರು ಸಹಕಾರಿ ಸಂಘಗಳಲ್ಲಿ ಹಾಗೂ 18 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾರೆ. ಸರ್ಕಾರವು ಕೂಡಲೇ ಸಹಕಾರಿ ಸಂಘ ಹಾಗೂ ಬ್ಯಾಂಕ್‌ಗಳಿಗೆ ಆದೇಶ ಮಾಡಿ ಹಣವನ್ನು ಒದಗಿಸುವ ಮೂಲಕ ರೈತರ ನೆರವಿಗೆ ಬರಬೇಕು. ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರನ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಶಾಸಕ ಸಿ.ಎಸ್.ನಿರಂಜನಕುಮಾರ್, ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಮಾಜಿ ಶಾಸಕರಾದ ಸಿ.ಗುರುಸ್ವಾಮಿ, ಜಿ.ಎನ್.ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ಜಿಪಂ ಸದಸ್ಯ ಸಿ.ಎನ್.ಬಾಲರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೂರೊಂದುಶೆಟ್ಟಿ, ನಾಗೇಂದ್ರಸ್ವಾಮಿ, ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಇತರರಿದ್ದರು.

Leave a Reply

Your email address will not be published. Required fields are marked *