ಹೊರ ರಾಜ್ಯದವರಿಗೆ ನಕಲಿ ಆಧಾರ್ ಕಾರ್ಡ್

ಕಳಸ: ಹಣ ನೀಡಿದರೆ ಹೊರ ದೇಶದವರಿಗೂ ಸ್ಥಳೀಯರೆಂದು ನಮೂದಿಸಿ ಆಧಾರ್​ಕಾರ್ಡ್ ಮಾಡಿಕೊಡುವ ದಂಧೆ ಕಳಸ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇಲ್ಲಿಯ ಕೆಲ ಎಸ್ಟೇಟ್​ಗಳಿಗೆ ಹೊರ ರಾಜ್ಯ, ಹೊರದೇಶಗಳಿಂದ ಕೆಲಸಕ್ಕೆ ಬಂದು ಒಂದೆರೆಡು ತಿಂಗಳು ಇದ್ದು ಹೋದವರಿಗೆ ಸ್ಥಳೀಯ ವಿಳಾಸದಲ್ಲಿಯೇ ಆಧಾರ್​ಕಾರ್ಡ್ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ಹೋಬಳಿ ವ್ಯಾಪ್ತಿಯಲ್ಲಿನ ಕಾಫಿ ಎಸ್ಟೇಟ್​ಗಳಲ್ಲಿ ಕೆಲವು ತಿಂಗಳು ಕೆಲಸ ಮಾಡಲು ಹೊರ ರಾಜ್ಯ, ಹೊರ ದೇಶಗಳಿಂದ ಕಾರ್ವಿುಕರು ಬರುವುದು ಸಾಮಾನ್ಯ. ಹೀಗೆ ಬಂದವರು ಇಲ್ಲಿ ಕೆಲವೇ ತಿಂಗಳು ಮಾತ್ರ ದೊಡ್ಡ ಎಸ್ಟೇಟ್​ಗಳಲ್ಲಿನ ಲೈನ್ ಮನೆಗಳಲ್ಲಿ ವಾಸಕ್ಕಿದ್ದು, ಕೆಲಸ ಮುಗಿದ ಬಳಿಕ ಸ್ವಂತ ಊರಿಗೆ ಹಿಂದಿರುಗುತ್ತಾರೆ. ಹೀಗೆ ಕೆಲಸಕ್ಕೆ ಬಂದು ಎಸ್ಟೇಟ್​ಗಳ ಲೈನ್ ಮನೆಯಲ್ಲಿದ್ದ ಕೆಲವರಿಗೆ ಅದೇ ಎಷ್ಟೇಟ್​ನ ಕಾಯಂ ನಿವಾಸದ ವಿಳಾಸದಲ್ಲಿ ಆಧಾರ್ ಕಾರ್ಡ್ ವಿತರಣೆಯಾಗಿದೆ.

ಕಳಸ ಹೋಬಳಿ ವ್ಯಾಪ್ತಿಯ ಬಾಳೆಹೊಳೆ ಸಮೀಪದ ಬಂಟಗನಹಳ್ಳಿಯ ಎಸ್ಟೇಟ್ ಮಾಲೀಕರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಎಸ್ಟೇಟ್​ಗೆ ಕೆಲ ತಿಂಗಳವರೆಗೆ ಕೆಲಸಕ್ಕೆ ಬಂದಿದ್ದ ಅಸ್ಸಾಂ ಮೂಲದ ಕಾರ್ವಿುಕನೊಬ್ಬನಿಗೆ ನನ್ನ ಎಸ್ಟೇಟ್​ನ ವಿಳಾಸದಲ್ಲಿಯೇ ಆಧಾರ್ ಕಾರ್ಡ್ ನೀಡಿದ್ದಾರೆ. ಎಸ್ಟೇಟ್ ಕೆಲಸ ಮುಗಿದ ಬಳಿಕ ಕಾರ್ವಿುಕ ಅಸ್ಸಾಂಗೆ ವಾಪಸ್ ಹೋಗಿದ್ದು, ಆತ ಅಲ್ಲಿಂದ ಅಂಚೆ ಮೂಲಕ ಆಧಾರ್ ಕಾರ್ಡ್ ನನಗೆ ಕಳುಹಿಸಿದ್ದಾನೆ. ಆಧಾರ್ ಕಾರ್ಡ್ ವಿತರಿಸಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕೆಂದು 2017ರ ಆಗಸ್ಟ್​ನಲ್ಲಿಯೇ ದೂರಿನಲ್ಲಿ ಮನವಿ ಮಾಡಿದ್ದಾರೆ.

ಕಳಸ ಭಾಗದಲ್ಲಿ ಅಸ್ಸಾಂ ರಾಜ್ಯದವರೆಂದು ಸುಳ್ಳು ಹೇಳಿ ಸಾಕಷ್ಟು ಬಾಂಗ್ಲಾ ದೇಶದಿಂದ ಬಂದು ಎಸ್ಟೇಟುಗಳಲ್ಲಿ ಕೆಲಸಕ್ಕೆಂದು ಬಂದು ಸೇರಿಕೊಂಡಿದ್ದಾರೆ. ಇಂತಹವರಿಗೆ ಸ್ಥಳೀಯ ವಿಳಾಸದ ನಿವಾಸಿ ಎಂದು ಆಧಾರ್ ಕಾರ್ಡ್ ನೀಡುತ್ತಿದ್ದಾರೆ. ಒಂದೇ ಎಸ್ಟೇಟ್​ನಲ್ಲಿ 150ಕ್ಕೂ ಹೆಚ್ಚು ಆಧಾರ್ ಕಾರ್ಡ್ ನೀಡಲಾಗಿದ್ದು, ಇದರಲ್ಲಿ ಸ್ಥಳೀಯ ಮಧ್ಯವರ್ತಿಗಳ ಕೈವಾಡವಿದೆ. ಒಂದು ಕಾರ್ಡ್​ಗೆ 2000 ರೂ.ನಿಂದ 5000 ರೂ.ವರೆಗೆ ಹಣ ಪಡೆಯಲಾಗಿದೆ ಎಂದು ಪಟ್ಟಣದ ನಾಗರಿಕರು ಹೇಳುತ್ತಿದ್ದಾರೆ.

ವರ್ಷವಾದರೂ ಕ್ರಮಕೈಗೊಂಡಿಲ್ಲ: ನಕಲಿ ಆಧಾರ್ ಕಾರ್ಡ್ ನೀಡುತ್ತಿರುವುದು ಸಾರ್ವಜನಿಕರಿಗೂ ತಿಳಿದಿದೆ. ಬಂಟಗನಹಳ್ಳಿಯ ಎಸ್ಟೇಟ್ ಮಾಲೀಕರು 2017ರ ಆಗಸ್ಟ್​ನಲ್ಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಂದು ವರ್ಷವಾದರೂ ಕ್ರಮಕೈಗೊಂಡಿಲ್ಲ. ಈ ಕುರಿತು ಮೂಡಿಗೆರೆ ತಹಸೀಲ್ದಾರ್ ಪದ್ಮನಾಭ ಶಾಸ್ತ್ರಿ ಅವರನ್ನು ವಿಜಯವಾಣಿ ಸಂರ್ಪಸಿದಾಗ ನನ್ನ ಗಮನಕ್ಕೆ ಬಂದಿಲ್ಲ. ಅಲ್ಲದೆ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಹಾಗಾದರೆ ಇಂತಹ ದೇಶದ್ರೋಹ ಅಪರಾಧಕ್ಕೆ ಕಡಿವಾಣ ಹಾಕುವವರು ಯಾರು ಎಂಬುದು ಪ್ರಶ್ನೆ?

ಕಳಸ ಭಾಗದಲ್ಲಿ ನಕಲಿ ದಾಖಲೆ ಪಡೆದು ನಕಲಿ ಆಧಾರ್ ಕಾರ್ಡ್ ನೀಡಲಾಗುತ್ತಿದೆ. ಇದರಲ್ಲಿ ಬಾಂಗ್ಲಾ ವಲಸಿಗರಿಗೆ ಹೆಚ್ಚಿನ ಆಧಾರ್ ಕಾರ್ಡ್ ನೀಡಲಾಗಿದೆ. ನಕಲಿ ಆಧಾರ್ ಕಾರ್ಡ್ ಮಾಡುವವರನ್ನು ಮತ್ತು ಮಾಡಿಸಿದವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು.

| ಎಂ.ಎ.ಶೇಷಗಿರಿ, ತಾಪಂ ಮಾಜಿ ಅಧ್ಯಕ್ಷ