ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೆಸರಿನಲ್ಲಿ ಸುವರ್ಣ ಪದಕ ನೀಡಲು ಕರ್ನಾಟಕ ವಿಶ್ವ ವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ದತ್ತಿ ನಿಧಿಯ ಠೇವಣಿ ನೀಡಲಾಗಿದೆ ಎಂದು ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಿಂದಲೇ ಸುವರ್ಣ ಪದಕ ಸ್ಥಾಪಿಸಿದ್ದು, ಅ. 30ರಂದು ಏರ್ಪಡಿಸಿರುವ ಕವಿವಿ 73ನೇ ಘಟಿಕೋತ್ಸವದಲ್ಲಿ ಪದಕ ಪ್ರದಾನ ನೆರವೇರಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರ ಆಸಕ್ತಿ, ಇಚ್ಚೆ ಅನುಸಾರ ಅವರೇ ತಮ್ಮ ಹೆಸರಿನಲ್ಲಿ ಪದಕಕ್ಕಾಗಿ ಠೇವಣಿ ಇಟ್ಟಿದ್ದಾರೆ ಎಂದರು.
ಪ್ರಜಾಪ್ರಭುತ್ವದ ಬೆನ್ನೆಲುಬು ಆಗಿರುವ ಪತ್ರಿಕೋದ್ಯಮವು ಪ್ರಚಲಿತ ಕಾಲದಲ್ಲಿಯ ವಿಚಾರಗಳು, ಪ್ರಭಾವಗಳನ್ನು ಶಕ್ತಿಶಾಲಿಯನ್ನಾಗಿ ಬಿಂಬಿಸುತ್ತದೆ ಎಂಬುದು ಡಿ.ಕೆ.ಶಿವಕುಮಾರ ಬಲವಾದ ನಂಬಿಕೆ. ಇದೇ ಕಾರಣಕ್ಕೆ ಕವಿವಿಯ ಕವಿಪವಿ ವಿಭಾಗದಲ್ಲಿ ಸುವರ್ಣ ಪದಕ ಸ್ಥಾಪಿಸಿದ್ದು, ಈ ಪದಕವು ಪ್ರತಿ ವರ್ಷದ ಘಟಿಕೋತ್ಸವದಲ್ಲಿ ಪ್ರತಿಭಾವಂತರಿಗೆ ಸಿಗಲಿದೆ. ಸದ್ಯ 73ನೇ ಘಟಿಕೋತ್ಸವದಲ್ಲಿ ಸಿಂದಗಿ ತಾಲೂಕಿನ ಅಲಮೇಲಾ ದಾದಾಗೌಡ ಪಾಟೀಲ ಅವರಿಗೆ ಪದಕ ಪ್ರದಾನ ಆಗಲಿದೆ ಎಂದರು.
ಗೀತಾ ತಾವಂಶಿ, ಆನಂದ ಜಾಧವ, ಬಿ.ಎಚ್. ಪೂಜಾರ ಇತರರು ಇದ್ದರು.