ತೋಟಗಾರಿಕೆ ಉದ್ಯಮ ಸ್ಥಾಪಿಸಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ರಾಣೆಬೆನ್ನೂರಿನಿಂದ ಬೆಳಗಾವಿವರೆಗಿನ ಅಕ್ಕಪಕ್ಕದ 40 ಕಿ.ಮೀ. ಭೂ ಪ್ರದೇಶ ವಿಶೇಷ ಗುಣಗಳನ್ನು ಹೊಂದಿದ್ದು, ಇಂತಹ ವೈಶಿಷ್ಟ್ಯ ಜಗತ್ತಿನ ಬೇರೆಲ್ಲೂ ಇಲ್ಲ. ಇಲ್ಲಿ ತೋಟಗಾರಿಕೆ ಉತ್ಪನ್ನ ಆಧಾರಿತ ಉದ್ಯಮಗಳಿಗೆ ಆದ್ಯತೆ ನೀಡಬಹುದು ಎಂದು ಖ್ಯಾತ ಪರಿಸರವಾದಿ, ನಟ, ನಿರ್ದೇಶಕ ಸುರೇಶ ಹೆಬ್ಳೀಕರ ಹೇಳಿದರು.

ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಅವರು ಉಪನ್ಯಾಸ ನೀಡಿದರು.

ಇದು ಜೀವ ವೈವಿದ್ಯದ ತಾಣವಾಗಿದೆ. ಇಲ್ಲಿನ ಮಣ್ಣು ಕೃಷಿ ಹಾಗೂ ತೋಟಗಾರಿಕೆ ಬೆಳೆಗೆ ಹೇಳಿ ಮಾಡಿಸಿದಂತಿದೆ. ಅದಕ್ಕೆ ಪೂರಕ ಉದ್ಯಮವೇ ಇಲ್ಲಿ ಹೆಚ್ಚು ಅನುಕೂಲಕರ. ಬರೀ ದೊಡ್ಡ ಕೈಗಾರಿಕೆ, ಉದ್ಯಮಗಳಿಂದ ಮಾತ್ರ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎಂದು ವಿವರಿಸಿದರು.

ಕೈಗಾ ಅಣು ಸ್ಥಾವರಕ್ಕಾಗಿ ಲಕ್ಷಾಂತರ ಗಿಡ- ಮರಗಳನ್ನು ಕಡಿದು ಹಾಕಿದರು. ಬಹಳಷ್ಟು ವಿರೋಧ ವ್ಯಕ್ತಪಡಿಸಿದರೂ ಸರ್ಕಾರ ಘಟಕ ಸ್ಥಾಪಿಸಿತು. ಈಗ ಮಹದಾಯಿ ನದಿಗಾಗಿ ಹೋರಾಟ ನಡೆದಿದೆ. ಒಟ್ಟಾರೆ, ಪರಿಸರದ ಬಗ್ಗೆ ಮುಂದಾಲೋಚನೆ ಇರುವ ರಾಜಕಾರಣಿಗಳು ನಮಗೀಗ ಬೇಕಾಗಿದೆ ಎಂದರು.

40 ವರ್ಷಗಳಿಂದ ಕಾಡು ದೊಡ್ಡ ಪ್ರಮಾಣದಲ್ಲಿ ನಾಶ ಹೊಂದುತ್ತಿದೆ. ರಸ್ತೆ ವಿಸ್ತರಣೆಗೆ ಗಿಡ- ಮರ ಕಡಿಯಲಾಗುತ್ತದೆ. ಅನಗತ್ಯ ರಸ್ತೆ ವಿಸ್ತರಣೆ ಬೇಡ ಎಂದು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರಿಗೆ ಮನವಿ ಸಹ ಮಾಡಿದ್ದೆವು. ಆದರೂ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಕಾಡು ನಾಶ ಮಾಡಿದರು. ಇದರಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ರಾಜಸ್ಥಾನ ನಂತರ ಕರ್ನಾಟಕದಲ್ಲೇ ಹೆಚ್ಚು ಮರಭೂಮಿ ಪ್ರದೇಶ ಇದೆ ಎಂದರು.

ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷರಾದ ಶಂಕ್ರಣ್ಣ ಮುನವಳ್ಳಿ, ವಸಂತ ಲದ್ವಾ, ರಮೇಶ ಪಾಟೀಲ, ಪದಾಧಿಕಾರಿಗಳಾದ ಮಹೇಂದ್ರ ಲದ್ದಡ, ಸಿ.ಜಿ. ಧಾರವಾಡಶೆಟ್ಟರ್, ಮಾಜಿ ಎಂಎಲ್​ಸಿ ಮೋಹನ ಲಿಂಬಿಕಾಯಿ ಇತರರು ಇದ್ದರು.

ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನಗೌಡರ ಸ್ವಾಗತಿಸಿದರು. ಬಿ.ಬಿ. ಪಾಟೀಲ ಪರಿಚಯಿಸಿದರು. ಗೌರವ ಕಾರ್ಯದರ್ಶಿ ವಿನಯ ಜವಳಿ ವಂದಿಸಿದರು.

Leave a Reply

Your email address will not be published. Required fields are marked *