ಶಿವಮೊಗ್ಗ: ಕೇಂದ್ರ ಸರ್ಕಾರದ ಹಂತದಲ್ಲಿ ವಕ್ಫ್ ಆಸ್ತಿ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವಕ್ಫ್ ಆಸ್ತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ಬಡ ಮುಸ್ಲಿಂ ವ್ಯಕ್ತಿಗಳಿಗೆ ಸೇರಬೇಕಾದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಕೆಲವೇ ಮುಸ್ಲಿಂ ಮುಖಂಡರ ಪಾಲಾಗಿದೆ ಎಂಬುದನ್ನು ಆಗ ಮಾಣಿಪ್ಪಾಡಿ ವರದಿಯಲ್ಲಿ ಉಲ್ಲೇಖಿಸಿದ್ದರು. ಆಗ ಕಾಂಗ್ರೆಸ್‌ನವರು ಆ ವರದಿಯನ್ನು ವಿರೋಧಿಸಿದ್ದರು ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕನಾಗಿದ್ದಾಗ ಈ ವರದಿ ಜಾರಿಗೆ ಒತ್ತಾಯಿಸಿದ್ದೆ. ಈಗ ಕೇಂದ್ರ ಸಂಸದೀಯ ಮಂಡಳಿ ಸಭೆಯಲ್ಲಿ ಆ ವರದಿ ಬಗ್ಗೆ ಚರ್ಚೆಯಾಗಿದೆ ಎಂದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕ ರೆಹಮಾನ್ ಖಾನ್ ವಕ್ಫ್ ಆಸ್ತಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಈ ವರದಿಯ ಜಾರಿಗೆ ಅಡ್ಡಿಪಡಿಸಬಾರದು. ಸಾವಿರಾರು ಕೋಟಿ ರೂ. ಆಸ್ತಿ ಕೆಲವೇ ವ್ಯಕ್ತಿಗಳ ಪಾಲಾಗಲು ಬಿಡಬಾರದು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ವರದಿ ಜಾರಿಗೆ ಸಹಕರಿಸಲಿ ಎಂದು ಆಗ್ರಹಿಸಿದರು.