ಪರಾರಿಯಾದ ಕೈದಿ ಶೋಧಕ್ಕೆ ತಂಡ ರಚನೆ

ಬೆಳಗಾವಿ: ಮರಣದಂಡನೆಗೆ ಒಳಗಾಗಿದ್ದ ಕೈದಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿನ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಪರಾರಿಯಾದ ಕೈದಿಯ ಶೋಧಕ್ಕಾಗಿ ತಂಡ ರಚಿಸಲಾಗಿದೆ ಎಂದು ಹಿಂಡಲಗಾ ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಪಿ.ಶೇಷ ತಿಳಿಸಿದ್ದಾರೆ.

ತಮಿಳುನಾಡಿನ ಸೇಲಂ ನಗರದ ನಿವಾಸಿ ಮುರುಗನ್ ಅಂಡಿಯಪ್ಪನ್(51) ಏ.22 ರಂದು ಸಂಜೆ 7.30 ರ ಸುಮಾರಿಗೆ ಹಿಂಡಲಗಾ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದನು. 2015 ರಲ್ಲಿ ಚಾಮರಾಜನಗರದಲ್ಲಿ 5 ಜನರನ್ನು ಕೊಚ್ಚಿ ಕೊಲೆ ಮಾಡಿದ ಅಪರಾಧಕ್ಕೆ ಮರಣದಂಡಣೆಗೆ ಒಳಗಾಗಿ 2017 ರಲ್ಲಿ ಹಿಂಡಲಗಾ ಜೈಲು ಪಾಲಾಗಿದ್ದ. ಕೈದಿ ಪರಾರಿಯಾಗುವಲ್ಲಿ ಸಿಬ್ಬಂದಿ ಕರ್ತವ್ಯಲೋಪ ಕಾರಣ ಎಂಬುದರಿಂದ ಹಿಂಡಲಗಾ ಕಾರಾಗೃಹದ ಜೈಲರ್, ಚೀಫ್ ವಾರ್ಡರ್ ಮತ್ತು ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.

ಮುರುಗನ್ ಇನ್ನಿತರ ಮೂವರು ಕೈದಿಗಳೊಂದಿಗೆ ಸೇರಿ ತಪ್ಪಿಸಿಕೊಳ್ಳಲು ಏಪ್ರಿಲ್ ಮೊದಲ ವಾರದಿಂದಲೇ ಸಂಚು ರೂಪಿಸತೊಡಗಿದ್ದರು. ಕಾರಾಗೃಹದಲ್ಲಿನ ಹಳೆಯ ಚಾದರ ಮತ್ತು ಬೆಡಶೀಟ್‌ಗಳನ್ನು ಕತ್ತರಿಸಿ ಹಗ್ಗದಂತೆ ಹೊಸೆದು ಅದಕ್ಕೆ ಕಬ್ಬಿಣದ ಸರಳು(ಕೊಕ್ಕೆ) ಕಟ್ಟಿ ಗೋಡೆಗೆ ಎಸೆದು ಆ ಹಗ್ಗ ಏರಿ ಅಲ್ಲಿಂದ ಪರಾರಿಯಾಗಲು ಸಿದ್ಧತೆ ನಡೆಸಿದ್ದರು ಎಂಬುದು ಬಹಿರಂಗವಾಗಿದೆ. ಸಂಚಿನಂತೆ ಮೊದಲು ಮುರುಗನ್ ಗೋಡೆ ಏರಿ ಪರಾರಿಯಾಗಿದ್ದಾನೆ. ಆದರೆ, ಆನಂತರ ಹಗ್ಗ ಏರುವಲ್ಲಿ ಮತ್ತೊಬ್ಬ ಕೈದಿ ಸಲೀಂ ವಿಫಲನಾಗಿದ್ದಾನೆ ಎಂದು ಗೊತ್ತಾಗಿದೆ.

ಕೈದಿಗಳಾದ ಸಲೀಂ ಅಬ್ದುಲ್ ಕೈಂ, ಮುಬಾರಕ್‌ಮಹ್ಮದ್ ದಸ್ತಗಿರ್, ಕರುಣಾಕರ ಭಟ್ಯಾ ಪಟಾಳಿ ಅವರು ಪರಾರಿಯಾಗಲು ಇವರಿಗೆ ಸಹಾಯ ಮಾಡಿದ್ದಾರೆ. ಇವರಲ್ಲಿ ಇಬ್ಬರು ಜೀವಾವಧಿ ಶಿಕ್ಷೆ ಹಾಗೂ ಮತ್ತೋರ್ವ ಮರಣದಂಡನೆಗೆ ಒಳಗಾಗಿದ್ದನು. ಜೈಲಿನ ಗೋಡೆ ಹಾರಿ ಪರಾರಿಯಾಗಿರುವ ಕೈದಿ ಮುರುಗನ್ ಈ ಹಿಂದೆ ಅಪಘಾತವೊಂದರಲ್ಲಿ ಕೈ ಮುರಿತಕ್ಕೆ ಒಳಗಾಗಿದ್ದು, ಕೈಗೆ ಕಬ್ಬಿಣ ರಾಡ್ ಹಾಕಲಾಗಿತ್ತು ಎಂದು ಗೊತ್ತಾಗಿದೆ.

Leave a Reply

Your email address will not be published. Required fields are marked *