More

    ಶಿಕ್ಷಣದಲ್ಲಿ ಸಮತೆಯನ್ನು ಸಾಧಿಸುವಲ್ಲಿ ಅನುವಾದದ ಪ್ರಾಮುಖ್ಯತೆ: ಅಜೀಂ ಪ್ರೇಮ್ ಜಿ ವಿವಿಯಿಂದ ಆರಂಭಿಕ ಹೆಜ್ಜೆ

    ಮೂವತ್ತನಾಲ್ಕು ವರ್ಷಗಳ ಹಿಂದಿನ ಮಾತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್​ ಅನ್ನು ಅಧ್ಯಯನ ಮಾಡುತ್ತಿದ್ದ ಕಾಲ. ನನ್ನ ಜೊತೆಯಿದ್ದ ಇಪ್ಪತ್ತು ಸಹಪಾಠಿಗಳಲ್ಲಿ ಸುಮಾರು ಮೂರನೇ ಎರಡರಷ್ಟು ವಿದ್ಯಾರ್ಥಿಗಳು ಪದವಿ ಹಂತದವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವರಾಗಿದ್ದು ಗ್ರಾಮೀಣ ಪ್ರದೇಶಗಳಿಂದ ಬಂದವರಾಗಿದ್ದರು. ಸಮಾಜಕಾರ್ಯ ಶಿಕ್ಷಣದ ಆಶಯವೆಂದರೆ ವಿದ್ಯಾರ್ಥಿಗಳು ವಿಷಯದ ಸೈದ್ಧಾಂತಿಕ ಜ್ಞಾನವನ್ನು ಹೊಂದಿ ಕಾರ್ಯಕ್ಷೇತ್ರದಲ್ಲಿ ಅದನ್ನು ಪರಿಣಾಮಕಾರಿಯಾಗಿ ಅನ್ವಯಿಸುವ ಮೂಲಕ ಅಪೇಕ್ಷಿತ ಸಾಮಾಜಿಕ ಬದಲಾವಣೆಗಾಗಿ ಕಾರ್ಯಪ್ರವೃತ್ತರಾಗಲು ಅವರನ್ನು ವೃತ್ತಿಪರರನ್ನಾಗಿ ಸಜ್ಜುಗೊಳಿಸುವುದೇ ಆಗಿದೆ.

    ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಅಂದಿನ ನನ್ನ ಸಹಪಾಠಿಗಳಿಗೆ ತರಗತಿಗಳಲ್ಲಿ ಪ್ರಾಧ್ಯಾಪಕರು ಇಂಗ್ಲಿಷ್​ನಲ್ಲಿ ಬೋಧಿಸುತ್ತಿದ್ದ ಅಂಶಗಳನ್ನು ಗ್ರಹಿಸಲು ಕಷ್ಟಪಡುತ್ತಿದ್ದುದನ್ನು ನಾನು ಗಮನಿಸಿದ್ದೆ. ಅಲ್ಲದೆ ಕೋರ್ಸಿನ ಮೂಲ ವಿಷಯಗಳಿಗೆ ಸಂಬಂಧಿಸಿದ ಪಠ್ಯಗಳು ಬಹುತೇಕ ಇಂಗ್ಲಿಷ್​ನಲ್ಲೇ ಲಭ್ಯವಿದ್ದುದರಿಂದ ಅವರು ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಅಷ್ಟೇನೂ ಉತ್ತಮವಲ್ಲದ ಕನ್ನಡದ ಮಾರ್ಗದರ್ಶಿ ಪುಸ್ತಕಗಳನ್ನು ಅವಲಂಬಿಸುತ್ತಿದ್ದರು. ಇಲ್ಲವೆ ತಾವೇ ಕೆಲವು ಅಗತ್ಯ ಇಂಗ್ಲಿಷ್ ಪಠ್ಯಗಳನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳುತ್ತಿದ್ದರು. ಬಹುತೇಕ ವಿದ್ಯಾರ್ಥಿಗಳು ನಿಗದಿತ ಅಸೈನ್​ಮೆಂಟ್, ಕ್ಷೇತ್ರ ವರದಿ ಮತ್ತು ವಾರ್ಷಿಕ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುತ್ತಿದ್ದುದರಿಂದ (ಆಗಿನ್ನೂ ಸೆಮೆಸ್ಟರ್ ಪದ್ಧತಿ ಜಾರಿಗೆ ಬಂದಿರಲಿಲ್ಲ) ಅನುವಾದ ಕಾರ್ಯದಲ್ಲಿ ತೊಡಗುವುದು ಅನಿವಾರ್ಯವಾಗಿತ್ತು.

    ಎಲ್ಲಕ್ಕಿಂತ ಹೆಚ್ಚಾಗಿ ಕ್ಷೇತ್ರಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮುದಾಯಗಳೊಂದಿಗೆ ಸಂವೇದನಾಶೀಲತೆಯಿಂದ ವ್ಯವಹರಿಸುತ್ತಿದ್ದ ಅವರು ತರಗತಿಯಲ್ಲಿ ನಡೆಯುತ್ತಿದ್ದ ಶೈಕ್ಷಣಿಕ ಚರ್ಚೆಗಳಿಂದ ವಿಮುಖರಾಗಿ ಕೀಳರಿಮೆಯಿಂದಲೇ ಭಾಗವಹಿಸುತ್ತಿದ್ದರು. ಇದಕ್ಕೆ, ಅವರ ಬೌದ್ಧಿಕ ಮಟ್ಟ ಕಡಿಮೆಯಿತ್ತು ಎಂಬ ಕಾರಣಕ್ಕಿಂತ ಅವರಿಗೆ ಪರಿಚಿತವಲ್ಲದ ಭಾಷೆಯೊಂದರಲ್ಲಿ ಶೈಕ್ಷಣಿಕ ಪ್ರಕ್ರಿಯೆ ನಡೆಯುತ್ತಿದ್ದುದು ಅವರ ಕಲಿಕೆಗೆ ಪ್ರಮುಖ ಅಡಚಣೆಯಾಗಿತ್ತು. ಅವರು ಕಲಿತ ವಿಷಯಗಳನ್ನು ತಮ್ಮ ಜೀವನಾನುಭವಗಳಿಗೆ, ಸುತ್ತಲಿನ ಪರಿಸರದ ಆಗು-ಹೋಗುಗಳಿಗೆ ಸಂಬಂಧೀಕರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ತಮ್ಮ ಸಹಪಾಠಿಗಳು ಮತ್ತು ಪ್ರಾಧ್ಯಾಪಕರೊಂದಿಗೆ ಮುಕ್ತವಾಗಿ ಬೆರೆತು ಆತ್ಮವಿಶ್ವಾಸದಿಂದ ಒಡನಾಡಲು ಸಾಧ್ಯವಾಗುತ್ತಿರಲಿಲ್ಲ.

    ಈ ಹಿನ್ನಡೆಯ ಸ್ಥಿತಿಗೆ ಗ್ರಂಥಾಲಯಗಳಲ್ಲಿ ಗುಣಮಟ್ಟದ ಪಠ್ಯಪುಸ್ತಕಗಳು, ಅಧ್ಯಯನ ಸಾಮಗ್ರಿಗಳು ಕನ್ನಡದಲ್ಲಿ ಯಥೇಚ್ಛವಾಗಿ ಲಭ್ಯವಿಲ್ಲದಿದ್ದುದೂ ಪ್ರಮುಖ ಸಂಗತಿಯಾಗಿತ್ತು. ಹೀಗಿದ್ದರೂ, ವೈಯಕ್ತಿಕ ಬದ್ಧತೆ, ಸಾಮಾಜಿಕ ಕಾಳಜಿ ಮತ್ತು ಒತ್ತಾಸೆಗಳಿಂದ ಆ ತರಗತಿಯ ಬಹುತೇಕರು ಮುಂದೆ ಅಭಿವೃದ್ಧಿ, ಶಿಕ್ಷಣ, ಸಮಾಜ ಕಲ್ಯಾಣ, ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲ, ಪತ್ರಿಕೋದ್ಯಮದಂಥ ಕ್ಷೇತ್ರಗಳಲ್ಲಿ ವೃತ್ತಿಪರರಾಗಿ ಬೆಳೆದು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.

    ಬಹುತೇಕ ಮೂರೂವರೆ ದಶಕಗಳ ನಂತರವೂ ಮೇಲಿನ ಸ್ಥಿತಿ ಅಷ್ಟಾಗಿ ಬದಲಾಗಿಲ್ಲ ಎಂದೇ ಹೇಳಬೇಕಾಗುತ್ತದೆ. 2019-20 ರಲ್ಲಿ ಭಾಷಾ ಮಾಧ್ಯಮ ಮತ್ತು ಶಿಕ್ಷಣವನ್ನು ಕುರಿತು ರಾಜ್ಯದ ನಾಲ್ಕು ಶೈಕ್ಷಣಿಕ ವಿಭಾಗಗಳಲ್ಲಿ ಈ ಲೇಖಕ ಕೈಗೊಂಡ ಅಧ್ಯಯನವೊಂದರಲ್ಲಿ, ಉನ್ನತ ಶಿಕ್ಷಣವನ್ನು ಮುಂದುವರೆಸುವಲ್ಲಿ ಮತ್ತು ವೃತ್ತಿಬದುಕಿನ ಬೆಳವಣಿಗೆಯಲ್ಲಿ ಭಾಷಾ ಮಾಧ್ಯಮದ ಪಾತ್ರವನ್ನು ಅವಲೋಕಿಸಲಾಯಿತು. ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.50 ರಷ್ಟು ಜನ ಸ್ನಾತಕೋತ್ತರ ಹಂತದವರೆಗೂ ಕನ್ನಡ ಮಾಧ್ಯಮವನ್ನೇ ಆಯ್ಕೆ ಮಾಡಿಕೊಂಡಿದ್ದರು. ಶೇ.36 ರಷ್ಟು ಜನ ಪಿ.ಎಚ್.ಡಿ/ಎಂ.ಫಿಲ್ ಪದವಿ ಹಂತಗಳನ್ನೂ ಅಧ್ಯಯನ ಮುಂದುವರೆಸಿದ್ದರು.

    ಈ ಹಿನ್ನೆಲೆಯಲ್ಲಿ ನೋಡಿದಾಗ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಇಂದಿಗೂ ಕೂಡ ಪದವಿ, ಸ್ನಾತಕೋತ್ತರ ಹಂತದಲ್ಲಿ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮಗಳೆರಡರಲ್ಲೂ ಬೋಧನೆ ಮತ್ತು ಚರ್ಚೆಗಳು ನಡೆಯುತ್ತಿರುವುದು ವಾಸ್ತವದ ಸಂಗತಿ. ಹೀಗಿದ್ದರೂ ಪ್ರಮುಖ ಅಧ್ಯಯನ ವಿಷಯಗಳಲ್ಲಿ ಮೂಲ ಪರಿಕಲ್ಪನೆಗಳನ್ನು ಕಟ್ಟಿಕೊಡಬಲ್ಲ, ತಳಸ್ತರದ ಅನುಭವಗಳನ್ನು ಆಧರಿಸಿ ಕನ್ನಡದಲ್ಲೇ ರಚಿಸಲಾದ ಪಠ್ಯಪುಸ್ತಕಗಳು, ಅಧ್ಯಯನ ಸಾಮಗ್ರಿಗಳ ಕೊರತೆ ಢಾಳಾಗಿಯೇ ಕಾಣುತ್ತದೆ. ನ್ಯಾಷನಲ್ ಟ್ರಾನ್ಸ್ಲೇಶನ್ ಮಿಷನ್​ನಂಥ ಸಂಸ್ಥೆಗಳು ಇಂಗ್ಲಿಷ್​ನ ಸಾಕಷ್ಟು ಶೈಕ್ಷಣಿಕ ಪಠ್ಯಗಳನ್ನು ಭಾರತದ ಪ್ರಮುಖ ಭಾಷೆಗಳಿಗೆ ಅನುವಾದಿಸುತ್ತಿರುವುದು ಶ್ಲಾಘನೀಯವಾದರೂ ವಿದ್ಯಾರ್ಥಿಗಳು. ಶಿಕ್ಷಕರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ವಿಶ್ವವಿದ್ಯಾಲಯಗಳು, ಸಂಸ್ಥೆಗಳು ಪ್ರಯತ್ನಿಸಬೇಕಾಗಿದೆ.

    ಭಾರತದಂಥ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಗಳ ವಿದ್ಯಾರ್ಥಿಗಳು ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯುವುದು ಸಂವಿಧಾನದ ಮೂಲ ಆಶಯವಾದ ಸಮಾನತೆ ಮತ್ತು ಸಮತೆಯ ದೃಷ್ಟಿಯಿಂದ ಅತ್ಯಗತ್ಯವಾದುದು. ಮಿಗಿಲಾಗಿ ಸಮಾಜದ ಎಲ್ಲ ಸ್ತರಗಳ ಜನರೂ ಜ್ಞಾನ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಲು ಭಾಷೆ ತೊಡಕಾಗಬಾರದು. ಜಗತ್ತಿನ ಅನೇಕ ಮುಂದುವರೆದ ದೇಶಗಳಲ್ಲಿ ಉನ್ನತ ಶಿಕ್ಷಣ ಹಂತದ ಭಾಷಾ ಮಾಧ್ಯಮ ಆಯಾ ದೇಶಗಳ ಪ್ರಾದೇಶಿಕ ಭಾಷೆಯೇ ಆಗಿದೆ. ವಾಸ್ತವವಾಗಿ, ಆ ದೇಶಗಳ ವೈಜ್ಞಾನಿಕ, ಸಮಾಜೋ-ಆರ್ಥಿಕ ಪ್ರಗತಿಗೆ, ಅಲ್ಲಿನ ಜನರು ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಳ್ಳಲು ಕೂಡ ಮಾತೃಭಾಷಾ ಶಿಕ್ಷಣ ಚಿಮ್ಮುಹಲಗೆಯಾಗಿದೆ.

    ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿಯೇ 2020ರ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣದ ಮಹತ್ವವನ್ನು ಗುರುತಿಸಿ ಉನ್ನತ ಶಿಕ್ಷಣವನ್ನೂ ಒಳಗೊಂಡಂತೆ ದೇಶದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ವಿಸ್ತೃತ ನೆಲೆಯಲ್ಲಿ ಶೈಕ್ಷಣಿಕ ಸಂಪನ್ಮೂಲಗಳ ರಚನೆಗೆ ಆದ್ಯತೆ ನೀಡಿದೆ. ಈ ಆಶಯಕ್ಕೆ ಪೂರಕವಾಗಿ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯವು ಶಿಕ್ಷಣ ಮತ್ತು ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಆಯ್ದ ಗುಣಮಟ್ಟದ ಪಠ್ಯಗಳನ್ನು ಇಂಗ್ಲಿಷ್​ನಿಂದ ಕನ್ನಡ ಮತ್ತು ಹಿಂದಿ ಭಾಷೆಗಳಿಗೆ ಅನುವಾದಿಸಿ ಅಂತಹ ಸಂಪನ್ಮೂಲಗಳನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ‘ಅನುವಾದ ಸಂಪದ’ ಎಂಬ ಕಣಜದಲ್ಲಿ ಸೇರಿಸಿ, ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು, ಈ ಕ್ಷೇತ್ರಗಳಲ್ಲಿ ತೊಡಗಿಕೊಂಡ ಸರ್ಕಾರೇತರ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳು, ಇತರ ಆಸಕ್ತರಿಗೆ ಸುಲಭವಾಗಿ, ಮುಕ್ತವಾಗಿ ಲಭ್ಯವಾಗುವಂತೆ ಒದಗಿಸುತ್ತಿದೆ.

    ಉಲ್ಲೇಖಾರ್ಹವಾಗಿ ಸಂಪದದಲ್ಲಿ ಶಿಕ್ಷಣವನ್ನು ಕುರಿತ ಅನುವಾದಿತ ಪಠ್ಯಗಳ ಹರವನ್ನು ಗಮನಿಸಿದರೆ, ಅದರಲ್ಲಿ ಮಗುವಿನ ಬೆಳವಣಿಗೆಯ ಮನೋವೈಜ್ಞಾನಿಕ ದೃಷ್ಟಿಕೋನಗಳು, ಮಗುವಿನ ಸಾಮಾಜಿಕ ಹಿನ್ನೆಲೆಯ ಬಗೆಗಿನ ಒಳನೋಟಗಳು, ಜ್ಞಾನದ ಸಂರಚನೆಯನ್ನು ಶೋಧಿಸುವ ತತ್ತ್ವಶಾಸ್ತ್ರೀಯ ವಿಚಾರಗಳು, ಪ್ರಾಥಮಿಕ ಶಿಕ್ಷಣದಲ್ಲಿ ಇತಿಹಾಸದ ಉದ್ದೇಶ ಹಾಗೂ ಶಿಕ್ಷಣದ ಗುರಿಗಳು ಮತ್ತು ತರಗತಿ ಕೋಣೆ ಪ್ರಕ್ರಿಯೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಲೇಖನಗಳು, ಶಿಕ್ಷಣದ ವಿವಿಧ ಆಯಾಮಗಳನ್ನು ಕುರಿತ ಸಂಶೋಧನಾ ವರದಿಗಳು ಸೇರಿವೆ.

    ಜೊತೆಗೆ, ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವುದರೊಂದಿಗೆ ಇಂತಹ ಸಂಪನ್ಮೂಲಗಳು ಶಾಲಾ ಶಿಕ್ಷಕರ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಮತ್ತು ಅವರ ತರಗತಿಗಳಲ್ಲಿ ಮಕ್ಕಳನ್ನು ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಲ್ಲಿ ಆಸಕ್ತಿದಾಯಕವಾಗಿ ತೊಡಗಿಸಿಕೊಳ್ಳಲು ಬಳಸಬಹುದಾದ ಚಟುವಟಿಕೆಯಾಧಾರಿತ ಬರಹಗಳು, ಶಿಕ್ಷಣದ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ನಿಯತಕಾಲಿಕೆಗಳ ಲೇಖನಗಳು ಲಭ್ಯವಿರುತ್ತವೆ.

    ಇಂದಿನ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಹಲವಾರು ಬಿಕ್ಕಟ್ಟುಗಳ ನಡುವೆಯೂ ಅದರ ಸುಧಾರಣೆಗಾಗಿ ಬದ್ಧತೆಯಿಂದ ತೊಡಗಿಸಿಕೊಂಡಿರುವ ಶಿಕ್ಷಕರು ಮತ್ತು ಶಿಕ್ಷಕರ ಬಹಳ ಮುಖ್ಯವಾದ ಕೊರಗು ಇಂದಿನ ವಿದ್ಯಾರ್ಥಿಗಳು ಮತ್ತು ಹಲವು ಶಿಕ್ಷಕರಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವುದು. ಈ ಸವಾಲು ಇಂಗ್ಲಿಷ್​ನ ಪಠ್ಯಗಳಿಗಷ್ಟೇ ಸೀಮಿತವಾಗಿರದೆ ಕನ್ನಡದ ಲೇಖನ, ಪುಸ್ತಕಗಳಲ್ಲಿ ಮಂಡಿಸಲಾದ ಗಹನವಾದ ತಾರ್ಕಿಕ ವಿಚಾರಗಳನ್ನು ಅವುಗಳ ಆಳ-ವಿಸ್ತೀರ್ಣದಲ್ಲಿ ಗ್ರಹಿಸಲಾರದಿರುವುದು, ಅವುಗಳನ್ನು ತಮ್ಮ ಸ್ವಂತ ಆಲೋಚನೆಯೊಂದಿಗೆ ಬರಹ ರೂಪದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಅಭಿವ್ಯಕ್ತಿಸಲಾರದ ಸ್ಥಿತಿ ತಲುಪಿರುವುದು ಇಂದಿನ ಶಿಕ್ಷಣ ವ್ಯವಸ್ಥೆ, ಅದರಲ್ಲೂ ಪರೀಕ್ಷಾ ಪದ್ಧತಿಗೆ ಹಿಡಿದ ಕನ್ನಡಿಯಂತಿದೆ. ಈ ಹಿನ್ನೆಲೆಯಲ್ಲಿ ಅನುವಾದಿತ ಸಂಪನ್ಮೂಲಗಳನ್ನೂ ಒಳಗೊಂಡಂತೆ ಕನ್ನಡದಲ್ಲಿ ಉತ್ಕೃಷ್ಟ ಗುಣಮಟ್ಟದ ಸಾಮಗ್ರಿಗಳ ಸಂಗ್ರಹ ಮತ್ತು ಲಭ್ಯತೆ ಆರಂಭಿಕ ಹೆಜ್ಜೆ ಮಾತ್ರ.

    ಇಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಎದುರಿಸುತ್ತಿರುವ ಒಂದು ಶೈಕ್ಷಣಿಕ ಹಾಗೂ ಸಾಮಾಜಿಕ ಗೊಂದಲವನ್ನು ಪ್ರಸ್ತಾಪಿಸಬೇಕಲ್ಲದೆ ಅದರ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಳ್ಳುವುದು ಅಗತ್ಯವೆನಿಸುತ್ತದೆ. ಭಾರತೀಯ ಭಾಷೆಗಳಲ್ಲಿ ಉನ್ನತ ಹಂತದ ಶಿಕ್ಷಣಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಸಿದ್ಧಪಡಿಸುವ ಭರದಲ್ಲಿ ಪಾಶ್ಚಿಮಾತ್ಯ ಜಗತ್ತು ಮತ್ತು ಅಲ್ಲಿನ ಜ್ಞಾನಪರಂಪರೆಯೊಂದಿಗಿನ ಅನುಸಂಧಾನಕ್ಕಾಗಿ ಬೇಕಾದ ಇಂಗ್ಲಿಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವ ಮತ್ತು ಕಲಿಯುವ ವ್ಯವಸ್ಥೆ ಆಗಬೇಕಾಗಿರುವುದರ ಬಗ್ಗೆ ಸಂಶಯಗಳಿರಬೇಕಾಗಿಲ್ಲ. ಆದರೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ದಕ್ಕಿಸಿಕೊಳ್ಳುವುದಕ್ಕೂ, ಇತರ ಎಲ್ಲ ವಿಷಯಗಳನ್ನೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದಕ್ಕೂ ಇರುವ ವ್ಯತ್ಯಾಸವನ್ನು ಅರಿಯಲಾಗದಿರುವುದರಿಂದ ಪ್ರಸ್ತುತ ಸಮಾಜ ಬಹುದೊಡ್ಡ ಶೈಕ್ಷಣಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

    ಆ ಗೊಂದಲವನ್ನು ಮೀರಿ, ಇದೊಂದು ಜ್ಞಾನಭಂಡಾರ ಸೃಷ್ಟಿ ಕಾರ್ಯವಾಗಿದ್ದು ಈ ಸಂಪದವನ್ನು ಹೆಚ್ಚು ಜನರು ಬಳಸುವಂತಾಗಿ ಕನ್ನಡದಲ್ಲಿ ಗುಣಾತ್ಮಕ ಸಂಪನ್ಮೂಲಗಳಿಗಾಗಿ ಇರುವ ಬೇಡಿಕೆ ಗಣನೀಯವಾಗಿ ಹೆಚ್ಚಬೇಕಾಗಿದೆ. ಈಗಾಗಲೇ ಲಭ್ಯವಿರುವ ಇತರ ಮೌಲಿಕ ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವುದು, ಕನ್ನಡದಲ್ಲಿಯೇ ಕ್ಷೇತ್ರಾನುಭವಗಳನ್ನು ಪರ್ಯಾಲೋಚಿಸಿ ಬರೆಯುವುದು, ನಿರ್ದಿಷ್ಟ ವಿಷಯಗಳನ್ನು ಕುರಿತು ಅರ್ಥಪೂರ್ಣ ಚರ್ಚೆ, ಸಂವಾದಗಳನ್ನು ಹಮ್ಮಿಕೊಳ್ಳುವುದು, ಅನುವಾದ ಕಾರ್ಯದಲ್ಲಿ ಭಾಗವಹಿಸುವುದು ಈ ಎಲ್ಲ ಉಪಕ್ರಮಗಳೂ ಒಟ್ಟೊಟ್ಟಿಗೇ ನಡೆಯಬೇಕಾಗಿದೆ.

    ಶೈಕ್ಷಣಿಕ ಅನುವಾದದ ಈ ಪ್ರಯತ್ನದ ಉಪಯೋಗವನ್ನು ಹೆಚ್ಚಿನ ಸಂಖ್ಯೆಯ ಜನರು ಪಡೆಯುವಂತಾದಗಿ ಪುಸ್ತಕ ಪ್ರಕಾಶಕರು, ಲೇಖಕರು ಹೊಂದಿರುವ ಹಕ್ಕುಸ್ವಾಮ್ಯದ ಮೇಲಿನ ಹಿಡಿತವನ್ನು ಸಡಿಲಿಸಿ ಇಂಗ್ಲಿಷ್ ನ ಹೆಚ್ಚಿನ ಪ್ರಮಾಣದ ಮೌಲಿಕ ಪಠ್ಯಗಳು ಕನ್ನಡದ ಓದುಗರಿಗೆ ದೊರೆಯುವಂತಾಗಬೇಕು. ಅಲ್ಲದೆ ಕನ್ನಡದಲ್ಲಿ ಲಭ್ಯವಿರುವ ಅತ್ಯುತ್ತಮ ಸಂಪನ್ಮೂಲ ಸಾಹಿತ್ಯ ಇತರ ಭಾಷೆಗಳ ಜನರಿಗೂ ಸಿಗುವಂತಾಗಿ ಜ್ಞಾನದ ಹರಿವು ಎರಡೂ ದಿಕ್ಕುಗಳಲ್ಲಿಯೂ ಸೀಮಾತೀತವಾಗಿ ಚಲಿಸುತ್ತದೆ. ಆಗಲೇ ನಿಜ ಅರ್ಥದಲ್ಲಿ ಶಿಕ್ಷಣದ ಪ್ರಜಾಸತ್ತಾತ್ಮಕತೆ ಸಾಕಾರಗೊಂಡು ಕನ್ನಡದಂಥ ಪ್ರಾದೇಶಿಕ ಭಾಷೆಗಳು ಸಮೃದ್ಧವಾಗಿ ಬೆಳೆಯುತ್ತವೆ.

    ಆಸಕ್ತರು ಮುಕ್ತವಾಗಿ ಲೇಖನಗಳನ್ನು ಪಡೆಯಲು http://anuvadasampada.azimpremjiuniversity.edu.in/ ಗೆ ಭೇಟಿ ನೀಡಬಹುದು.

    ಎಸ್.ವಿ.ಮಂಜುನಾಥ್
    ಸಹ ನಿರ್ದೇಶಕರು
    ಅನುವಾದ ಉಪಕ್ರಮ
    ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts