ಕೆಲಸಕ್ಕೆ ಸಮಾನ ವೇತನಕ್ಕಾಗಿ ನೀರಗಂಟಿಗಳ ಪ್ರತಿಭಟನೆ

ಹೊನ್ನಾಳಿ: ಕೆಲಸಕ್ಕೆ ಸಮಾನ ವೇತನ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಗ್ರಾಮ ಪಂಚಾಯಿತಿ ನೀರಗಂಟಿಗಳ ಸಂಘದ ಪದಾಧಿಕಾರಿಗಳು ಶನಿವಾರ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ಇಒಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಶೇಖರಪ್ಪ ಮಾತನಾಡಿ, ಎಲೆಕ್ಟ್ರಾನಿಕ್ ಫಂಡ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗೆ ಸೇರಿಸದೇ ಉಳಿದಿರುವ 18 ಸಾವಿರ ನೌಕರರ ಮಾಹಿತಿಯನ್ನು ತಾಪಂ ಇಒ ಮತ್ತು ಪಿಡಿಒಗಳು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಜನ್ಮದಿನದ ದಾಖಲೆಗಳು ಇಲ್ಲದವರಿಗೆ ವೈದ್ಯಕೀಯ ಪ್ರಮಾಣಪತ್ರ ನೀಡಬೇಕು. ಎಸ್ಸೆಸ್ಸೆಲ್ಸಿ ಪಾಸಾದ ನೀರಗಂಟಿಗಳಿಗೆ ಕಾರ್ಯದರ್ಶಿ-2 ಹಾಗೂ ಕ್ಲರ್ಕ್ ಕಂ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಬಡ್ತಿ ನೀಡಬೇಕು. ಆರೋಗ್ಯ ಕಾರ್ಡ್ ನೀಡಬೇಕು.

ಗ್ರಾಪಂ ನೌಕರರ ಸೇವಾ ನಿಯಮಾವಳಿಗಳನ್ನು ಅಂತಿಮಗೊಳಿಸಬೇಕು. 1252 ಗ್ರೇಡ್-2 ಗ್ರಾಪಂಗಳನ್ನು ಗ್ರೇಡ್-1ಕ್ಕೆ ಮೇಲ್ದರ್ಜೆಗೇರಿಸಬೇಕು. ಭಾನುವಾರ ಕೆಲಸ ಮಾಡಿದರೆ ಹೆಚ್ಚುವರಿ ವೇತನ ನೀಡಬೇಕು. ಇಲ್ಲದಿದ್ದರೆ, ವಾರಕ್ಕೊಂದು ರಜೆ ನೀಡಬೇಕು. ವರ್ಷಕ್ಕೆ 20 ಗಳಿಕೆ ರಜೆ ಮಂಜೂರು ಮಾಡುವಂತೆ ಆಗ್ರಹಿಸಿದರು. ಎಲ್ಲಾ ಗ್ರಾಪಂ ನೀರಗಂಟಿಗಳು ಭಾಗವಹಿಸಿದ್ದರು.