ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ರಸ್ತೆಗಳಲ್ಲಿ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸುವ ನಿರ್ಧಾರ ವಿರೋಧಿಸಿ ಪರಿಸರವಾದಿಗಳು ಏ.6ರಂದು ಪಾದಯಾತ್ರೆ ನಡೆಸಲಿದ್ದಾರೆ.

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರ್ವೋಚ್ಚ ನ್ಯಾಯಾಲಯ ರಾತ್ರಿ ಸಂಚಾರವನ್ನು ನಿರ್ಬಂಧಿಸಿದ್ದರೂ ಪ್ರಸ್ತುತ ಕರ್ನಾಟಕ ಸರ್ಕಾರ ಕೇರಳ ರಾಜ್ಯದ ಮತ್ತು ಸ್ಥಳೀಯ ಕೆಲ ಮಾಫಿಯಾಗಳ ಹಿತಾಸಕ್ತಿಗೆ ಮಣಿದು ರಾಷ್ಟ್ರೀಯ ಹೆದ್ದಾರಿ 788ರಲ್ಲಿ ಸುಲ್ತಾನ್ ಬತ್ತೇರಿ ಕಡೆ ರಾತ್ರಿ ಸಂಚಾರಕ್ಕೆ ನಿರ್ಬಂಧ ತೆರವು ಮಾಡುವ ಪ್ರಯತ್ನದಲ್ಲಿರುವುದು ಸರಿಯಲ್ಲ ಎಂದು ಯುನೈಟೆಡ್ ಕನ್ಸರ್ವೇಷನ್ ಮೂವ್‌ಮೆಂಟ್‌ನ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂವಿಧಾನಬದ್ಧ ಪರಿಸರ ಸಂರಕ್ಷಣೆ ಹೊಣೆಗಾರಿಕೆಗೆ ಬದ್ಧವಾಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಿ, ಈ ಹಿಂದಿನಂತೆ ಯಥಾಸ್ಥಿತಿಯನ್ನು ಮುಂದುವರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಲು ಏ.6ರಂದು ಬೆಳಗ್ಗೆ 10ಕ್ಕೆ ಕಗ್ಗಳದಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿಂದ ಪರಿಸರ ಪ್ರೇಮಿಗಳು, ರೈತ ಸಂಘಟನೆ, ಕನ್ನಡ ಪರ ಮತ್ತು ಇತತ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನಾ ಪಾದಯಾತ್ರೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಮದ್ದೂರು ಅರಣ್ಯ ತನಿಖಾ ಠಾಣೆ ಬಳಿ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರು ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.