ಮಲೆನಾಡಿನ ಸಮಸ್ಯೆಗೆ ಮನುಷ್ಯನೇ ಕಾರಣ

ಎನ್.ಆರ್.ಪುರ: ಮನುಷ್ಯನ ಅತಿ ದುರಾಸೆಯೇ ಮಲೆನಾಡಿನ ಪರಿಸರ ವಿನಾಶಕ್ಕೆ ಕಾರಣವಾಗಿದೆ ಎಂದು ಸಾಗರದ ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಮಲೆನಾಡು ಭಾಗದ ಅಭಿವೃದ್ಧಿ ಸಮಸ್ಯೆ, ಸವಾಲು ಹಾಗೂ ಭವಿಷ್ಯ’ ರಾಜ್ಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಒಂದು ಮಂಗಟ್ಟೆ ಹಕ್ಕಿ ತನ್ನ ಜೀವಿತಾವಧಿಯಲ್ಲಿ ಕನಿಷ್ಠ 20 ಸಾವಿರ ಸಸ್ಯಗಳನ್ನು ಬದುಕಿಸುತ್ತದೆ. ಇದೇ ರೀತಿ ಕಾಡು ಬೆಕ್ಕು, ಹಾರು ಬೆಕ್ಕು ಸಹ ಕಾಡನ್ನು ಬೆಳೆಸುತ್ತವೆ. ಆದರೆ ಮನುಷ್ಯ ಎಷ್ಟು ಗಿಡಗಳನ್ನು ಬೆಳೆಸುತ್ತಾನೆ? ಎಂಬುದನ್ನು ಯೋಚಿಸಬೇಕು ಎಂದರು.

ಮನುಷ್ಯನು ಒಂದು ಚುಚ್ಚುಮದ್ದು ತೆಗೆದುಕೊಳ್ಳಲು ಸಂಕಟಪಡುತ್ತಾನೆ. ಆದರೆ ಭೂಮಿಯಲ್ಲಿ ಸಾವಿರಾರು ಅಡಿಯ ಕೊಳವೆಬಾವಿ ಕೊರೆಸಿ ಭೂತಾಯಿಗೆ ನೋವುಂಟು ಮಾಡುತ್ತಾನೆ. ಇದನ್ನು ಮನುಷ್ಯ ಅರ್ಥ ಮಾಡಿಕೊಳ್ಳಬೇಕಿದೆ. ಮಲೆನಾಡಿನಲ್ಲಿ ಸಮಸ್ಯೆ ಸೃಷ್ಟಿಸಿದವರೇ ಮನುಷ್ಯರು. ಕೆಲ ಬಲಾಢ್ಯರಿಂದ ಬಗರ್​ಹುಕುಂ ಹೆಸರಲ್ಲಿ ಅರಣ್ಯ ನಾಶವಾಗುತ್ತಿದೆ. ಇಂಥವರಿಂದ ಸರ್ಕಾರ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯಕ್ಕೆ 28 ಮೆಗಾ ಯೋಜನೆಗಳು ಶೀಘ್ರವೇ ಬರಲಿವೆ ಎಂಬ ಮಾಹಿತಿಯಿದೆ. ಇದರಿಂದ 35 ಲಕ್ಷ ಮರಗಳು ನಾಶವಾಗಲಿವೆ. ಪರಿಸರ ಸಂರಕ್ಷಣೆಗೆ ಒಂದು ನಿದಿರ್ಷ್ಟ ಕಾನೂನು ಬರಬೇಕಿದೆ. ಕಾಡನ್ನು ರಕ್ಷಿಸುತ್ತಿರುವ ಕಾಡುಪ್ರಾಣಿಗಳ ಬಗ್ಗೆ ಅಧಿಕಾರದಲ್ಲಿ ಇರುವವರು ಗಮನಹರಿಸುತ್ತಿಲ್ಲ ಎಂದು ವಿಷಾದಿಸಿದರು.

ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಕೆ.ಉಮೇಶ್ ಮಾತನಾಡಿದರು. ಕಾಲೇಜಿನ ಕಚೇರಿ ಅಧಿಕ್ಷಕಿ ಬಿ.ಎಸ್.ಪಾರ್ವತಿ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಬಿ.ಕೆ.ಸೈಯದ್ ನಿಜಾಮುದ್ದೀನ್ ಇತರರಿದ್ದರು.