ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣದಿಂದ ನದಿಮೂಲ ನಾಶ

ಮೈಸೂರು: ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಉದ್ದೇಶಿತ ಮೇಲ್ಸೇತುವೆ ನಿರ್ಮಾಣದಿಂದ ಪಶ್ಚಿಮ ಘಟ್ಟದಲ್ಲಿ ಹರಿಯುವ ನದಿಗಳ ಸಂಪರ್ಕ ಕಡಿದು ಹೋಗಲಿದೆ ಎಂದು ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಎಚ್ಚರಿಸಿದರು.

ಹಾ.ಮಾ.ನಾ.ಪ್ರತಿಷ್ಠಾನ ಮತ್ತು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಮಾನಸಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ಭಾರತದ ಪ್ರಸ್ತುತ ಸಾಮಾಜಿಕ ಮತ್ತು ಪರಿಸರ ವಿದ್ಯಮಾನಗಳು’ ಕುರಿತು ಮಾತನಾಡಿದರು.

ಈ ಯೋಜನೆಯಿಂದ ಬಂಡೀಪುರದ ಜೀವವೈವಿಧ್ಯತೆ ಸಂಪೂರ್ಣ ಹಾಳಾಗಲಿದೆ. ಈ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಆ ಕಡೆಯಿಂದ ಉತ್ತರ ಬಂದಿಲ್ಲ. ಜತೆಗೆ, ಈ ಕುರಿತು ಸಂಸದರು, ಸಚಿವರು, ಶಾಸಕರನ್ನು ಸಾರ್ವಜನಿಕರು ಬಹಿರಂಗವಾಗಿ ಪ್ರಶ್ನೆ ಮಾಡಿ, ದುರಂತಕಾರಿ ಈ ಯೋಜನೆಯನ್ನು ತಡೆಯಲು ಮುಂದಾಗಬೇಕು ಎಂದರು.

ಗಂಗಾ-ಕಾವೇರಿ ನದಿಗಳ ಜೋಡಿ ಅಕ್ಷಮ್ಯ. ಇದರ ಹಿಂದೆ ಗುತ್ತಿಗೆದಾರರ ಲಾಭಿ ಕೆಲಸ ಮಾಡುತ್ತಿದೆ. ಈ ಕೆಲಸ ಸಾಧ್ಯವೇ ಇಲ್ಲ್ಲ. ಇದು ಅಭಿವೃದ್ಧಿಯೂ ಅಲ್ಲ. ನದಿ ತಾನಾಗಿ ತಾನೇ ಹರಿಯಬೇಕು. ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸವನ್ನು ಮೊದಲು ಮಾಡಬೇಕು. ಅದನ್ನು ಬಿಟ್ಟು ಪ್ರಕೃತಿಗೆ ವಿರುದ್ಧವಾದ ಕೆಲಸವನ್ನು ಕೈಬಿಡಬೇಕು ಎಂದರು.

ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಉಂಟಾಗಲಿದೆ ಎಂದು 34 ವರ್ಷಗಳ ಹಿಂದೆಯೇ ನಾನು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ತಜ್ಞರನ್ನು ಕಟ್ಟಿಕೊಂಡು ಮೂರು ತಿಂಗಳು ಕಾಲ ಈ ಜಿಲ್ಲೆಯಲ್ಲಿ ಸಮಗ್ರವಾಗಿ ಅಧ್ಯಯನ ಮಾಡಿ 1984ರಲ್ಲಿ ವರದಿ ನೀಡಿದ್ದೆ. ಆದರೆ, ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ. 7 ಇಂಚಿನ ಮಣ್ಣಿನ ಪದರು ನಿರ್ಮಾಣಕ್ಕೆ 700 ವರ್ಷಗಳು ಬೇಕು. ಆದರೆ, ಕೊಡಗಿನಲ್ಲಿ ಟನ್‌ಗಟ್ಟಲೇ ಮಣ್ಣು ಕೊಚ್ಚಿ ಹೋಗಿದೆ. ಕಾಡು ಹಾಳಾಗಿದೆ. ಇದು ಯಥಾಸ್ಥಿತಿಗೆ ಬರುವುದು ಅಸಾಧ್ಯ ಎಂದರು.

ರಾಜ್ಯದಲ್ಲಿ ಗಣಿಗಾರಿಕೆಗಾಗಿ 4 ಸಾವಿರ ಅರ್ಜಿಗಳು ಬಂದಿವೆ. ಇವುಗಳ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯ ಸದಸ್ಯನಾಗಿದ್ದೆ. ಗಣಿಗಾರಿಕೆಗೆ ಅವಕಾಶ ನೀಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಆಸಕ್ತಿ ಹೊಂದಿದ್ದರು. ಹೀಗಾಗಿ, ಆ ಸಮಿತಿಗೆ ರಾಜೀನಾಮೆ ಕೊಟ್ಟು ನಾನು ಹೊರಬಂದೆ. ರಾಜ್ಯದಲ್ಲಿರುವ ಶೇ.40ರಷ್ಟು ರಕ್ಷಿತಾರಣ್ಯ ಪ್ರದೇಶವನ್ನು ಕಾರ್ಪೋರೇಟ್ ಕಂಪನಿಗಳಿಗೆ ಗುತ್ತಿಗೆ ಕೊಡಲು ಚರ್ಚೆ ನಡೆದಿದೆ. ಇದು ಅರಣ್ಯ ನಾಶಕ್ಕೆ ದಾರಿ ಮಾಡಿಕೊಡಲಿದೆ ಎಂದು ಎಚ್ಚರಿಸಿದರು.

ಕಳೆ ನಾಶಕದಿಂದ ಶೇ.40ರಷ್ಟು ಕೃಷಿ ಮಹಿಳೆಯರು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇದು ಗೊತ್ತಿದ್ದರೂ ಸರ್ಕಾರಗಳು, ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಅವರ ರಕ್ಷಣೆ ಮಾಡುತ್ತಿಲ್ಲ. ಆದರೆ, ಅಮೆರಿಕಾದಲ್ಲಿ ಕಳೆ ನಾಶಕ ಬಳಕೆಯಿಂದ ಒಬ್ಬರಿಗೆ ಕ್ಯಾನ್ಸರ್ ಬಂದಿರುವುದು ದೃಢಪಟ್ಟಿತ್ತು. ಇದಕ್ಕೆ ಕಾರಣವಾದ ಕಂಪನಿಗೆ ದೊಡ್ಡ ಮೊತ್ತದ ದಂಡ ವಿಧಿಸಿ, ಅದನ್ನು ನಿಷೇಧಿಸಿದರು. ಅಂತಹ ನಿಷೇಧಕ್ಕೆ ಒಳಗಾಗಿರುವ ಕಳೆನಾಶಕವನ್ನು ಅಮೆರಿಕಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.

ಸಾಹಿತಿ ಎಸ್.ಎಲ್.ಭೈರಪ್ಪ, ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ಪಿ.ವೆಂಕಟರಾಮಯ್ಯ, ಕೋಶಾಧ್ಯಕ್ಷ ಡಾ.ಕೆ.ಮಹದೇವ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ಎನ್.ತಳವಾರ ಪಾಲ್ಗೊಂಡಿದ್ದರು.