ಪರಿಸರ ಅಪಾಯ ತಡೆಗೆ ಕಾಂಡ್ಲಾವನ ಕೇಂದ್ರ

ಹರೀಶ್ ಮೋಟುಕಾನ ಮಂಗಳೂರು

ಜಲಚರಗಳ ಸಂತಾನೋತ್ಪತ್ತಿಗೆ ಮಹತ್ವದ ಜಾಗ, ಕಡಲ್ಕೊರೆತ ತಡೆ ಸೇರಿದಂತೆ ಪರಿಸರ ಸಂಬಂಧಿತ ಅಪಾಯಗಳಿಗೆ ತಡೆಗೋಡೆಯಾಗಿರುವ ಕಾಂಡ್ಲಾವನ ಸಂರಕ್ಷಣೆಗೆ ಕರಾವಳಿಯಲ್ಲಿ ‘ಕಾಂಡ್ಲಾವನ ಕೇಂದ್ರ’ ಆರಂಭಗೊಳ್ಳಲಿದೆ. 310 ಕೋಟಿ ರೂ. ವೆಚ್ಚದ ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ ಅಡಿಯಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ.

ಸಮುದ್ರ ಹಾಗೂ ನದಿ ಮಧ್ಯದ ಮುಖಜ ಭೂಮಿಯ ಉಪ್ಪು ಹಾಗೂ ಸಿಹಿ ನೀರಿನ ಸಂಗಮದ ಕೆಸರಿನ ನಡುವೆ ವಿಸ್ತಾರವಾಗಿ ಹರಡಿಕೊಂಡಿರುವ ಸಸ್ಯರಾಶಿಯ ಸಮೂಹವೇ ಕಾಂಡ್ಲಾವನ. ನದಿಯು ಸಮುದ್ರ ಸೇರುವ ಸುಮಾರು 6ರಿಂದ 8 ಕಿ.ಮೀ. ವ್ಯಾಪ್ತಿಯಲ್ಲಿ ಇದು ಹರಡಿರುತ್ತದೆ. ಪರಿಸರ ಸಮತೋಲನದ ನಿಟ್ಟಿನಲ್ಲಿ ಕಾಂಡ್ಲಾವನಗಳ ಪಾತ್ರ ಅಮೂಲ್ಯ.

ಅಘನಾಶಿನಿ, ಕಾಳಿ, ಶರಾವತಿ, ಕುಂದಾಪುರ, ಬೈಂದೂರು, ಬೈಕಂಪಾಡಿ ಸೇರಿದಂತೆ ಕರಾವಳಿಯ ಸುಮಾರು 7000 ಹೆಕ್ಟೇರ್ ವ್ಯಾಪ್ತಿಯಲ್ಲಿ ಕಾಂಡ್ಲಾವನಗಳಿವೆ. 15 ಪಿಪಿಟಿಯಿಂದ 30 ಪಿಪಿಟಿವರೆಗೆ ಲವಣಾಂಶ ಇರುವಲ್ಲಿ ಮಾತ್ರ ಕಾಂಡ್ಲಾವನ ಬೆಳೆಯುತ್ತದೆ. ಆದರೆ ನೀರು ಮಲಿನಗೊಂಡು ಕಾಂಡ್ಲಾಗಳಿಗೂ ಅಪಾಯ ಎದುರಾಗಿದೆ. ಹೀಗಾಗಿ ಇವುಗಳ ರಕ್ಷಣೆಗೆ ‘ಕಾಂಡ್ಲಾವನ ಕೇಂದ್ರ’ ನಿರ್ಮಾಣವಾಗಲಿದೆ.
ಡಾಲ್ಫಿನ್, ಕಡಲಾಮೆ ಸೇರಿದಂತೆ ಜಲಸಂಪತ್ತು ಸಾಯುತ್ತಿದ್ದು, ಕಡಲ ಬದಿಯಲ್ಲಿ ಮರಣ ಮೃದಂಗ ಬಾರಿಸುವಂತಿದೆ. ಇದಕ್ಕೆ ನಿಜಕ್ಕೂ ಕಾರಣವೇನು? ಇಂತಹ ಆಪತ್ತು ಮುಂದೆ ಎದುರಾಗಬಾರದು ಎಂದು ಹೊಸ ಯೋಜನೆಯಲ್ಲಿ ಅಧ್ಯಯನ ಹಾಗೂ ಅನುಷ್ಠಾನಕ್ಕೆ ಉದ್ದೇಶಿಸಲಾಗಿದೆ. ಕಾಂಡ್ಲಾವನ, ನೆಡುತೋಪುಗಳನ್ನು ಬೆಳೆಯುವ ಮೂಲಕ ಪರಿಸರ ರಕ್ಷಣೆ ಈ ಕೇಂದ್ರದ ಉದ್ದೇಶ.

ಏನಿದು ನಿರ್ವಹಣಾ ಯೋಜನೆ?
ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರ ವ್ಯಾಪ್ತಿ ಸಮಗ್ರ ಅಭಿವೃದ್ಧಿಯ 310 ಕೋಟಿ ರೂ.ಗಳ ‘ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ’ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಯೋಜನಾ ವರದಿ ಸಿದ್ಧವಾಗಿ ಶೀಘ್ರ ಕಾಮಗಾರಿ ಆರಂಭ ನಿರೀಕ್ಷೆಯಿದೆ. 4 ವರ್ಷದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ಕರಾವಳಿ ತೀರ ಪ್ರದೇಶದಲ್ಲಿ ಕಾಂಡ್ಲಾವನ ಅಭಿವೃದ್ಧಿ, ಕೈಗಾರಿಕೆಗಳಿಂದ ನದಿ-ಕಡಲಿಗೆ ಎದುರಾಗಿರುವ ಮಾಲಿನ್ಯ ತಡೆಗಟ್ಟುವುದು, ಮೀನುಗಾರರು-ಕಡಲ ತೀರ ಜನರ ಜೀವನ ಮಟ್ಟ ಸುಧಾರಣೆ ಹಾಗೂ ಈ ಕುರಿತಂತೆ ತರಬೇತಿ ಕೇಂದ್ರ ರಚನೆಯ ಉದ್ದೇಶದಿಂದ ಸಮಗ್ರ ಕರಾವಳಿ ವಲಯ ನಿರ್ವಹಣೆ ಯೋಜನೆ ಅನುಷ್ಠಾನಿಸಲಾಗುತ್ತದೆ. ಈ ಯೋಜನೆಗೆ ಶೇ.50 ಮೊತ್ತವನ್ನು ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ನೀಡಲಿದೆ. ಶೇ.30 ಕೇಂದ್ರ ಸರ್ಕಾರ ಹಾಗೂ ಶೇ.20 ರಾಜ್ಯ ಸರ್ಕಾರ ಹಣ ನೀಡಲಿದೆ.
ಗುಜರಾತ್, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಯನ್ನು 2010ರಲ್ಲಿ ಆರಂಭಿಸಿ 2018ರಲ್ಲಿ ಪೂರ್ಣಗೊಳಿಸಲಾಗಿತ್ತು. ಎರಡನೇ ಹಂತದಲ್ಲಿ ಕರ್ನಾಟಕ, ಕೇರಳ ಸೇರಿದಂತೆ 9 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಈ ಪೈಕಿ ಕರ್ನಾಟಕದಲ್ಲಿ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ.

ಮಂಗಳೂರಿನಲ್ಲಿ ಕೇಂದ್ರ ಕಚೇರಿ
ರಾಜ್ಯದಲ್ಲಿ ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ ನಿರ್ವಹಣೆಗಾಗಿ ಪ್ರತ್ಯೇಕ ಕಚೇರಿ ಮಂಗಳೂರಿನಲ್ಲಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಉರ್ವಸ್ಟೋರ್‌ನ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಟ್ಟಡದಲ್ಲಿ ಕಚೇರಿ ಆರಂಭಿಸುವ ಸಾಧ್ಯತೆಯಿದೆ. ರಾಜ್ಯ ಪರಿಸರ ಹಾಗೂ ಜೀವಿಶಾಸ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಮೀನುಗಾರಿಕಾ ಇಲಾಖೆ, ಬಂದರು, ಅರಣ್ಯ, ಲೋಕೋಪಯೋಗಿ, ಪರಿಸರ, ಕೆಐಎಡಿಬಿ, ಸಂಶೋಧನಾ ಸಂಸ್ಥೆಗಳು, ತಜ್ಞರ ಒಳಗೊಳ್ಳುವಿಕೆಯ ಮೂಲಕ ಕಚೇರಿ ಕಾರ್ಯನಿರ್ವಹಿಸಲಿದೆ ಎಂದು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ ಒಟ್ಟು 310 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಅನುಷ್ಠಾನಗಳೊಳ್ಳಲಿದೆ. ವಿಶ್ವಬ್ಯಾಂಕ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಈ ಯೋಜನೆ ಜಾರಿಗೊಳ್ಳಲಿದ್ದು, ಕರಾವಳಿ ತೀರ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ.
– ಡಾ.ವೈ.ಕೆ.ದಿನೇಶ್ ಕುಮಾರ್, ಪರಿಸರ ಇಲಾಖೆ ಪ್ರಾದೇಶಿಕ ನಿರ್ದೇಶಕ, ಮಂಗಳೂರು

Leave a Reply

Your email address will not be published. Required fields are marked *