ವಿರಾಜಪೇಟೆ : ಕೊಡಗು ಪರಿಸರ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಆರ್ಜಿ-ಬೇಟೋಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪೆರಂಬಾಡಿ ಚೆಕ್‌ಪೋಸ್ಟ್‌ನಿಂದ ಕೇರಳ ಗಡಿಯ ಮಾಕುಟ್ಟದವರೆಗೆ ಪರಿಸರ ಸಂರಕ್ಷಣಾ ಜಾಥಾ ಹಾಗೂ ಸ್ವಚ್ಛತಾ ಕಾರ್ಯಕ್ರಮ ಬುಧವಾರ ನಡೆಯಿತು.
ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯರೂ ಹಿರಿಯ ಸಮಾಜ ಸೇವಕ ಮೇರಿಯಂಡ ಕೆ.ಸಂಕೇತ್ ಪೂವಯ್ಯ ಜಾಥಾಕ್ಕೆ ಚಾಲನೆ ನೀಡಿದರು. ಪರಿಸರ ಸಂರಕ್ಷಣೆ ಪ್ರತಿ ಪ್ರಜೆಯ ಕರ್ತವ್ಯ. ಪ್ರಕೃತಿ ನಮಗೆ ಬಹಳಷ್ಟು ನೀಡಿರುವಾಗ ಅದರ ಅರಿವು ಇಲ್ಲದೆ ನಾವು ಪರಿಸರವನ್ನು ನಾಶಗೊಳಿಸುತ್ತಿದ್ದೇವೆ. ಈ ಬಗ್ಗೆ ಸ್ವಯಂಸೇವಾ ಸಂಸ್ಥೆಗಳ ಜಾಗೃತಿ ಕಾರ್ಯಗಳು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಲಿಟಲ್ ಸ್ಕಾರ್ಸ್ ಅಕಾಡೆಮಿ ಪೂಜಾ ಸಜೇಶ್, ಬೆಂಗಳೂರಿನ ಸಹಾಯಕ ಪೊಲೀಸ್ ಆಯುಕ್ತ ಸುಬ್ರಹ್ಮಣಿ, ಮಾದಂಡ ತಿಮ್ಮಯ್ಯ, ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ, ಅಭಿವೃದ್ಧಿ ಅಧಿಕಾರಿ ಪ್ರಮೋದ್, ಉಪಾಧ್ಯಕ್ಷ ಬೋಪಣ್ಣ, ಸದಸ್ಯರಾದ ಉಪೇಂದ್ರ, ಮಣಿ, ಅರಣ್ಯ ಅಧಿಕಾರಿ ಅರುಣ್, ಪರಿಸರ ರಕ್ಷಣಾ ಹೋರಾಟ ಸಮಿತಿಯ ಕಾರ್ಯದರ್ಶಿ ಸುನಿತಾ, ಕೋಶಾಧಿಕಾರಿ ವಿನೂಪ್ ಕುಮಾರ್ ಹಾಜರಿದ್ದರು. ಸಮಿತಿಯ ಸಂಚಾಲಕ ಶಶಿ ಅಚ್ಚಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜನ್ ಇದ್ದರು.
ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾವೇರಿ ಕಾಲೇಜು, ಸರ್ವೋದಯ ಶಿಕ್ಷಕರ ತರಬೇತಿ ಸಂಸ್ಥೆ, ಪ್ರಗತಿ ಶಾಲೆ, ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸೇರಿದಂತೆ 400ಕ್ಕೂ ಹೆಚ್ಚು ಸ್ವಯಂ ಸೇವಕರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಸ್ವಯಂಸೇವಕರು 21 ಕಿ.ಮೀ.ಹಾದಿಯುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿ, ಮದ್ಯದ ಬಾಟಲಿ, ತಂಬಾಕು, ಕವರ್, ಸಿಗರೇಟ್ ಪ್ಯಾಕ್, ತಿಂಡಿ ತಿನಿಸುಗಳ ಕವರ್‌ಗಳನ್ನು ಸಂಗ್ರಹಿಸಿದರು. ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ 3ನೇ ಪರಿಸರ ಜಾಗೃತಿ ಕಾರ್ಯ ಇದಾಗಿದ್ದು, ಜಿಲ್ಲೆಯಲ್ಲಿಯೇ ಬೃಹತ್ ಪರಿಸರ ಜಾಥಾ ಎನಿಸಿಕೊಂಡಿದೆ.
