ಪರಿಸರ ಸಂರಕ್ಷಣೆ ಸರ್ಕಾರದ ಹೊಣೆ ಮಾತ್ರವಲ್ಲ

ಹಾಸನ: ಪರಿಸರ ಸಂರಕ್ಷಣೆ ಸರ್ಕಾರದ ಹೊಣೆ ಎಂಬ ಮನಸ್ಥಿತಿಯಿಂದ ಹೊರಬಂದು, ಸಮಾನ ಮನಸ್ಕರು ಜವಾಬ್ದಾರಿ ನಿರ್ವಹಿಸಿದರೆ ಅದರ ಪ್ರಯೋಜನವನ್ನು ಭವಿಷ್ಯದಲ್ಲಿ ಕಾಣಬಹುದು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಆರ್‌ಟಿಐ ಕಾರ್ಯಕರ್ತ ಎಸ್.ಆರ್.ಹಿರೇಮಠ ಅಭಿಪ್ರಾಯಪಟ್ಟರು.

ಹಸಿರುಭೂಮಿ ಪ್ರತಿಷ್ಠಾನದಿಂದ ಕೈಗೊಂಡಿರುವ ಜಲಸಂರಕ್ಷಣೆ ಕಾರ್ಯಕ್ರಮವನ್ನು ಭಾನುವಾರ ವೀಕ್ಷಿಸಿ ಮಾತನಾಡಿದರು. ತಾಲೂಕಿನ ದೊಡ್ಡಕೊಂಡಗೊಳ, ಜವೇನಹಳ್ಳಿ, ಸತ್ಯಮಂಗಲ ಹಾಗೂ ಬಿ.ಕಾಟೀಹಳ್ಳಿ ಕೆರೆಯಲ್ಲಿ ಕೈಗೊಂಡಿರುವ ಕಾಮಗಾರಿ ಪರಿಶೀಲಿಸಿ ಪ್ರತಿಷ್ಠಾನದ ಪದಾಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.

1982ರಲ್ಲಿ ದೇಶದ 150 ಜನರು ಸೇರಿ ಪರಿಸರ ಸಂರಕ್ಷಣೆಗೆ ಯೋಜನೆ ರೂಪಿಸಿದರು. ಸಾಹಿತಿ ಶಿವರಾಮ ಕಾರಂತರು ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು. ಆದರೆ ಪ್ರಸ್ತುತ ಪರಿಸರಕ್ಕಾಗಿ ಹೋರಾಡುತ್ತಿರುವವರ ಪ್ರಮಾಣ ತೀರ ಕಡಿಮೆ ಎಂದರು.

ಸಮಾಜ ಪರಿವರ್ತನ ಸಂಸ್ಥೆ ಮೂಲಕ ಧಾರವಾಡ, ಗದಗ ಹಾಗೂ ಹಾವೇರಿ ಭಾಗದಲ್ಲಿ ಅನೇಕ ಕೆಲಸ ಮಾಡಿದ್ದೇವೆ. ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಮುಖ್ಯವಾಗಿರುತ್ತದೆ. ಸಾತ್ವಿಕ ಶಕ್ತಿಗಳು ಒಂದುಗೂಡಿದಾಗ ಮಾತ್ರ ಒಳ್ಳೆಯ ಕೆಲಸಗಳು ಯಶಸ್ಸು ಕಾಣುತ್ತವೆ ಎಂದು ಹೇಳಿದರು.

ಸಮಾಜ, ಸಂಸ್ಕೃತಿ ಹಾಗೂ ಪ್ರಕೃತಿ ನಡುವೆ ಸಾಮರಸ್ಯ ಏರ್ಪಡಬೇಕು. ಪೂರ್ವಕಾಲದಲ್ಲಿ ಸುತ್ತಲಿನ ಪರಿಸರವನ್ನು ಸ್ಥಳೀಯ ನಿವಾಸಿಗಳೇ ರಕ್ಷಿಸಿಕೊಳ್ಳುತ್ತಿದ್ದರು. ಆದರೆ 1864ರಲ್ಲಿ ಅರಣ್ಯ ಇಲಾಖೆ ಜಾರಿಗೆ ಬಂದು ಜನರ ಸ್ವಾತಂತ್ರೃವನ್ನು ಕಿತ್ತುಕೊಂಡಿತು. 1894 ರಲ್ಲಿ ಜಾರಿಗೊಳಿಸಲಾದ ಅರಣ್ಯ ಕಾಯ್ದೆಯಿಂದ ಸಾಕಷ್ಟು ದುಷ್ಪರಿಣಾಮ ಉಂಟಾಯಿತು. ಸರ್ಕಾರವೇ ಎಲ್ಲ ಸಂಪತ್ತನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಹೀಗಾಗಿ ಜಲಸಂರಕ್ಷಣೆ ಸಾಧ್ಯವಾಗಲಿಲ್ಲ ಎಂದು ವಿಶ್ಲೇಷಿಸಿದರು.

ಹಸಿರುಭೂಮಿ ಪ್ರತಿಷ್ಠಾನ ಅಧ್ಯಕ್ಷ ಸುಬ್ಬಸ್ವಾಮಿ, ಗೌರವಾಧ್ಯಕ್ಷ ಆರ್.ಪಿ.ವೆಂಕಟೇಶಮೂರ್ತಿ, ಖಜಾಂಚಿ ಡಾ. ಮಂಜುನಾಥ್, ಟ್ರಸ್ಟಿ ಮಂಜುನಾಥ್ ಶರ್ಮ, ಜವೇನಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ್, ಖಜಾಂಚಿ ಭರತ್ ಭೂಷಣ್, ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ, ಸಾಮಾಜಿಕ ಕಾರ್ಯಕರ್ತ ಪುಟ್ಟಯ್ಯ, ಶಿಕ್ಷಕ ಬಿ.ಎಸ್. ದೇಸಾಯಿ ಇದ್ದರು.

Leave a Reply

Your email address will not be published. Required fields are marked *