ಹರಿಹರ: ನೀರು, ಪರಿಸರವನ್ನು ಕಲುಷಿತ ಮಾಡದೆ ಶುದ್ಧವಾಗಿ ಉಳಿಸುವುದೇ ನಮ್ಮ ಮುಂದಿನ ಪೀಳಿಗೆಯ ನಿಜವಾದ ಆಸ್ತಿ ಎಂದು ಶಿವಮೊಗ್ಗದ ಪರ್ಯಾವರಣ ಟ್ರಸ್ಟ್‌ನ ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.
ನಗರದ ಖೋಡೆ ಸಿ.ವೆಂಕೂಸಾ ಐಟಿಐ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಆಶ್ರಯದಲ್ಲಿ ಶೃಂಗೇರಿಯಿಂದ ವಿಜಯನಗರ ಜಿಲ್ಲೆ ಕಿಷ್ಕಿಂಧೆವರೆಗಿನ ನಿರ್ಮಲ ತುಂಗಭದ್ರಾ ಅಭಿಯಾನದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ನಾವೆಲ್ಲ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಮಾಡುವತ್ತ ಚಿತ್ತ ಹರಿಸಿ ನಮ್ಮ ನದಿ, ಪರಿಸರದ ಉಳಿವಿಗೆ ಗಮನ ಹರಿಸದಿದ್ದರೆ ನಮ್ಮ ಮಕ್ಕಳು ಸೇವಿಸುವ ಗಾಳಿ, ಕುಡಿಯುವ ನೀರು ಕಲುಷಿತವಾಗುತ್ತದೆ. ಆರೋಗ್ಯಯುತ ಬದುಕು ನಡೆಸಲಾಗದಿದ್ದರೆ ಹಣ, ಆಸ್ತಿಯಿಂದ ಪ್ರಯೋಜನವಿಲ್ಲ ಎಂದರು.
ಈ ನದಿ ಉದ್ದಕ್ಕೂ ಇರುವ ನಗರ, ಪಟ್ಟಣಗಳ ಒಳಚರಂಡಿಗಳ ನೀರನ್ನು ಶುದ್ಧೀಕರಿಸಿ ನದಿಗೆ ಬಿಡಬೇಕು. ನೇರವಾಗಿ ನದಿಗೆ ಸೇರಿದರೆ ನೀರು ಕಲುಷಿತಗೊಳ್ಳುವ ಜತೆಗೆ ಜಲಚರ ಪ್ರಾಣಿಗಳ ಅಂತ್ಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನದಿ ಕುರಿತು ಜನ ಹಾಗೂ ಸರ್ಕಾರಕ್ಕೆ ಜಾಗೃತಿ ಮೂಡಿಸಲು ತುಂಗಭದ್ರಾ ನದಿಗಳ ಉಗಮ ಸ್ಥಳವಾದ ಶೃಂಗೇರಿಯಿಂದ ವಿಜಯನಗರ ಜಿಲ್ಲೆಯ ಕಿಷ್ಕಿಂಧೆವರೆಗೆ ನವೆಂಬರ್ ತಿಂಗಳಲ್ಲಿ 400 ಕಿ.ಮೀ.ವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ. ಈ ಭಾಗದ ರೈತರು, ವಿದ್ಯಾರ್ಥಿಗಳು ಸೇರಿದಂತೆ ಈ ನದಿ ನೀರು ಕುಡಿಯುವ ಪ್ರತಿಯೊಬ್ಬರೂ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಪಕ್ಷಾತೀತ, ಧರ್ಮಾತೀತವಾಗಿರುವ ನದಿ ಉಳಿಸುವ ಈ ಹೋರಾಟಕ್ಕೆ ಎಲ್ಲ ಅಗತ್ಯ ಬೆಂಬಲ ನೀಡುತ್ತೇವೆ. ತಾಲೂಕಿನ ನದಿಪಾತ್ರದ ಗ್ರಾಮಗಳ ವಾಸಿಗಳು ಈ ಅಭಿಯಾನದಲ್ಲಿ ಸೇರಿಕೊಳ್ಳಬೇಕು ಎಂದು ಮನವಿ ಮಾಡಿದರು.