ಸಿಮೆಂಟ್ ಕಟ್ಟಡದಿಂದ ಹೆಚ್ಚಾಗುತ್ತಿದೆ ಉಷ್ಣತೆ

ಚಿಕ್ಕಮಗಳೂರು: ಕೃಷಿ ಜಮೀನುಗಳನ್ನು ಪರಿವರ್ತಿಸಿ ಸಿಮೆಂಟ್ ಕಟ್ಟಡಗಳನ್ನು ನಿರ್ವಿುಸುತ್ತಿರುವುದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ ಎಂದು ಕಾರ್ವಿುಕ ನ್ಯಾಯಾಲಯದ ನ್ಯಾಯಾಧಿಶ ಎ.ಎಸ್.ಸದಲಗೆ ವಿಶ್ಲೇಷಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಾರ್ತಾ ಇಲಾಖೆ, ಜಿಲ್ಲಾ ವಕೀಲರ ಸಂಘ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ‘ವಿಶ್ವ ಭೂ ದಿನ ಹಾಗೂ ಕಾನೂನು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ನಾಶ, ಭೂಮಿಯ ಮೇಲಿನ ಒತ್ತಡದಿಂದ ಅತಿವೃಷ್ಟಿ, ಅನಾವೃಷ್ಟಿ ಸಂಭವಿಸುತ್ತಿವೆ. ಅರಣ್ಯ ನಾಶ, ಗಣಿಗಾರಿಕೆ, ಕೈಗಾರಿಕೆಗಳು, ವಾಹನಗಳ ಸಂಖ್ಯೆ ಹೆಚ್ಚಳದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ಹಾಗಾಗಿ ಪರಿಸರ ಸಮತೋಲನ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.

ಪ್ರತಿಯೊಬ್ಬರಿಗೂ ಕಾನೂನು ಜಾಗೃತಿ ಮೂಡಿಸುವುದು, ನೆರವು ನೀಡುವುದು, ರಾಜಿ ಸಂಧಾನ ಮಾಡಿಸುವ ನಿಮಿತ್ತ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ರಚನೆಯಾಗಿದೆ. ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎನ್.ಹೆಗಡೆ ಮಾತನಾಡಿ, 1970ರ ಏ.22ರಂದು ವಿಶ್ವ ಭೂ ದಿನಾಚರಣೆ ಜಾರಿಗೆ ಬಂದಿತು. ಪ್ರಪಂಚದ 193 ದೇಶಗಳು ಪ್ರತೀ ವರ್ಷ ವಿಶ್ವ ಭೂ ದಿನ ಆಚರಿಸುತ್ತವೆ. ಆದರೂ ಪರಿಸರ ಮಾಲಿನ್ಯ ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು.

ಕೆಲ ಪ್ರಜ್ಞಾವಂತ ದೇಶಗಳಲ್ಲಿ ಜನರು ಹೆಚ್ಚಾಗಿ ಸೈಕಲ್ ಉಪಯೋಗಿಸುತ್ತಾರೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ದ್ವಿಚಕ್ರ, ನಾಲ್ಕು ಚಕ್ರದ ವಾಹನ ಬಳಕೆ ಮಾಡಬೇಕು. ಎಲ್ಲರೂ ಅದನ್ನು ಅರ್ಥ ಮಾಡಿಕೊಳ್ಳಬೇಕು. ಮನೆಯ ಸುತ್ತ ಖಾಲಿ ಜಾಗ ಇದ್ದರೆ ಸಸಿ ನೆಡಬೇಕು. ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕಾರ್ವಿುಕ ನ್ಯಾಯಾಲಯದ ನ್ಯಾಯಾಧಿಶ ಎ.ಎಸ್.ಸದಲಗೆ ಹೇಳಿದರು.

Leave a Reply

Your email address will not be published. Required fields are marked *