ಪರಿಸರ ಜಾಗೃತಿಗೆ 3 ದೇಶ ಸುತ್ತಿದ ಬಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ

ಉಡುಪಿ: ಈ ಬಾರಿ ಬೇಸಿಗೆಯಲ್ಲಿ ಕರಾವಳಿ ಜನ ನೀರಿಗೆ ಪರದಾಡಿದ್ದರು. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಜನಾಂಗದ ಬದುಕು ದುಸ್ತರವಾಗಲಿದೆ ಎಂಬುದನ್ನು ಮನಗಂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ನಿತ್ಯಾನಂದ ಅಡಿಗ ದೇಶಾದ್ಯಂತ 10,500 ಕಿ.ಮೀ.ದೂರದ ಬೈಕ್ ಯಾತ್ರೆ ಮೂಲಕ ಜಾಗೃತಿ ಮೂಡಿಸಿದ್ದಾರೆ.

30ರ ಹರೆಯದ ಎಂಬಿಎ ಪದವೀಧರ ಅಡಿಗ ಅಧ್ಯಾತ್ಮ ಮತ್ತು ಪ್ರಕೃತಿ ಸ್ನೇಹಿ. ಮೇ 29ರಂದು ಕೊಲ್ಲೂರಿನಿಂದ ಆರಂಭಗೊಂಡಿದ್ದ ಅವರ ಯಾತ್ರೆ ಜೂನ್ 16ಕ್ಕೆ ಮುಕ್ತಾಯವಾಗಿದೆ. 18 ದಿನಗಳ ಯಾತ್ರೆಯಲ್ಲಿ ಭಾರತ, ನೇಪಾಳ, ಭೂತಾನ್ ಸುತ್ತಿದ್ದಾರೆ. ಬಾಂಗ್ಲಾದೇಶದ ಗಡಿವರೆಗೆ ತೆರಳಿ ಪರಿಸರ ಪ್ರೇಮ ಮೆರೆದಿದ್ದಾರೆ. ಏಕಾಂಗಿಯಾಗಿ ಇಷ್ಟು ದೂರವನ್ನು ಕಡಿಮೆ ಅವಧಿಯಲ್ಲಿ ಕ್ರಮಿಸಿದ್ದು ಕೂಡ ದಾಖಲೆ.

ಯಾತ್ರೆಗಾಗಿಯೇ ಹಾರ್ಲೆ ಡೇವಿಡ್‌ಸನ್ ಬೈಕ್ ಖರೀದಿ
ಯಾತ್ರೆಗಾಗಿ ಖರೀದಿಸಿದ ಹಾರ್ಲೆ ಡೇವಿಡ್‌ಸನ್ ಬೈಕ್ ನೋಡಲು ಯಾತ್ರೆಯ ಹಾದಿಯುದ್ದಕ್ಕೂ ಯುವಕರು ಗುಂಪುಗುಂಪಾಗಿ ಬರುತ್ತಿದ್ದರು. ಈ ಅವಕಾಶ ಬಳಸಿಕೊಂಡು ಯಾತ್ರೆಯ ಉದ್ದೇಶ ಹಾಗೂ ಪರಿಸರ ಸಂರಕ್ಷಣೆ ಅಗತ್ಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೆ ಎನ್ನುತ್ತಾರೆ ಅಡಿಗರು. ಅಂತರ್ಜಲ ಕುಸಿತ ಆತಂಕಕಾರಿ ವಿಚಾರ. ಹಿಂದೆ ಬೇಸಿಗೆಯಲ್ಲೂ ತೋಡುಗಳಲ್ಲಿ ನೀರು ಇರುತ್ತಿತ್ತು. ಆದರೆ ಈಗ ಮಳೆಗಾಲದಲ್ಲೂ ನೀರಿಲ್ಲ. ಕೃಷಿಯಿಂದ ಯುವಕರು ವಿಮುಖರಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಬೇಸಾಯದ ಮೂಲಕ ಗದ್ದೆಗಳಲ್ಲಿ ಹಿರಿಯರು ನೀರಿಂಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತ ಕೃಷಿಯಿಂದ ಯುವಕರು ದೂರಾಗಿದ್ದಾರೆ. ಭೂಮಿಗೆ ನೀರಿಂಗುತ್ತಿಲ್ಲ. ಭವಿಷ್ಯದ ದೃಷ್ಟಿಯಿಂದ ಪರಿಸರ ಕಾಪಾಡಬೇಕು. ಇದಕ್ಕಾಗಿ ಯುವಕರಿಗೆ ಅರಿವು ಮೂಡಿಸುವುದು ಯಾತ್ರೆ ಉದ್ದೇಶ ಎಂದವರು ತಿಳಿಸಿದರು.

ಮಧ್ಯಪ್ರದೇಶದ ಸುಡು ಬಿಸಿಲು ಕಂಗೆಡಿಸಿತ್ತು. ಕೆಲವು ಕಡೆ ಸಸ್ಯಾಹಾರಿ ಊಟ ಸಿಗದೆ ಹಣ್ಣುಗಳನ್ನೇ ತಿನ್ನಬೇಕಾದ ಪರಿಸ್ಥಿತಿ ಎದುರಾಗಿತ್ತು. ಕೆಲವೊಮ್ಮೆ ರಾತ್ರಿ 12 ಗಂಟೆ ಪ್ರಯಾಣಿಸಿದರೂ ಲಾಡ್ಜ್‌ಗಳಲ್ಲಿ ತಂಗಲು ನಗರಗಳೇ ಸಿಗುತ್ತಿರಲಿಲ್ಲ. ನೇಪಾಳದಲ್ಲಿ ಗಂಟೆಗೊಮ್ಮೆ ವಾತಾವರಣ ಬದಲಾಗುತ್ತದೆ. ಒಮ್ಮೆ ಜೋರು ಮಳೆಯಾದರೆ, ಕೆಲ ಹೊತ್ತಿನಲ್ಲೇ ವಿಪರೀತ ಬಿಸಿಲು, ಮತ್ತೆ ಚಳಿ.ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ. ಸಿಲಿಗುರಿಯಿಂದ ಕೋಲ್ಕತ್ತ ನಡುವಿನ ದುರ್ಗಮ ಕಚ್ಚಾ ರಸ್ತೆಯಲ್ಲಿ 600 ಕಿ.ಮೀ ಬೈಕ್ ಚಲಾಯಿಸಿದ್ದು ಮರೆಯಲಾಗದ ಅನುಭವ.
– ನಿತ್ಯಾನಂದ ಅಡಿಗ ಅರ್ಚಕ, ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು

Leave a Reply

Your email address will not be published. Required fields are marked *