ಅಣೆಕಟ್ಟು ನಿರ್ಮಾಣ ಕಾರ್ಮಿಕರಿಂದ ಪರಿಸರ ನಾಶ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್

ಸ್ವಚ್ಛತೆ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಲು ದೊಡ್ಡ ಆಂದೋಲನ ನಡೆಯುತ್ತಿದೆ. ಆದರೆ, ಸಚ್ಚೇರಿಪೇಟೆ ನಲ್ಲೆಗುತ್ತು ಪರಿಸರದಲ್ಲಿ ಅಣೆಕಟ್ಟು ಕಾಮಗಾರಿನಿರ್ವಹಿಸುತ್ತಿರುವ ಕಾರ್ಮಿಕರು ಮನ ಬಂದಂತೆ ಸಿಮೆಂಟ್ ಚೀಲಗಳನ್ನು ಎಸೆದು ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

ಸಚ್ಚೇರಿಪೇಟೆ ನಲ್ಲೆಗುತ್ತು ಸೇತುವೆ ಸಹಿತ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದ್ದು, ಈ ಕಾಮಗಾರಿಗೆ ಬಳಸಿದ ನೂರಾರು ಪ್ಲಾಸ್ಟಿಕ್ ಗೋಣಿಚೀಲಗಳನ್ನು ನದಿ, ರಸ್ತೆ ಹಾಗೂ ಇನ್ನಿತರೆಡೆ ಮನ ಬಂದಂತೆ ಎಸೆಯಲಾಗಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಎಚ್ಚರಿಸಿದ್ದರೂ ಕಾರ್ಮಿಕರು ಕ್ಯಾರೇ ಎನ್ನದೆ ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ ಎಂದು ಈ ಭಾಗದ ಕೃಷಿಕರು ಆರೋಪಿಸಿದ್ದಾರೆ.

ಈಗ ಮಳೆಗಾಲ ಆರಂಭವಾಗಿದ್ದು, ಮಳೆ ನೀರಿನ ಜತೆ ಪ್ಲಾಸ್ಟಿಕ್ ಚೀಲಗಳು ನದಿ ಒಡಲು ಸೇರುವ ಸಾಧ್ಯತೆ ಹೆಚ್ಚಿದೆ. ಜತೆಗೆ ಸಮೀಪದಲ್ಲಿರುವ ಹೊಲ ಗದ್ದೆಗಳಲ್ಲಿ ಗಾಳಿಯ ರಭಸಕ್ಕೆ ಹಾರಿ ಹೋಗಿ ಕೃಷಿ ಚಟುವಟಿಕೆಗೂ ತೊಂದರೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಕೂಡಲೇ ಗುತ್ತಿಗೆದಾರ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಕೃಷಿಕರು ಒತ್ತಾಯಿಸಿದ್ದಾರೆ.

ಸರ್ಕಾರಿ ಕಾಮಗಾರಿ ನಡೆಸುತ್ತಿರುವ ಜನರೇ ಇಂತಹ ಬೇಜವಾಬ್ದಾರಿ ಕೆಲಸ ನಡೆಸುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗೋಣಿಚೀಲಗಳಲ್ಲದೇ ಇನ್ನೂ ಹಲವು ಕಸ ಕಡ್ಡಿಗಳನ್ನೂ ಎಸೆದು ಪರಿಸರ ನಾಶ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದ್ದು ಕೂಡಲೇ ಈ ಕಸಗಳ ವಿಲೇವಾರಿ ಮಾಡಬೇಕೆಂದು ಜನ ಆಗ್ರಹಿಸಿದ್ದಾರೆ.

ದೇಶದೆಲ್ಲೆಡೆ ಸ್ವಚ್ಛ ಭಾರತದ ಕಲ್ಪನೆಯಿದ್ದರೂ ಇಲ್ಲಿ ಕಾಮಗಾರಿ ನಡೆಸುವ ಕಾರ್ಮಿಕರು ಮಾತ್ರ ಇನ್ನೂ ಎಚ್ಚರವಾಗಿಲ್ಲ. ಕಾಮಗಾರಿ ನಡೆಸಿದ ಸ್ಥಳದ ಪಕ್ಕ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲವನ್ನು ಎಸೆದಿರುವುದು ತಪ್ಪು. ಕೂಡಲೇ ಅದನ್ನು ತೆರವು ಮಾಡಬೇಕಾಗಿದೆ.
ಸುರೇಶ್ ಶೆಟ್ಟಿ, ಗ್ರಾಮಸ್ಥ

ನದಿ ಪಕ್ಕ ಪ್ಲಾಸ್ಟಿಕ್ ಗೋಣಿ ಚೀಲಗಳನ್ನು ಎಸೆದಿರುವುದರಿಂದ ಸಮಸ್ಯೆ ಉಂಟಾಗುತ್ತದೆ. ಕೂಡಲೇ ಗುತ್ತಿಗೆದಾರರಿಗೆ ತಿಳಿಸಿ ಎಸೆದ ಪ್ಲಾಸ್ಟಿಕ್ ಚೀಲಗಳನ್ನು ತೆರವು ಮಾಡುವಲ್ಲಿ ಕ್ರಮ ಕೈಗೊಳ್ಳುತ್ತೇವೆ.
ಶುಭಾ ಪಿ.ಶೆಟ್ಟಿ, ಮುಂಡ್ಕೂರು ಗ್ರಾಪಂ ಅಧ್ಯಕ್ಷೆ

Leave a Reply

Your email address will not be published. Required fields are marked *