ಚಳ್ಳಕೆರೆ: ತಾಲೂಕಿನ ಗೌರಸಮುದ್ರ ಮಾರಮ್ಮ ದೇವಿಯ ಸನ್ನಿಧಿಯಲ್ಲಿ ಬುಧವಾರ ತಾಲೂಕು ಆಡಳಿತದಿಂದ ಎಣಿಕೆ ಮಾಡಲಾದ ಹುಂಡಿಯಲ್ಲಿ 10 ಲಕ್ಷ 66 ಸಾವಿರದ 441ರೂ. ಕಾಣಿಕೆ ಭಕ್ತರಿಂದ ದೇವಿಗೆ ಸಮರ್ಪಣೆಯಾಗಿದೆ ಎಂದು ತಹಸೀಲ್ದಾರ್ ರೆಹಾನ್ ಪಾಷಾ ಹೇಳಿದರು.
ಸೆ.1ರಿಂದ ಜಾತ್ರೆಯ ಪೂಜಾ ಕಾರ್ಯಗಳು ಆರಂಭವಾಗಲಿದ್ದು, ಸೆ.3ರಂದು ಅದ್ದೂರಿಯಾಗಿ ನೆರವೇರಲಿರುವ ಉತ್ಸವಕ್ಕೆ ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಪಂ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ ನಿರ್ದೇಶನದಂತೆ ಜಾತ್ರಾ ಭದ್ರತೆಗಾಗಿ ಅಳವಡಿಸಿರುವ ನಿಯಮಗಳನ್ನು ಭಕ್ತರು ಪಾಲಿಸಬೇಕಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಎಂ.ಓಬಣ್ಣ ಮಾತನಾಡಿ, ಜಾತ್ರೆ ನಡೆಯುವ ತುಮಲಿನಲ್ಲಿ ಮತ್ತು ಗ್ರಾಮದಲ್ಲಿ ಭಕ್ತರ ಕುಡಿವ ನೀರಿನ ಅನುಕೂಲಕ್ಕಾಗಿ ಈಗಾಗಲೇ ಎರಡು ಬೋರ್‌ವೆಲ್ ಕೊರೆಸಿದ್ದು ದೇವಿಯ ಆಶೀರ್ವಾದದಿಂದ ಉತ್ತಮ ನೀರು ಲಭ್ಯವಾಗಿದೆ. ಜಾತ್ರಾ ಸ್ಥಳದಲ್ಲಿ ಸ್ವಚ್ಛತೆ ಮತ್ತು ಬೆಳಕಿನ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಮತ್ತು ನೆರೆರಾಜ್ಯಗಳಿಂದ ಭಕ್ತರ ಮಹಾಪೂರವೇ ಹರಿದು ಬರಲಿದ್ದು, ದೊಡ್ಡ ಜಾತ್ರೆ ಆಗಿರುವ ಕಾರಣ, ಹೆಚ್ಚಿನ ಭದ್ರತೆ ಮತ್ತು ಮೂಲಸೌಕರ್ಯದ ಅನುಕೂಲಕ್ಕೆ ಸ್ಥಳೀಯ ಪಂಚಾಯಿತಿ ಜವಾಬ್ದಾರಿ ವಹಿಸಿಕೊಂಡಿದೆ ಎಂದು ತಿಳಿಸಿದರು.
ವಿಶೇಷ: ಗೌರಸಮುದ್ರ ಗ್ರಾಮದಲ್ಲಿ ಮಾರಮ್ಮ ದೇವಿಯೇ ಪ್ರಧಾನವಾಗಿದ್ದು, ದೇವಿಯ ಉತ್ಸವ ಹೊರತುಪಡಿಸಿ ಗಣೇಶ, ಆಂಜನೇಯ, ಹೋಳಿಗೆಮ್ಮ ಹೀಗೆ ಯಾವುದೇ ಜಾತ್ರೆ ಸಂಭ್ರಮ ನಡೆಸುತ್ತಿಲ್ಲ. ದಸರಾ ಉತ್ಸವದಲ್ಲೂ ದೇವಿಯನ್ನೇ ಆರಾಧನೆ ಮಾಡಲಾಗುತ್ತಿದೆ. ಇನ್ನು ಸೆಪ್ಟಂಬರ್ ತಿಂಗಳಲ್ಲಿ ದೊಡ್ಡ ಮಾರಮ್ಮನ ಜಾತ್ರೆ ಬಳಿಕ ಮರಿ ಪರಿಷೆಯಲ್ಲೂ ದೇವಿಯ ಉತ್ಸವವೇ ಗ್ರಾಮದ ಸಂಭ್ರಮವಾಗಿರುತ್ತದೆ.
ತಹಸೀಲ್ದಾರ್ ಸಮ್ಮುಖದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯಕ್ಕೆ ಕಂದಾಯ ನಿರೀಕ್ಷಕ ಪಿ.ಎಲ್.ಲಿಂಗೇಗೌಡ ಸೇರಿ ತಳಕು ಹೋಬಳಿ ವ್ಯಾಪ್ತಿಯ ಗ್ರಾಮಾಧಿಕಾರಿಗಳು ಕಾರ್ಯ ನಿರ್ವಹಿಸಿದರು. ಅರ್ಚಕ ಚಿದಾನಂದಪ್ಪ, ಗ್ರಾಪಂ ಸದಸ್ಯರಾದ ಪಿ.ಶಶಿಕುಮಾರ್, ಜಿ.ಎಂ.ಈರಣ್ಣ, ಭಾಗ್ಯಮ್ಮ, ಸುಭಾಷಿಣಿ, ಬೊಮ್ಮಣ್ಣ ಇದ್ದರು.