ಈ ಜಗತ್ತಿನಲ್ಲಿಯ ಮನುಜನ ಬದುಕನ್ನು, ಭಾರತೀಯ ಸಂದರ್ಭದಲ್ಲಿ ನಮ್ಮ ಯೋಗಿವರೇಣ್ಯರು ಮತ್ತು ಮುನಿಪುಂಗವರು ವಿವಿಧ ರೀತಿ ಯಲ್ಲಿ ವ್ಯಾಖ್ಯಾನಿಸಿದ್ದಾರೆ. ನಮ್ಮ ದಾಸವರೇಣ್ಯರಂತೂ ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಎಂದು ಅದರ ನಶ್ವರತೆಯ ಬಗ್ಗೆ ಕ್ಲುಪ್ತ ಅರ್ಥ ನೀಡಿದ್ದಾರೆ.
ಮನುಷ್ಯ ಈ ಜಗತ್ತಿನ ಭೌತಿಕತೆಗೆ ಅದೆಷ್ಟು ಗಟ್ಟಿಯಾಗಿ ಅಂಟಿಕೊಂಡಿರುವನೆಂದರೆ, ಸ್ವರ್ಗ ರಾಜ್ಯ ಪ್ರವೇಶಿಸಬಲ್ಲ ಆಧ್ಯಾತ್ಮಿಕತೆಯ ಬಗ್ಗೆ ಆತನಿಗೆ ಯೋಚಿಸಲೂ ಪುರುಸೊತ್ತಿಲ್ಲದಾಗಿದೆ. ಒಂದಿಲ್ಲೊಂದು ದಿನ ತಾನು ಈ ಜಗತ್ತಿಗೆ ವಿದಾಯ ಹೇಳಲೇಬೇಕೆಂದು ಅರಿತಿದ್ದರೂ ದೈವತ್ವದ ಬಗ್ಗೆ ಅಲಕ್ಷ್ಯ ಧೋರಣೆ ತಳೆಯುತ್ತ ಸಾವು ಸಮೀಪಿಸಿದಾಗ ಅಧೀರನಾಗುತ್ತಾನೆ.
ಮಾನವ ಬದುಕಿನ ಸತ್ಯ-ಮಿಥ್ಯೆಯ ಬಗ್ಗೆ ಯೇಸು ತನ್ನದೇ ರೀತಿಯಲ್ಲಿ ನಿರೂಪಿಸಿದ್ದಾನೆ. ಶ್ರೀಮಂತ ಯುವಕನೊಬ್ಬ ಅವರ ಬಳಿಗೆ ಆಗಮಿಸಿ ಸ್ವರ್ಗ ಸಾಮ್ರಾಜ್ಯ ಪ್ರವೇಶಿಸಲು ಏನು ಮಾಡಬೇಕೆಂದು ಕೇಳುತ್ತಾನೆ. ಆಗ ಯೇಸು ನಿನ್ನ ಆಸ್ತಿ-ಪಾಸ್ತಿಯೆಲ್ಲ್ಲನ್ನೂ ಬಡಬಗ್ಗರಿಗೆ ದಾನಮಾಡಿ, ನನ್ನನ್ನು ಹಿಂಬಾಲಿಸು ಎಂದು ಆದೇಶಿಸುತ್ತಾನೆ.
ಆ ಯುವಕ ಪೆಚ್ಚುಮೋರೆ ಹಾಕಿ ಅಲ್ಲಿಂದ ನಿರ್ಗಮಿಸುತ್ತಾನೆ. ಆಗ ಯೇಸು ನೆರೆದವರಿಗೆ, ಒಂಟೆ ಯೊಂದು ಚಿಕ್ಕ ಸೂಜಿಯ ಕಣ್ಣಿನೊಳಗೆ ಪ್ರವೇಶಿಸಬಹುದು, ಆದರೆ, ಶ್ರೀಮಂತನೊಬ್ಬ ಸ್ವರ್ಗ ಪ್ರವೇಶಿಸುವುದು ಬಹಳ ತ್ರಾಸದಾಯಕ ಎನ್ನುತ್ತ, ಸ್ವರ್ಗದ ಶ್ರೇಷ್ಠತೆ ಹಾಗೂ ಬದುಕಿನ ನಿಗೂಢತೆಯ ಬಗ್ಗೆ ತಿಳಿ ಹೇಳುತ್ತಾನೆ.
ಇನ್ನೊಂದು ಸಂದರ್ಭದಲ್ಲಿ ಯೇಸು, ಬಡವರು ಭಾಗ್ಯ ವಂತರು; ಅವರಿಗೆ ಸ್ವರ್ಗ ಪ್ರವೇಶ ಸುಲಭ ಎಂದಿದ್ದಾನೆ. ಅಂದರೆ, ನಾವು ಭೌತಿಕತೆ ಮತ್ತದರ ಉಪ-ಉತ್ಪನ್ನಗಳಾದ ವಸ್ತುಗಳಿಗೆ ಹೆಚ್ಚೆಚ್ಚು ವಾಲಿದಷ್ಟೂ ಸ್ವರ್ಗ ದ್ವಾರದಿಂದಲೂ ದೂರ ಉಳಿದು ಕಷ್ಟ-ಸಂಕಷ್ಟಗಳ ನರಕದೆಡೆಗೆ ಸಾಗುತ್ತಿರುತ್ತೇವೆ. ಜಗತ್ತಿನ ಇಡೀ ಕ್ರೖೆಸ್ತ ಸಮೂಹ ತನ್ನ ವಾರ್ಷಿಕ ಉಪವಾಸ-ತ್ಯಾಗಗಳ ತಪಸ್ಸು ಕಾಲವನ್ನು ಆಚರಿಸುತ್ತಿರುವ ಈ ವೇಳೆಯಲ್ಲಿ ಆಗಾಗ ಲೌಕಿಕ ಬದುಕಿಗೆ ವಿಮುಖರಾಗಿ ಕಿಂಚಿತ್ತಾದರೂ ದೇವರು, ಆತನ ಅಧ್ಯಾತ್ಮಿಕ ಸೃಷ್ಟಿಯತ್ತ ಅಭಿಮುಖರಾಗುವುದು ಶ್ರೇಯ ಸ್ಕರವಾಗಿದೆ.